ಬ್ರಹ್ಮಾವರ : ಕರಾವಳಿಗೆ ಮಾದರಿಯಾದ ಎಳ್ಳಂಪಳ್ಳಿ ಕಿಂಡಿ ಅಣೆಕಟ್ಟು ತುಂಬಿತುಳುಕುವಷ್ಟು ನೀರು ಶೇಖರಣೆ
ಬ್ರಹ್ಮಾವರ : ನೀಲಾವರ ಗ್ರಾಮಪಂಚಾಯತಿ ವ್ಯಾಪ್ತಿಯ ಎಳ್ಳಂಪಳ್ಳಿ ಮತ್ತು ಕಾಡೂರು ನಡುವೆ ಹರಿಯುವ ಸೀತಾನದಿಗೆ ಕಳೆದ ವರ್ಷ ಮೆಟಲ್ ಡೋರ್ ಅಳವಡಿಸಿ ಮಾಡಲಾದ ಕಿಂಡಿ ಅಣೆಕಟ್ಟು ಯಶಸ್ಸು ಕಂಡಿದೆ. ಕರಾವಳಿ ಜಿಲ್ಲೆಯಲ್ಲಿ ಸಾಕಷ್ಟು ಜೀವ ನದಿಗಳು ಇದ್ದರೂ ಎಪ್ರಿಲ್, ಮೇ ತಿಂಗಳಲ್ಲಿ ಕುಡಿಯುವ ನೀರಿಗೆ ಬರ ಇದ್ದ ಕಾರಣ ಸಿಹಿ ನೀರಿನ ನದಿಗಳಿಗೆ ಮರದ ಮತ್ತು ಫೈಭರ್‍ನ ಕಿಂಡಿ ಅಣೆಕಟ್ಟಿನಿಂದ ನೀರು ಸೋರುವ ಸಮಸ್ಯೆಗೆ ಎಳ್ಳಂಪಳ್ಳಿ ಡ್ಯಾಂ ರೈತರ ಮತ್ತು ಕುಡಿಯುವ ನೀರಿನ ಬರಕ್ಕೆ ತೆರೆ ಬೀಳಲಿದೆ.
ಬಹುತೇಕ ಕಡೆಯಲ್ಲಿ 3 ಮೀಟರ್ ಅಗಲದಲ್ಲಿ ಮಾಡಲಾಗುವ ಡ್ಯಾಂ ನಲ್ಲಿ ರೈತರಿಗೆ ಅಥವಾ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಇರದೆ, ಇಲ್ಲಿನ ಡ್ಯಾಂ ನಲ್ಲಿ 2 ಬೃಹತ್ ವಾಹನ ಸಂಚಾರ ಮಾಡುವಷ್ಟು ಅಗಲವಾದ ರಸ್ತೆ ಇದ್ದು ಹಲವಾರು ಗ್ರಾಮಗಳ ಸಂಪರ್ಕದ ಕೊಂಡಿಯಾಗಿದೆ.
ಡಿಸೆಂಬರ ಮೊದಲ ವಾರ ಸಮುದ್ರದಿಂದ ಉಪ್ಪು ನೀರು ನದಿಯೊಂದಿಗೆ ಬೆರೆಯುವ ಮೊದಲು ಕಿಂಡಿಯನ್ನು ಮುಚ್ಚಿ ಸಿಹಿ ನೀರನ್ನು ಹಿಡಿದಿಡಲಾಗುತ್ತದೆ. 3 ದಿನದ ಹಿಂದೆ ಎಳ್ಳಂಪಳ್ಳಿ ಡ್ಯಾಂ ನಲ್ಲಿ ಹೈಡ್ರೋಲಿಕ್ ವ್ಯವಸ್ಥೆಯಲ್ಲಿರುವ ಮೆಟಲ್ ಡೋರ್ ಮೂಲಕ ಬಂದ್ ಮಾಡಿ ನೀರು ಶೇಖರಣೆ ಆಗಿ ಸೋರುವಿಕೆ ಇಲ್ಲದೆ ಜಲ ಮಟ್ಟಕ್ಕಿಂತ ಹೆಚ್ಚು ಸಂಗ್ರಹವಾಗಿ ಹೊರಹೊಮ್ಮುತ್ತಿದೆ.
ಡ್ಯಾಂನ ಬಳಿಯ ಗ್ರಾಮಗಳಾದ ನೀಲಾವರ, ಕಾಡೂರು, ಎಳ್ಳಂಪಳ್ಳಿ, ಚೇರ್ಕಾಡಿ ಸೇರಿದಂತೆ ನದಿ ತೀರದ ಕೃಷಿಕರೀಗೆ ಮತ್ತು ಗ್ರಾಮ ಪಂಚಾಯತಿಯ ಕುಡಿಯುವ ನೀರಿನ ವ್ಯವಸ್ಥೆಗೆ ಕರಾವಳಿ ಜಿಲ್ಲೆಗೆ ಇದು ಮಾದರಿಯಾಗಿದೆ.
ಸಣ್ಣ ನೀರಾವರಿ ಇಲಾಖೆ ಮುಂದಿನ ದಿನದಲ್ಲಿ ಸೋರುತ್ತಿರುವ ಡ್ಯಾಂಗಳನ್ನು ಇದೇ ಮಾದರಿಯಲ್ಲಿ ವಾಹನ ಸಂಚಾರಕ್ಕೆ ಮತ್ತು ನೀರು ಶೇಖರಣೆಯ ಒಂದೇ ಯೋಜನೆಯಲ್ಲಿ ಹಲವು ಉಪಕಾರವಾಗುವ ಇಂತಹ: ಕಾಮಗಾರಿಯ ಅನುಷ್ಠಾನ ಮಾಡ ಬೇಕಾಗಿದೆ.