ಮಂಗಳೂರು: ಬಿಎನ್‍ಐ ಮಂಗಳೂರು ಬಿಗ್ ಬ್ರ್ಯಾಂಡ್ಸ್ ಎಕ್ಸ್ ಪೋ – 2023ಕ್ಕೆ ಚಾಲನೆ
ಬಿಎನ್‍ಐ ಮಂಗಳೂರು ವತಿಯಿಂದ ಆಯೋಜಿಸಲಾಗಿರುವ ಬಿಗ್ ಬ್ರ್ಯಾಂಡ್ ಎಕ್ಸ್‍ಪೋ-2023 ಕ್ಕೆ ನಗರದ ಟಿಎಂಎಪೈ ಕನ್ವೆನ್ಷನ್ ಸೆಂಟರ್‍ನಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ಬಿಎನ್‍ಐ ಮಂಗಳೂರು ಬಿಸ್‍ನೆಸ್ ನೆಟ್ವರ್ಕ್‍ನ ಒಂದು ಭಾಗವಾಗಿದೆ. ಇದು ವಿಶ್ವದಾದ್ಯಂತ 79 ದೇಶಗಳಲ್ಲಿ 3.11 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಉದ್ಯಮಿಗಳಿಗೆ ನೆಚ್ಚಿನ ವ್ಯಾಪಾರ ಜಾಲವಾಗಿದೆ. ಮಂಗಳೂರಿನ ಆಯ್ದ ವ್ಯವಹಾರಗಳಿಗೆ ಮಾನ್ಯತೆ ನೀಡುವ ಉದ್ದೇಶದಿಂದ ಬಿಗ್ ಬ್ರ್ಯಾಂಡ್ಸ್ ಎಕ್ಸ್ ಪೋ ಪರಿಕಲ್ಪನೆಯನ್ನು ಪ್ರಾರಂಭಿಸಲಾಗಿತ್ತು.
ಇದೀಗ ಎರಡನೇ ಬಾರಿಗೆ ಬಿಎನ್‍ಐ ಬಿಗ್ ಬ್ರ್ಯಾಂಡ್ ಎಕ್ಸ್‍ಪೋವನ್ನು ಆಯೋಜಿಸುತ್ತಿದ್ದು, ನಗರದ ಟಿಎಂಎಪೈ ಕನ್ವೆನ್ಷನ್ ಸೆಂಟರ್‍ನಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. ಬಿಎನ್‍ಐ ಬಿಗ್ ಬ್ರ್ಯಾಂಡ್ ಎಕ್ಸ್ ಪೋ ವನ್ನು ಭಾರತ್ ಗ್ರೂಪ್‍ನ ಎಂಡಿ ಸುಬ್ರಾಯ ಎಂ ಪೈ ಹಾಗೂ ಶಾಸಕರಾದ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು.
ಬಿಎನ್‍ಐ ಮಂಗಳೂರಿನ ಎಕ್ಸಿಕ್ಯೂಟಿವ್ ಡೆರೆಕ್ಟರ್ ಗಣೇಶ್ ಎನ್. ಶರ್ಮ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಂಗಳೂರಿನ ಎಲ್ಲಾ ಉದ್ಯಮಿಗಳಿಗೆ ಅವರ ವ್ಯವಹಾರವನ್ನು ಹೆಚ್ಚಿಸಬೇಕೆಂಬ ಉದ್ದೇಶದಿಂದ ಎಕ್ಸ್ ಪೋ ವನ್ನು ಆಯೋಜಿಸಲಾಗಿದೆ. ಉದ್ಯಮಿಗಳು ತಮ್ಮ ಹೊಸ ಹೊಸ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸುವುದರಿಂದ ಜನರಿಗೆ ಅದರ ಬಗ್ಗೆ ಹೆಚ್ಚು ಮಾಹಿತಿ ಸಿಗುತ್ತದೆ ಮತ್ತು ಉದ್ಯಮ ಇನ್ನಷ್ಟು ಯಶಸ್ವಿಯಾಗಲು ಸಹಕಾರಿಯಾಗಲಿದೆ ಎಂದರು.
ಭಾರತ್ ಗ್ರೂಪ್‍ನ ಎಂಡಿ ಸುಬ್ರಾಯ ಎಂ ಪೈ ಅವರು ಮಾತನಾಡಿ, ಮಂಗಳೂರಿನ ಎಲ್ಲಾ ಕ್ಷೇತ್ರದ ಉದ್ಯಮಿಗಳು ಒಟ್ಟಾಗಿ ಸೇರಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದ್ದು, ಎಲ್ಲಾ ಉದ್ಯಮಗಳು ಒಂದೇ ಸೂರಿನಡಿ ಲಭ್ಯವಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಕ್ಸ್ ಪೋ ದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದರು.
ಶಾಸಕರಾದ ವೇದವ್ಯಾಸ್ ಕಾಮತ್ ಅವರು ಮಾತನಾಡಿ, ಕಳೇದ 4-5 ವರ್ಷಗಳಿಂದ ಬಿಎನ್‍ಐ ಮಂಗಳೂರು ಬಹುದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವ ಸಂಸ್ಥೆಯಾಗಿದ್ದು, ಎಕ್ಸ್‍ಪೋ ದ ಮೂಲಕ 120ಕ್ಕೂ ಹೆಚ್ಚಿನ ಮಳಿಗೆಗಳಿಂದ ಮಂಗಳೂರಿನ ಜನತೆಗೆ ಹಾಗೂ ಉದ್ಯಮಿಗಳಿಗೆ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದರು.ಇದೇ ವೇಳೆ ಕಾರ್ಯಕ್ರಮದ ಪ್ರಾಯೋಜಕರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಬಿಗ್ ಬ್ರಾಂಡ್ಸ್ ಎಕ್ಸ್‍ಪೋ ದ ಚೇರ್‍ಮಾನ್ ಮೋಹನ್‍ರಾಜ್ ಅವರು ಸ್ವಾಗತಿಸಿ, ನವನೀತ್ ಶೆಟ್ಟಿ ಕದ್ರಿ ಅವರು ನಿರೂಪಿಸಿ, ಕಿರಣ್ ಶ್ಯಾಮ್ ಅವರು ವಂದಿಸಿದರು.