`ಭಾರತ ಶಕ್ತಿಶಾಲಿಯಾದಾಗ ಜಗತ್ತಿನಲ್ಲಿ ಶಾಂತಿ’ : ಆರ್‍ಎಸ್‍ಎಸ್ ದಕ್ಷಿಣ ಪ್ರಾಂತ್ಯ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್

ಮಂಗಳೂರು: ಭಾರತ ದೇಶ ಅತ್ಯಂತ ಶಕ್ತಿಶಾಲಿಯಾದಾಗ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ. ನಮ್ಮ ದೇವಸ್ಥಾನ, ಪದ್ಧತಿ, ಪರಂಪರೆಗಳು ಉಳಿಯಬೇಕಾದರೆ ಮೊದಲು ದೇಶ ಉಳಿಯಬೇಕು ಎಂದು ಹೊಸದಿಗಂತ ಪತ್ರಿಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೂ ಆಗಿರುವ ಆರ್‍ಎಸ್‍ಎಸ್ ದಕ್ಷಿಣ ಪ್ರಾಂತ್ಯ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್ ಹೇಳಿದರು.ನಗರದ ಕದ್ರಿಯಲ್ಲಿರುವ ಸುವರ್ಣ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ಶ್ರೀ ಕಾಲಭೈರವ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ಸಂಜೆ ಗೋರಕ್ಷನಾಥ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಮೇಲೆ ಇಂದು ಮೂರು ರೀತಿಯ ಆಕ್ರಮಣಗಳು ನಡೆಯುತ್ತಿವೆ. ಸಾಂಸ್ಕೃತಿಕ ಆಕ್ರಮಣ, ಮತೀಯ ಆಕ್ರಮಣ, ಆರ್ಥಿಕ ದಾಳಿ ಮೂಲಕ ದೇಶವನ್ನು ದುರ್ಬಗೊಳಿಸುವ ಪ್ರಯತ್ನ ನಡೆಯುತ್ತಿದೆ. ಸಾಂಸ್ಕೃತಿಕ ಆಕ್ರಮಣದಿಂದ ವಿವಾಹ ವಿಚ್ಛೇದನ ಹೆಚ್ಚುತ್ತಿದೆ, ಕುಟುಂಬ ಪದ್ಧತಿ ಶಿಥಿಲಗೊಂಡಿದೆ, ಲಿವಿಂಗ್ ರಿಲೇಶನ್ ಹೆಚ್ಚುತ್ತಿದೆ. ಮತಾಂತರದ ಮೂಲಕ ಮತೀಯ ಆಕ್ರಮಣ ನಡೆಯುತ್ತಿದೆ. ಜತೆಗೆ ವಿದೇಶಿ ಮೂಲದ ವಸ್ತುಗಳ ಮಾರಾಟದ ಮೂಲಕ ಆರ್ಥಿಕ ದಾಳಿ ನಡೆಯುತ್ತಿದೆ. ಹಿಂದುಗಳು ಜಾತಿ, ಮತ, ಭಾಷೆಯ ಬೇಧ ಮರೆತು ಒಟ್ಟಾಗುವ ಮೂಲಕ ಈ ಎಲ್ಲ ಆಕ್ರಮಣಗಳನ್ನು ತಡೆದು ದೇಶವನ್ನು ರಕ್ಷಿಸಬೇಕು ಎಂದರು.
ನಮ್ಮ ದೇಶದ ಊರುಗಳನ್ನು ನಾವು ದೇವಸ್ಥಾನದ ಹೆಸರಿನಿಂದ ಕರೆಯುತ್ತೇವೆ. ಊರಿನ ಹೆಸರು ಹೇಳಿದಾಕ್ಷಣ ನಮಗೆ ಅಲ್ಲಿನ ದೇವಸ್ಥಾನಗಳು ನೆನಪಿಗೆ ಬರುತ್ತದೆ. ಇದು ಉತ್ತಮ ಸಮಾಜದ ಲಕ್ಷಣ. ಕದ್ರಿಯ ಕಾಲಭೈರವ ದೇವಸ್ಥಾನವೂ ಸುಂದರವಾಗಿ ಮೂಡಿಬಂದಿದೆ. ದೇವಾಲಯದೊಳಗೆ ಪ್ರವೇಶಿಸಿದಾಗ ಪವಿತ್ರ ಭಾವನೆ ಮೂಡುತ್ತದೆ. ಮಂಗಳೂರಿಗೆ ಭೇಟಿ ನೀಡುವ ಎಲ್ಲರೂ ಈ ದೇವಾಲಯವನ್ನು ವೀಕ್ಷಿಸಬೇಕು ಎಂದರು
ಕರ್ನಾಟಕ ನಾಥಪಂಥ ಪ್ರಚಾರ ಸಮಿತಿ ಅಧ್ಯಕ್ಷ ಡಾ. ಪಿ. ಕೇಶವನಾಥ್ ಅಧ್ಯಕ್ಷತೆ ವಹಿಸಿದ್ದರು. ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆರ್ಚಕ ಕೃಷ್ಣ ಅಡಿಗ, ರೈ ಎಸ್ಟೇಟ್ ಅಂಡ್ ಬಿಲ್ಡರ್ಸ್‍ನ ಅಶೋಕ್ ರೈ, ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಸಿ. ನಾೈಕ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಶಕೀಲಾ ಕಾವ, ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃದ್ಧಿ ಮಹಾಮಂಡಲದ ಅಧ್ಯಕ್ಷ ಶಿವಾಜಿ ಡಿ. ಮಧೂರ್‍ಕರ್, ವಕೀಲ ಸಿ. ಕೆ. ರವಿಪ್ರಸನ್ನ, ಕೋಡಿಕಲ್ ಕುರುವಾಂಬ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಮಹಾಬಲ ಚೌಟ, ಬೆಂಗಳೂರು ನಾಥ ಪಂಥಜೋಗಿ ಮಹಾಸಭಾ ಅಧ್ಯಕ್ಷ ಕೆ. ಎನ್. ರಾಜಶೇಖರ್, ಬೋಳಾರ ಹಳೆಕೋಟೆ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಕುಮಾರ್ ಬಿ., ಶಿವಮೊಗ್ಗ ಆರ್‍ಟಿಒ ಜೆ. ಪಿ. ಗಂಗಾಧರ್, ಲೋಟಸ್ ಬಿಲ್ಡರ್ಸ್‍ನ ಜೀತೇಂದ್ರ ಕೊಟ್ಟಾರಿ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬಾಲಕೃಷ್ಣ ಕೊಟ್ಟಾರಿ, ಉದಯ ಕುಮಾರ್ ಬಜಗೋಳಿ, ಜೋಗಿ ಸಮಾಜದ ಗಂಗಾಧರ ಬಿ. ಅತಿಥಿಯಾಗಿದ್ದರು.
ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಜೋಗಿ ಮಾಲೆಮಾರ್, ಖಜಾಂಚಿ ಶಿವರಾಮ ಜೋಗಿ, ವಿವಿಧ ಸಮಿತಿಗಳ ವಿನಯಾನಂದ ಕಾನಡ್ಕ, ತಾರನಾಥ ಪಡೀಲ್, ಸುಧಾರಕ ಜೋಗಿ ಶಕ್ತಿನಗರ, ಸುಧಾಕರ ರಾವ್ ಪೇಜಾವರ, ಮೋಹನ ಕೊಪ್ಪಲ, ಭಾಸ್ಕರ ಮುಡಿಪು, ಯಶವಂತ, ರವಿ ಭಟ್, ಅಮಿತಾ ಸಂಜೀವ, ಸುಜಾತ ಮೋಹನ್, ಮಮತಾ, ಚಂದ್ರಕಲಾ, ದಿನೇಶ್, ನಮಿತಾ ಜಯರಾಂ, ರೋಹಿತ ಪಚ್ಚನಾಡಿ, ಸುಮನ್ ಕದ್ರಿ, ಸೋಮು, ಕೃಷ್ಣಾನಂದ ನಿತೇಶ್ ಜೋಗಿ ಹಾಗೂ ಸಿದ್ಧಯೋಗಿಗಳು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ ಜೋಗಿ ದತ್ತನಗರ ಸ್ವಾಗತಿಸಿ, ಡಾ. ಚಂದ್ರಶೇಖರ ಜೋಗಿ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ದುಡಿದವರನ್ನು ಗೌರವಿಸಲಾಯಿತು.
ಬ್ರಹ್ಮಕಲಶೋತ್ಸವದ ಕೊನೆಯ ದಿನವಾದ ಇಂದು ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು. ವೈವಿಧ್ಯಮಯ ಸಾಂಸ್ಕøತಿ ಕಾರ್ಯಕ್ರಮಗಳು ನಡೆಯಿತು.
