ಹಾಲಿ ಶಾಸಕರಿಗೆ ಸಿಗದ ಬಿಜೆಪಿ ಟಿಕೆಟ್ : ಬೈಂದೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ
ಬೈಂದೂರು: ಬಿಜೆಪಿಯ ಬೈಂದೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರಿಗೆ ಮುಂದಿನ ಚುನಾವಣೆಯಲ್ಲಿ ಸೀಟು ತಪ್ಪಿರುವ ವಿಚಾರ ತಿಳಿದ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ ಮಂಗಳವಾರ ರಾತ್ರಿ ಬಿ.ಎಂ. ಸುಕುಮಾರ ಶೆಟ್ಟಿಯವರಿಗೆ ಸೀಟು ಸಿಕ್ಕಿಲ್ಲ ಎನ್ನುವ ಮಾಹಿತಿ ಖಚಿತಗೊಳ್ಳುತ್ತಿದ್ದಂತೆ ಶಾಸಕರ ಮನೆ ಮುಂದೆ ತಂಡೋಪತಂಡವಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಶಾಸಕರ ಅಭಿಮಾನಿಗಳು ಜಮಾಯಿಸಿದರು.
ಸುಮಾರು ಐನೂರಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಆಕ್ರೋಶ ಹೊರಹಾಕಿ, ಶಾಸಕರ ನಿರ್ಧಾರ ಪ್ರಕಟಿಸುವಂತೆ ಆಗ್ರಹಿಸಿದರು. ಈ ಸಂದರ್ಭ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಸಮಾಧಾನ ಮಾಡಿದರೂ ಪ್ರಯೋಜನವಾಗಿಲ್ಲ. ಪಕ್ಷಕ್ಕಾಗಿ ಕೇಸು ಮೈಮೇಲೆ ಎಳೆದುಕೊಂಡಿದ್ದರೂ, ಕಾರ್ಯಕರ್ತರನ್ನು ಕಡೆಗಣನೆ ಮಾಡಲಾಗಿದ್ದು, ಶಾಸಕರಿಗೆ ಸೀಟು ಕೊಡುವಂತೆ ಆಗ್ರಹಿಸಿದರು.
ಬಳಿಕ ಕಾರ್ಯಕರ್ತರೊಂದಿಗೆ ಮಾತನಾಡಿದ ಬಿಜೆಪಿ ಬೈಂದೂರು ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಇಂದು ಶಾಸಕರ ಮನೆಯಲ್ಲಿ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.