ಬ್ರಹ್ಮಾವರ: ಅಗ್ನಿಪಥ್ ತರಬೇತಿಗೆ ರಾಜ್ಯ ಸರಕಾರ ಅಸ್ತು- ಗೊಂದಲ ಕಡೆಗೂ ದೂರವಾಯ್ತು!
ಬ್ರಹ್ಮಾವರ: ಹಿಂದಿನ ಬಿಜೆಪಿ ರಾಜ್ಯ ಸರಕಾರದ ಅವಧಿಯಲ್ಲಿ ಆರಂಭವಾಗಿದ್ದ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆ “ಅಗ್ನಿ ಪಥ್” ಸೇನಾಪೂರ್ವ ತರಬೇತಿಯ ಮರು ಚಾಲನೆಗೆ ಕಾಂಗ್ರೆಸ್ ರಾಜ್ಯ ಸರಕಾರ ಅಸ್ತು ಎಂದಿದೆ.
ರಾಜ್ಯದ ಕರಾವಳಿಯ 3 ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡದಲ್ಲಿ ಕಳೆದ ವರ್ಷ “ಅಗ್ನಿ ಪಥ್” ಸೇನಾ ಪೂರ್ವ ತರಬೇತಿಗೆ ಚಾಲನೆ ನೀಡಲಾಗಿದ್ದು, ಈಗಾಗಲೇ 2 ತಂಡ ತರಬೇತಿ ಮುಗಿಸಿ ಅವರಲ್ಲಿ ಅನೇಕರು ಸೇನೆ ಮತ್ತು ಅರೆಸೇನಾ ಪಡೆಗೆ ಆಯ್ಕೆಗೊಂಡಿದ್ದಾರೆ.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಪರಿಕಲ್ಪನೆಯಲ್ಲಿ ಕರಾವಳಿ ಭಾಗದ ಯುವಕರು ಸೇನಾ ಸೇರ್ಪಡೆಗೆ ಸ್ಫೂರ್ತಿ ತುಂಬಲು ಕರಾವಳಿಯ ಐತಿಹಾಸಿಕ ವೀರರಾದ ಹೆಂಜ ನಾಯ್ಕ್ , ಕೋಟಿ- ಚೆನ್ನಯ ಹಾಗೂ ರಾಣಿ ಅಬ್ಬಕ್ಕ ಹೆಸರಿನಲ್ಲಿ ಉಡುಪಿ ಜಿಲ್ಲೆಯ ಬಾರಕೂರು ಹನೆಹಳ್ಳಿ ಶಾಲೆ, ಮಂಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸೇನಾ ಪೂರ್ವ ತರಬೇತಿ ಶಾಲೆ ಆರಂಭಿಸಲಾಗಿತ್ತು.
3ನೇ ಬ್ಯಾಚ್‍ಗೆ ಸರಕಾರ ಯಾವುದೇ ಸುತ್ತೋಲೆ ಹೊರಡಿಸದ ಕಾರಣ ತರಬೇತಿ ಶಾಲೆಗಳು ಬಿಕೋ ಎನ್ನುತಿತ್ತು. ಈ ಬಗ್ಗೆ ಕೆಲವು ದಿನಗಳ ಹಿಂದೆಯೇ ವಿ4 ನ್ಯೂಸ್ ವರದಿ ಮಾಡಿ ಗಮನ ಸೆಳೆದಿತ್ತು. ಇಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಡುಪಿ ಜಿಲ್ಲಾ ಅಧಿಕಾರಿ ಎಚ್.ಆರ್. ಲಮಾಣಿ ಸೇರಿದಂತೆ 3 ಜಿಲ್ಲೆಗಳಿಗೆ ಮುಂದಿನ ತರಬೇತಿಗೆ ಯುವಕರ ಸೇರ್ಪಡೆಗೆ ಆದೇಶ ನೀಡಿ, ರಾಜ್ಯ ಸರಕಾರವೂ ದೇಶದ ಸಂರಕ್ಷಣಾ ಕಾರ್ಯಕ್ಕೆ ತನ್ನ ಬದ್ಧತೆ ಮೆರೆದಿದೆ.