ಆಟೋ ಚಾಲಕನ ಮೇಲೆ ದುಷ್ಕರ್ಮಿಗಳಿಂದ ತಲವಾರು ದಾಳಿ

ಬಂಟ್ವಾಳ : ಆಟೋ ಚಾಲಕನೋರ್ವನನ್ನು ದುಷ್ಕರ್ಮಿಗಳು ಹತ್ಯೆ ಮಾಡಲು ಯತ್ನಿಸಿದ ಘಟನೆ ಬಂಟ್ವಾಳದ ವಿಟ್ಲದ ಬೋಳಂತೂರು ಸಮೀಪದ ನಾಡಾಜೆ ಎಂಬಲ್ಲಿ ನಡೆದಿದೆ. ಬೋಳಂತೂರು ಸಮೀಪದ ಗುಳಿ ನಿವಾಸಿಯಾಗಿರುವ ಅಬೂಬಕ್ಕರ್ ಎಂಬವರ ಪುತ್ರ ಆಟೋ ಚಾಲಕ ಶಾಕೀರ್ (30) ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಯುವಕ. ನಿನ್ನೆ ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಕಬಡ್ಡಿ ಮ್ಯಾಚ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಶಾಕೀರ್‍ನನ್ನು ಬೋಳಂತೂರು ಸಮೀಪದ ನಾಡಾಜೆ ರಸ್ತೆಯಲ್ಲಿ ತಡೆದು ನಾಲ್ವರು ದುಷ್ಕರ್ಮಿಗಳಿಂದ ತಲವಾರಿನಿಂದ ದಾಳಿ ನಡೆಸಿದ್ದು, ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಈತ ಇದೀಗ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ. ಈತನ ಪರಿಚಯಸ್ಥರೇ ಈ ಹೇಯ ಕೃತ್ಯ ಎಸಗಿರಬೇಕೆಂದು ಸ್ಥಳೀಯರು ಆರೋಪಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.