ಬೆಳ್ತಂಗಡಿ: ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ: ಕಾರಿನಲ್ಲಿದ್ದ ಓರ್ವರಿಗೆ ಗಾಯ
ಬೆಳ್ತಂಗಡಿ ತಾಲೂಕಿನ ನೆರಿಯ-ಕಕ್ಕಿಂಜೆರಸ್ತೆಯ ಬಯಲು ಬಸ್ತಿ ಎಂಬಲ್ಲಿ ಒಂಟಿ ಸಲಗವೊಂದು ಕಾರಿಗೆ ಹಾನಿ ಮಾಡಿ ಓರ್ವನನ್ನು ಗಾಯಗೊಳಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಆನೆಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ಆಗಮಿಸಿದ ಆಲ್ಟೋ ಕಾರನ್ನು ಚಾಲಕ ಆತಂಕಗೊಂಡು ನಿಲ್ಲಿಸಿದ್ದಾರೆ. ನಿಂತ ಕಾರಿನ ಬಳಿಗೆ ಆಗಮಿಸಿದ ಆನೆಯು ತನ್ನ ಸೊಂಡಿಲ ಮೂಲಕ ಕಾರನ್ನು ಎತ್ತಿ ಹಾನಿ ಮಾಡಿದೆ. ಕಾರಿನಲ್ಲಿ ಮಗು ಸಹಿತ ಆರು ಮಂದಿ ಪ್ರಯಾಣಿಸುತ್ತಿದ್ದು, ಘಟನೆಯಲ್ಲಿ ಓರ್ವರು ಗಾಯಗೊಂಡಿದ್ದಾರೆ. ಆನೆಯು ಘಟನೆಗೆ ಮೊದಲು ಈ ಪರಿಸರದ ಜನನಿ ನಿಬಿಡ ಪ್ರದೇಶಗಳಲ್ಲಿ ಓಡಾಟ ನಡೆಸಿದ್ದು ಒಬ್ಬರ ಮನೆಯಂಗಳಕ್ಕೂ ಹೋಗಿದೆ. ಅಲ್ಲದೆ ರಸ್ತೆ ಬದಿ ಇರುವ ಮನೆಯೊಂದರ ಗೇಟನ್ನು ಮುರಿಯಲು ಯತ್ನಿಸಿದೆ. ಈ ವೇಳೆ ಸುತ್ತಮುತ್ತಲ ಮನೆಯವರು ಬೊಬ್ಬೆ ಹೊಡೆದಿದ್ದು ಆನೆಯು ಮತ್ತೆ ರಸ್ತೆಗೆ ಬಂದಿತ್ತು. ಕಾರನ್ನು ಎತ್ತಿ ಹಾಕಿದ ಆನೆ ಬಳಿಕ ಸಮೀಪದ ರಬ್ಬರ್ ತೋಟದಲ್ಲಿ ಮತ್ತೆ ಕಂಡು ಬಂದಿದೆ. ಈ ವೇಳೆ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಅಟ್ಟಲು ಕ್ರಮ ಕೈಗೊಂಡಿದ್ದಾರೆ.
ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆಗಳಿಂದ ನಿರಂತರ ಕೃಷಿ ಹಾನಿ ಉಂಟಾಗುತ್ತಿದ್ದು,ಇದೇ ಮೊದಲ ಬಾರಿಗೆ ವಾಹನದ ಮೇಲೆ ದಾಳಿ ನಡೆದಿದೆ. ಇದರಿಂದ ತೋಟತ್ತಾಡಿ,ನೆರಿಯ, ಚಾರ್ಮಾಡಿ,ಚಿಬಿದ್ರೆ ಮುಂಡಾಜೆ ಮೊದಲಾದ ಭಾಗಗಳ ಜನರಲ್ಲಿ ಭೀತಿ ಆವರಿಸಿದೆ. ಚಾರ್ಮಾಡಿ ಗ್ರಾ.ಪಂ.ವ್ಯಾಪ್ತಿಯ ತೋಟತ್ತಾಡಿ ಪರಿಸರದಲ್ಲಿ ಸೋಮವಾರ ಬೆಳಗ್ಗೆ ಕಾಡಾನೆ ಕಂಡುಬಂದಿತ್ತು.