ಬ್ರಹ್ಮಾವರದಲ್ಲಿ ದೇವರ ಆಭಿಷೇಕಕ್ಕೂ ನೀರಿನ ಕೊರತೆ

ಬ್ರಹ್ಮಾವರ : ದೇವಾಲಯಗಳ ನಗರ ಬಾರಕೂರಿನಲ್ಲಿ ದೇವರ ಅಭಿಷೇಕಕ್ಕೆ ಕೂಡಾ ನೀರಿನ ಕೊರತೆ ಕಾಡುತ್ತಿದೆ. ಅತೀ ಪ್ರಾಚೀನ ಸೀಮೆಯ ಅಧಿ ದೇವರಾದ ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುರಾತನ ತೀರ್ಥ ಬಾವಿಯಲ್ಲಿ ನೀರು ಬತ್ತಿ ಹೋಗಿ ಅಭಿಷೇಕ ಪ್ರೀಯ ಶಿವನಿಗೆ ಕೂಡಾ ನೀರಿನ ಕೊರತೆ ಉಂಟಾಗಿದೆ.
ದೇವಸ್ಥಾನದ ತೀರ್ಥ ಬಾವಿಯಲ್ಲಿ ಬೆಳಿಗ್ಗಿನ ಹೊತ್ತು ಅರ್ದ ಕೊಡಪಾನ ಮುಳುಗುವಷ್ಠು ನೀರು ಇರುವುದನ್ನು ಇಲ್ಲಿನ ಅರ್ಚಕರು ಜೋಪಾನ ಮಾಡಿ ತೆಗೆದು ನಿತ್ಯ ಪೂಜೆಗೆ ಅಭಿಷೇಕ ಮಾಡುತ್ತಿದ್ದಾರೆ. ನಿತ್ಯ ಪೂಜೆ ನಡೆಯುವ ಬಟ್ಟೆ ವಿನಾಯಕ, ಏಕನಾಥೇಶ್ವರೀ, ಬನ್ನಿ ಮಹಾಕಾಳಿ , ಕಾಳಿಕಾಂಭಾ, ವೇಣುಗೋಪಾಲ ಕೃಷ್ಣ, ವೀರಭದ್ರ, ನಾಗೇಶ್ವರ, ದೇವಸ್ಥಾನಗಳ ತೀರ್ಥ ಬಾವಿಯಲ್ಲಿ ಕೂಡಾ ನೀರು ತಳ ಸೇರಿದೆ. ಇಲ್ಲಿನ ಸೀತಾ ನದಿ ಮತ್ತು ಸ್ವರ್ಣಗೆ ಅಂತರ್ಜಲ ಹೆಚ್ಚಳಕ್ಕೆ ಮಾಡಲಾದ ಕಿಂಡಿ ಅಣೆಕಟ್ಟಿಗೆ ಹಾಕಲಾದ ಕಿಂಡಿಗಳನ್ನು ಮೇ ಅಂತ್ಯಕ್ಕೆ ತೆಗೆಯದ ಕಾರಣ ನೀರು ಬತ್ತಿಹೋಗಿದೆ.
ಬ್ರಹ್ಮಾವರ ಮತ್ತು ಬಾರಕೂರು ಭಾಗದಲ್ಲಿ ಕೆಲವು ಹೊಸ ಕಟ್ಟಡಗಳಲ್ಲಿ ವಾಸ ಮಾಡುವ ಮನೆಗಳಿಗೆ ಕುಡಿಯುವ ನೀರಿಗೂ ತತ್ವಾರ ಬಂದಿದೆ. ಕರಾವಳಿಯಲ್ಲಿ ಹಲವಾರು ನದಿಗಳು ಇದ್ದರೂ ಮೇ ತಿಂಗಳ ಅಂತ್ಯಕ್ಕೆ ಜೀವಜಲಕ್ಕೆ ಪರದಾಡುವ ಪರಿಸ್ಥಿತಿಗೆ ಶಾಶ್ವತ ಪರಿಹಾರ ಮಾಡಬೇಕಾಗಿದೆ.
