ಸೌತಡ್ಕ : ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ‘ಅಷ್ಟೋತ್ತರ ಸಹಸ್ರನಾಳಿಕೇರ ಶ್ರೀ ಮಹಾಗಣಪತಿ ಹೋಮ’
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಅಷ್ಟೋತ್ತರ ಸಹಸ್ರನಾಳಿಕೇರ ಶ್ರೀ ಮಹಾಗಣಪತಿ ಹೋಮ, ತಾಯಂದಿರ ಹಾಲುಣಿಸುವ ಕೊಠಡಿಯ ಲೋಕಾರ್ಪಣೆ ಹಾಗೂ ಕ್ಷೇತ್ರ ಪರಿಚಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು ನಡೆಯಿತು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಅಷ್ಟೋತ್ತರ ಸಹಸ್ರನಾಳಿಕೇರ ಶ್ರೀ ಮಹಾಗಣಪತಿ ಹೋಮ ನಡೆಯಿತು.
ರಾಜ್ಯ ಧಾರ್ಮಿಕ ಇಲಾಖೆಯ ವತಿಯಿಂದ ನಿರ್ಮಿಸಲಾದ ತಾಯಂದಿರು ಮಕ್ಕಳಿಗೆ ಹಾಲುಣಿಸುವ ಕೊಠಡಿಯನ್ನು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ದೀಪ ಬೆಳಗಿಸುವುದರ ಮೂಲಕ ಲೋಕಾರ್ಪಣೆಗೊಳಿಸಿದರು. ಕ್ಷೇತ್ರ ಪರಿಚಯ ಪುಸ್ತಕವನ್ನು ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮುಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯರು ಬಿಡುಗಡೆಗೊಳಿಸಿ ಕ್ಷೇತ್ರದಲ್ಲಾದ ಅಭಿವೃದ್ಧಿ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿದರು.
ಕ್ಷೇತ್ರದ ವಾಸ್ತುತಜ್ಞ ಜಗನ್ನಿವಾಸ ರಾವ್ ಪುತ್ತೂರು ಮಾತನಾಡಿ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯವು ಅತ್ಯಂತ ಅಲ್ಪಸಮಯದಲ್ಲಿ ಹೆಚ್ಚು ಅಭಿವೃದ್ಧಿಯನ್ನು ಕಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಮಲ್ಲಿಕಾ ಪ್ರಶಾಂತ್ ಪಕ್ಕಳ, ಕೊಕ್ಕಡ ಕೆನರಾ ಬ್ಯಾಂಕಿನ ಪ್ರಬಂಧಕ ಅಂಕಿತ್ ಸಿಂಗ್, ಬೆಳ್ತಂಗಡಿ ಎಪಿಎಂಸಿ ಕಾರ್ಯದರ್ಶಿ ರವೀಂದ್ರ, ಸೌತಡ್ಕ ಶ್ರೀಮಹಾಗಣಪತಿ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕ್ಷೇತ್ರದ ಆಡಳಿತ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ಸ್ವಾಗತಿಸಿದರು. ಬಾಲಕೃಷ್ಣ ನೈಮಿಷ ವಂದಿಸಿದರು.