ಪುತ್ತೂರು : ಆಶ್ರಯ ಮನೆಗಾಗಿ ಇದ್ದ ಮನೆಯನ್ನೂ ಕೆಡವಿ ಬೀದಿಗೆ ಬಿದ್ದ ಕುಟುಂಬ

ಪುತ್ತೂರು: ಆಶ್ರಯ ಮನೆಯ ಆಸೆಯಲ್ಲಿ, ಇದ್ದ ಮನೆಯನ್ನೂ ಕೆಡವಿ ಬೀದಿಗೆ ಬಿದ್ದ ಬಡ ಕುಟುಂಬವೊಂದು ಪುತ್ತೂರು ತಾಲೂಕಿನ ಮುಂಡೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕಡ್ಯಾ ಎಂಬಲ್ಲಿದೆ. ಮನೆ ಇಲ್ಲದ ಕಾರಣ ಕಳೆದ ಮೂರು ತಿಂಗಳಿನಿಂದ ಈ ಕುಟುಂಬ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಲ್ಲೇ ಬದುಕಬೇಕಾದ ಅನಿವಾರ್ಯ ಸ್ಥಿತಿಯಲ್ಲಿದೆ.

ಕಡ್ಯ ಗ್ರಾಮದ ಮೋನಪ್ಪ ಎಂಬವರ ಕುಟುಂಬ ಆಶ್ರಯ ಮನೆಗಾಗಿ ಕಳೆದ ವರ್ಷ ಗ್ರಾಮ ಪಂಚಾಯತ್‍ಗೆ ಅರ್ಜಿ ಸಲ್ಲಿಸಿತ್ತು. ಇತ್ತೀಚೆಗಷ್ಟೇ ಮೋನಪ್ಪ ಕುಟುಂಬಕ್ಕೆ ಆಶ್ರಯ ಮನೆಯನ್ನು ಪಂಚಾಯತ್ ವತಿಯಿಂದ ಮಂಜೂರು ಮಾಡಲಾಗಿತ್ತು. ಆಶ್ರಯ ಮನೆ ಮಂಜೂರಾದ ಹಿನ್ನಲೆಯಲ್ಲಿ ಇದ್ದ ಮನೆಯನ್ನು ನೆಲಸಮ ಮಾಡಿದ ಕುಟುಂಬ ಪಂಚಾಯತ್ ಹಣ ಬಿಡುಗಡೆಯಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಕೈ ಸಾಲ ಪಡೆದು ಹೊಸ ಮನೆಯ ಅಡಿಪಾಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ.

ಆದರೆ ಅಡಿಪಾಯ ಹಾಕಿ ಮೂರು ತಿಂಗಳು ಕಳೆದರೂ ಮೊದಲ ಕಂತಿನ ಅನುದಾನ ಬಿಡುಗಡೆಯಾಗದ ಕಾರಣ ಮನೆ ನಿರ್ಮಾಣದ ಕೆಲಸವನ್ನು ಮುಂದುವರಿಸಲಾಗದೆ ಅರ್ಧದಲ್ಲೇ ನಿಲ್ಲಿಸಲಾಗಿದೆ. ಹೊಸ ಮನೆಗಾಗಿ ಹಳೆ ಮನೆಯನ್ನು ಮುರಿದು ಹಾಕಿದ್ದ ಮೋನಪ್ಪ ಕುಟುಂಬ ಇದೀಗ ಅತ್ತ ಮನೆಯೂ ಇಲ್ಲ, ಇತ್ತ ಕುಳಿತುಕೊಳ್ಳಲು ಜಾಗವೂ ಇಲ್ಲದ ಸ್ಥಿತಿಯಲ್ಲಿದೆ.

ಮುಂಡೂರು ಪಂಚಾಯತ್‍ಗೆ ಸಂಬಂಧಪಟ್ಟವರು ಈ ಭಾಗಕ್ಕೆ ಭೇಟಿ ನೀಡಿದರೂ ಈ ಕುಟುಂಬದ ಸಮಸ್ಯೆಯ ಬಗ್ಗೆ ಮೌನವಹಿಸಿದೆ. ಇನ್ನೇನು ಮಳೆಗಾಲ ಸಮೀಪಿಸುತ್ತಿದ್ದು, ಮುಂದೆನೂ ಎಂದು ತೋಚದೆ ಕುಟುಂಬ ಮರುಗುತ್ತಿದೆ.

Related Posts

Leave a Reply

Your email address will not be published.