ಕುಂದಾಪುರ: ಡಿ.19ರಂದು ಎನ್‍ಪಿಎಸ್ ವಿರುದ್ಧ ಸರ್ಕಾರಿ ನೌಕರರ ಮುಷ್ಕರ

ಎಪ್ರಿಲ್ 1, 2006ರಿಂದ ನಿಯೋಜನೆಗೊಂಡ ಸರ್ಕಾರಿ ನೌಕರರಿಗೆ ಸರ್ಕಾರ ನಿಗಧಿಪಡಿಸಿದ ಷೇರು ಮಾರುಕಟ್ಟೆ ಆಧಾರಿತ ಪಿಂಚಣಿ ಯೋಜನೆಯಾದ ನ್ಯಾಷನಲ್ ಪೆನ್ಷನ್ ಸ್ಕೀಂ (ಓPS) ವಿರೋಧಿಸಿ ಎನ್.ಪಿ.ಎಸ್. ನೌಕರರ ಹೋರಾಟ ವೇಗ ಪಡೆಯುತ್ತಿದೆ. ನವೆಂಬರ್ 23ರಂದು ಉಡುಪಿಯಲ್ಲಿ ನಡೆದ ಕಾಲ್ನಡಿಗೆ ಪ್ರತಿಭಟನೆ ಯಶಸ್ವಿಯಾದ ಬೆನ್ನಲ್ಲೇ ಇದೀಗ ರಾಜ್ಯ ಮಟ್ಟದ ಸರ್ಕಾರಿ ಎನ್ .ಪಿ.ಎಸ್ ನೌಕರರು ‘ಮಾಡು ಇಲ್ಲವೇ ಮಡಿ’ ಎನ್ನುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಡಿಸೆಂಬರ್ 19ರಂದು ಪ್ರತಿಭಟನೆ ನಡೆಯಲಿದ್ದು ರಾಜ್ಯದಲ್ಲಿರುವ ಎಲ್ಲಾ ಎನ್.ಪಿ.ಎಸ್. ಸರ್ಕಾರಿ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಎನ್.ಪಿ.ಎಸ್. ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ರಾಘವ ಶೆಟ್ಟಿ ತಿಳಿಸಿದ್ದಾರೆ.

ಅವರು, ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪೂರ್ವಭಾವೀ ಸಭೆಯ ಬಳಿಕ ಮಾತನಾಡಿದರು.ಸಂಘಟನೆಯ ತಾಲೂಕು ಅಧ್ಯಕ್ಷ ಹರೀಶ್ ಶೆಟ್ಟಿ ಮಾತನಾಡಿ, ಎನ್.ಪಿ.ಎಸ್.ನಿಂದ ಸರ್ಕಾರಿ ನೌಕರರ ಪಿಂಚಣಿಯ ಮೇಲೆ ನೇರ ಪರಿಣಾಮ ಬೀರಲಿದ್ದು, ಸರ್ಕಾರದ ಕಣ್ಣು ತೆರೆಸುವಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.

ಗ್ರಾಮ ಲೆಕ್ಕಾಧಿಕಾರಿ ದೀಪಾ ಮಾತನಾಡಿ, ಮಹಿಳಾ ನೌಕರರಿಗೆ ತನ್ನ ಕುಟುಂಬ, ಮಕ್ಕಳ ಶಿಕ್ಷ, ಮನೆ ನಿರ್ವಹಣೆಯಂತಹ ಕೆಲಸಗಳ ನಡುವೆಯೂ ಎನ್.ಪಿ.ಎಸ್. ನೀತಿಯನ್ನು ವಿರೋಧಿಸಿ ಹಳೆಯ ಪಿಂಚಣಿ ನೀತಿಯನ್ನು ಅನುಷ್ಟಾನಗೊಳಿಸಲು ಸರ್ಕಾರವನ್ನು ಒತ್ತಾಯಿಸುವ ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

Related Posts

Leave a Reply

Your email address will not be published.