ಬ್ರಹ್ಮಾವರ: ಕೃಷಿ ಗದ್ದೆಯಲ್ಲಿ ಭತ್ತದ ಕಟಾವು ಯಂತ್ರಗಳದ್ದೇ ಸದ್ದು..!
ಬ್ರಹ್ಮಾವರ : ಕರಾವಳಿಯಲ್ಲಿ ಈ ಬಾರಿ ಭತ್ತದ ಬೇಸಾಯ ಮಾಡಿದ ರೈತರಲ್ಲಿ ಕೆಲವು ಭಾಗದಲ್ಲಿ ಉತ್ತಮ ಇಳುವರಿ ಬಂದರೂ ಗದ್ದೆಯಿಂದ ಮನೆಗೆ ತರಲು ಅಕಾಲಿಕ ಮಳೆರಾಯ ತೊಂದರೆ ಕೊಟ್ಟರೂ, ದೀಪಾವಳಿಯ ಬಳಿಕ ಕಟಾವಿಗೆ ವೇಗ ಹೆಚ್ಚಿದೆ.
ಬಹತೇಕ ಕೃಷಿಕರು ಕೂಲಿ ಆಳುಗಳ ಕೊರತೆಯಿಂದ ಯಾಂತ್ರಿಕೃತ ಕಟಾವಿಗೆ ಹೊಂದಿಕೊಂಡ ಕಾರಣ, ನದಿ ತೀರದ ತಗ್ಗು ಪ್ರದೇಶದ ಗದ್ದೆಯಲ್ಲಿ ನೀರು ತುಂಬಿಕೊಂಡ ಕಟಾವು ಯಂತ್ರಗಳು ಗದ್ದೆಯಲ್ಲಿ ಸಂಚರಿಸಲು ಆಗದೆ ಮತ್ತಷ್ಟು ವಿಳಂಬವಾಗಿದೆ. ಬ್ರಹ್ಮಾವರ ಭಾಗದ ಬಾರಕೂರು, ಹಂದಾಡಿ, ನೀಲಾವರ, ಮಟಪಾಡಿ ಹನೆಹಳ್ಳಿಯಲ್ಲಿ ಕಳೆದ ಭಾನುವಾರದಿಂದ ಹಗಲು ರಾತ್ರಿ ಎನ್ನದೆ ಕಟಾವು ನಡೆಯುತ್ತಿದ್ದು, ರೈತ ಬೆಳೆದ ಬೆಳೆಯನ್ನು ಮನೆ ತುಂಬಿಸಿಕೊಳ್ಳುವ ವೇಗ ಹೆಚ್ಚುತ್ತಿದೆ.
ಬಹುತೇಕ ತಮಿಳುನಾಡು ಮತ್ತು ಉತ್ತರ ಕರ್ನಾಟಕ ಭಾಗದ ಕಟಾವು ಯಂತ್ರಗಳು ಗಂಟೆಗೆ 2400 ರೂ ಬಾಡಿಗೆ ಪಡೆಯುತ್ತಿದ್ದರೂ ಮಾನವ ಶಕ್ತಿಯ 10 ಪಟ್ಟು ವೇಗ ಇರುವ ಕಾರಣ ಕಟಾವು ಮತ್ತು ಹುಲ್ಲು ಪಿಂಡಿ ಮಾಡುವುದಕ್ಕೆ ಅನ್ನದಾತ ರೈತ ಯಾಂತ್ರಿಕೃತ ಬೇಸಾಯಕ್ಕೆ ಹೊಂದಿಕೊಳ್ಳಬೇಕಾಗಿದೆ.