ಪ್ರಣಾಳಿಕೆ ಆಶ್ವಾಸನೆಯೊಳಗೊ, ಆಶ್ವಾಸನೆಯೊಳಗೆ ಪ್ರಣಾಳಿಕೆಯೊ

ಕಾಂಗ್ರೆಸ್ ಪಕ್ಷವು 18ನೇ ಲೋಕ ಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಎಲ್ಲ ರಾಜಕೀಯ ಪಕ್ಷಗಳೂ ಚುನಾವಣಾ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತವೆ. ಇವೆಲ್ಲ ವಿದೇಶಗಳಿಂದಲೇ ಬಂದ ಪದ್ಧತಿಗಳು. ಆದರೆ ಆಶ್ವಾಸನೆಗಳನ್ನು ನೀಡುವುದು ಮಾನವ ಸ್ವಭಾವದಲ್ಲೇ ಇದ್ದು, ಅದು ಆದಿ ಮಾನವನಿಂದಲೇ ಆರಂಭವಾಗಿದೆ. ಅದಕ್ಕೆಲ್ಲ ಖಚಿತ ದಾಖಲೆ ಕೊಡುವುದಕ್ಕಂತೂ ಸಾಧ್ಯವಿಲ್ಲ.


ಮದುವೆಯಾಗುವಾಗ ನಿನ್ನನ್ನು ಚಂದ್ರ ಲೋಕಕ್ಕೆ ಕರೆದೊಯ್ಯುತ್ತೇನೆ ಎಂದು ಆಶ್ವಾಸನೆ ನೀಡುವ ಗಂಡುಗಳು ಇರುತ್ತಾರೆ. ಕೊನೆಗೆ ಕಾಮಾಟಿಪುರಕ್ಕೆ ಕರೆದೊಯ್ಯದಿದ್ದರೆ ಅದೇ ಪುಣ್ಯ. ಚಂದ್ರನನ್ನು ತಂದು ನಿನ್ನ ಮುಡಿಗೆ ಮುಡಿಸುತ್ತೇನೆ ಎಂದು ಹೇಳುವ ಗಂಡಿನ ಪ್ರೇಮ ಗೀತೆಗಳು ಚಲನಚಿತ್ರಗಳಲ್ಲಿ ನೂರಾರು ಬಂದಿವೆ. ಆದರೆ ಅವೆಲ್ಲ ಸುಂದರ ಸುಳ್ಳುಗಳು. ಕಪಟಿಗಳು ನೀನು ನನಗೆ ಈ ಕಪಟದಲ್ಲಿ ನೆರವಾದರೆ ನಿನಗೆ ಕಪಾಟು ತುಂಬ ಅದು ಕೊಡುವುದಾಗಿ ಆಶ್ವಾಸನೆ ನೀಡುವುದೂ ಇದೆ.


ಆಶ್ವಾಸನೆ ನೀಡುವುದು ಸಕಾರಾತ್ಮಕ, ನಕಾರಾತ್ಮಕ ಎರಡೂ ಆಗಿರಬಹುದು. ಒಳ್ಳೆಯದಕ್ಕೆ ಕೆಟ್ಟದ್ದಕ್ಕೆ ಎರಡಕ್ಕೂ ಆಗಬಹುದು. ಸುಮ್ಮನೆ ತಮಾಷೆಗೆ ಕೂಡ ಇರುವುದುಂಟು. ಜನರಿಗೆ ಮಾತ್ರವಲ್ಲ ದೇವರಿಗೆ ಆಶ್ವಾಸನೆ ಕೊಡುವ ಭೂಪರೂ ನಮ್ಮಲ್ಲಿ ಇದ್ದಾರೆ. ನನ್ನನ್ನು ಗೆಲ್ಲಿಸಿದರೆ ನಿನಗೆ ದೀಡ್ ನಮಸ್ಕಾರ ಹಾಕುವೆ, ಈಡುಗಾಯಿ ಒಡೆಯುವೆ ಎಂದೆಲ್ಲ ಹರಕೆ ಹೊರುವುದು ಕೂಡ ಒಂದು ಬಗೆಯ ಆಶ್ವಾಸನೆಯೇ ಆಗಿದೆ. ತಾಯಂದಿರು ಮಕ್ಕಳಿಗೆ ಉಣಿಸಲು ಕೊಡುವ ಆಶ್ವಾಸನೆಗಳೆಲ್ಲ ತಿಳಿದೇ ಸುಳ್ಸುಳ್ಳೆ ಆಗಿರುತ್ತವೆ. ಬೇಗ ಉಣುಂಡ, ಪೇಟೆದ ಲಾಡು ಬರ್ಪುಂಡು, ಎಲ್ಲ ಊಟ ಮಾಡಿದರೆ ಉದ್ಯಾನಕ್ಕೆ ಕರೆದುಕೊಂಡು ಹೋಗುತ್ತೇನೆ.


ಇಂತಾ ಆಶ್ವಾಸನೆಗಳಲ್ಲಿ ಕೆಲವೊಮ್ಮೆ ಈಡೇರಿಸುವುದೂ ಇದೆ. ರಾಜಕಾರಣಿಗಳು ಮತ ಬೇಡುವ ಕಾಲದಲ್ಲಿ ಒಂಟಿಯಾಗಿ ಕೆಲವು ಆಶ್ವಾಸನೆಗಳನ್ನು ನೀಡುತ್ತಾರೆ. ಚುನಾವಣಾ ಕಾಲದಲ್ಲಿ ಪಕ್ಷಗಳು ತಮ್ಮ ಪಕ್ಷದ ಪರವಾಗಿ ಆಶ್ವಾಸನೆ ನೀಡುವುದೇ ಪ್ರಣಾಳಿಕೆ. ಈ ಆಶ್ವಾಸನೆಗಳೆಲ್ಲ ಈಡೇರುತ್ತವೆ ಎಂದೇನೂ ನೂರಕ್ಕೆ ನೂರು ಹೇಳಲಿಕ್ಕೆ ಬರುವುದಿಲ್ಲ. ಎಲ್ಲ ಪಕ್ಷಗಳೂ ಈ ರೀತಿ ಮರೆತ ಪ್ರಣಾಳಿಕೆಯ ಆಶ್ವಾಸನೆಗಳು ನೂರಾರು ಇವೆ.
ಸದ್ಯ ಆಳುತ್ತಿರುವ ಪ್ರಧಾನಿ ಮೋದಿಯವರ ಬಗೆಗೆ ಹೇಳಬೇಕೆಂದರೆ ಸ್ವಿಸ್ ಬ್ಯಾಂಕಿನಿಂದ ಹಣ ತಂದು ಪ್ರತಿಯೊಬ್ಬರ ಖಾತೆಗೆ ಒಂದೂವರೆ ಲಕ್ಷ ರೂಪಾಯಿ ಹಾಕುವ ಆಶ್ವಾಸನೆ, ಬುಲೆಟ್ ರೈಲು ಓಡಿಸುವ ಆಶ್ವಾಸನೆ ಎಲ್ಲ ಪುಸ್ಕ ಆಗಿವೆ. ಆದರೆ ಅದಕ್ಕಿಂತ ಮುಖ್ಯವಾಗಿ ನಾ ಕಾವೂಂಗ, ನಾ ಕಾನೇ ದೂಂಗಾ ಎಂದು ಭ್ರಷ್ಟಾಚಾರದ ಬಗೆಗೆ ಹೇಳಿದ್ದರು. ಆದರೆ ಇದೊಂದು ದೊಡ್ಡ ವಿನೋದದಂತಿದೆ, ಚೆನ್ನಾಗಿ ಭ್ರಷ್ಟಾಚಾರ ಮಾಡಿದವನು ಪಕ್ಷಕ್ಕೆ ಸೇರಿದರೆ ಅವನು ಅಡ್ಡ ಹಾದಿಯಲ್ಲಿ ಗಳಿಸಿದ್ದನ್ನು ಅವನೊಬ್ಬನೆ ತಿನ್ನಲು ಬಿಡುವುದಿಲ್ಲ; ನಮ್ಮ ಪಕ್ಷದವರೆಲ್ಲ ತಿನ್ನುವಂತೆ ಮಾಡುತ್ತೇನೆ ಎಂಬುದು ಆ ಆಶ್ವಾಸನೆಯ ಮೂಲ ಅರ್ಥ ಇರಬಹುದು.


ಈಗ ಕಾಂಗ್ರೆಸ್ ಪಕ್ಷವು ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಮನೆ ಮನೆಗೆ ಗ್ಯಾರಂಟಿ ಎಂದು ಹೇಳಲಾಗಿದೆ. ಘರ್ ಘರ್ ಗ್ಯಾರಂಟಿಯ ಅಪ್ಪ ಕರ್ನಾಟಕದ ಪಂಚ ಗ್ಯಾರಂಟಿ. ಪಂಚಗಜ್ಜಾಯ ಒಂದಷ್ಟು ಫಲಪ್ರದ ಎನ್ನುತ್ತಲೇ ಈಗ ಎಲ್ಲ ಕಡೆ ಗ್ಯಾರಂಟಿಯದೇ ಮಾತು. ಗ್ಯಾರಂಟಿಯನ್ನೇ ಚುನಾವಣೆಗೆ ನಿಲ್ಲಿಸಿದರೆ ಅದು ಹೆಚ್ಚು ಯಶಸ್ಸು ತರಬಹುದು. ಪ್ರಧಾನಿ ಮೋದಿಯವರದು ಮುಖ್ಯವಾಗಿ ಪೌರತ್ವ ನೀಡುವ ಗ್ಯಾರಂಟಿ. ಮಮತಾ ಬ್ಯಾನರ್ಜಿಯವರದು ಪೌರತ್ವ ನೀಡಿಕೆ ಎಂಬುದನ್ನು ಹಳಿಯುವ ಗ್ಯಾರಂಟಿ.


ಅಯ್ದು ನ್ಯಾಯಗಳ ಇಪ್ಪತ್ತಯಿದು ಗ್ಯಾರಂಟಿ ನೀಡಿರುವ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಹತ್ತು ಭರವಸೆಗಳು ಪ್ರಮುಖವೆನಿಸಿವೆ. ಅನಿಶ್ಚಿತ ಉದ್ಯೋಗದ ಅಗ್ನಿಪಥ ಯೋಜನೆಯನ್ನು ರದ್ದು ಮಾಡುವುದು. ಸಾಮಾಜಿಕ ನ್ಯಾಯಕ್ಕಾಗಿ ಜಾತಿ ಗಣತಿ ನಡೆಸುವುದು. ಜಿಎಸ್‍ಟಿ ಜನಪರ ಆಗುವಂತೆ ತಿದ್ದುಪಡಿ ತರುವುದು. ಬಡ ಕುಟುಂಬದ ಹಿರಿಯ ಮಹಿಳೆಗೆ ವರುಷಕ್ಕೆ ಒಂದು ಲಕ್ಷದ ಕೊಡುಗೆ. ಹಿರಿಯ ನಾಗರಿಕರ, ದಿವ್ಯಾಂಗ ಮೊದಲಾದವರ ಪಿಂಚಣಿಯನ್ನು 1,000 ರೂಪಾಯಿ ಎಂದರೆ ದುಪ್ಪಟ್ಟು ಮಾಡುವುದು. ಯಾವುದೇ ಧರ್ಮವನ್ನು ಆಚರಿಸುವ ಸ್ವಾತಂತ್ರ್ಯ ನೀಡುವುದು. ರಾಜಸ್ತಾನದ ಮಾದರಿಯ ನಗದು ಇಲ್ಲದ ವಿಮೆ. ಕೇಂದ್ರ ಸರಕಾರದ ನೇಮಕಾತಿಯಲ್ಲಿ ಮಹಿಳೆಯರಿಗೆ 50 ಶೇಕಡಾ ಮೀಸಲಾತಿ. ವಿದ್ಯಾರ್ಥಿಗಳ ಕಲಿಕಾ ಸಾಲ ಮನ್ನಾ. ರೈತರಿಗೆ ಗ್ಯಾರಂಟಿ ಬೆಂಬಲ ಬೆಲೆ ಇತ್ಯಾದಿ.


ಅಂಗ ಪಟ್ಟದ ಗ್ಯಾರಂಟಿ ನೀಡಿ ಸುಯೋಧನನು ಕರ್ಣನನ್ನು ಮಿತ್ರನಾಗಿಸಿಕೊಂಡಿದ್ದ. ಶಕುಂತಳೆಗೆ ನೀಡಿದ್ದ ಆಶ್ವಾಸನೆಯನ್ನು ದುಷ್ಯಂತ ಮರೆತಿದ್ದ. ಪುರಾಣಗಳಲ್ಲಿ ಇದಕ್ಕೆ ಇರುವ ಸಾಕು ಪೋಕು ಕಾರಣಗಳೆಂದರೆ ಶಾಪ. ಅದೇ ಕೆಲವರಿಗೆ ಗ್ಯಾರಂಟಿ. ಮತ್ತೆ ಕೆಲವರು ಶಾಪ ವಿಮೋಚನೆಯ ಗ್ಯಾರಂಟಿಯನ್ನೂ ಪುರಾಣದಲ್ಲಿ ನೀಡಿದ್ದಾರೆ. ಕತೆಗಳಾದರೂ ಆ ಸ್ವಾರಸ್ಯಗಳೇ ಬೇರೆ. ಚಾರಿತ್ರಿಕವಾಗಿ ದಾಯಾದಿ ಕದನ ಬೇಡ ಎಂದು ಎರಡನೆಯ ಪುಲಿಕೇಶಿಯು ಕುಬ್ಜ ವಿಷ್ಟುವಿಗೆ ವೆಂಗಿ ರಾಜ್ಯದ ಆಶ್ವಾಸನೆ ನೀಡಿ ನೆರವೇರಿಸಿದ್ದ. ದಿವಾನ್ ಪೂರ್ಣಯ್ಯ ಬ್ರಿಟಿಷರಿಗೆ ಮಾಡಿದ ಸಹಾಯಕ್ಕೆ ಮೈಸೂರು ಸಂಸ್ಥಾನದ ದಿವಾನನಾಗಿ ಮುಂದುವರಿದ.


ಮ್ಯಾನಿಫಿಸ್ಟೋ ಎನ್ನುವ ಚುನಾವಣಾ ಪ್ರಣಾಳಿಕೆಗಳು ಬರೇ ಬಾಯಿ ಮಾತಿನ ಆಶ್ವಾಸನೆಗಳಲ್ಲ. ಅವು ಬರವಣಿಗೆಯಲ್ಲಿ ನೀಡುವವು; ಇಂದು ಮುದ್ರಿತವಾಗಿರುತ್ತವೆ. ಹಾಗಾಗಿ ಅವು ಇಲ್ಲಿ ಮತದಾರ ಮತ್ತು ಪಕ್ಷದ ನಡುವಣ ಒಂದು ಒಪ್ಪಂದ ಪತ್ರವಿದ್ದಂತೆ. ಆಶ್ವಾಸನೆಯು ಮತದಾರರಿಗೆ ಒಡ್ಡುವ ಆಮಿಷವೂ ಆಗಿರಬಹುದು. ಈ ಆಶ್ವಾಸನೆಗಳು ಸಾಮಾಜಿಕ, ರಾಜಕೀಯ, ಕಲಾತ್ಮಕ ರೂಪದ್ದಿರುತ್ತವೆ. ಕೆಲವೊಮ್ಮೆ ಕ್ರಾಂತಿಕಾರಿಯಾದುದೂ ಆಗಿರಬಹುದು. ಕೇಂದ್ರದಲ್ಲಿ 50% ಮೀಸಲಾತಿಯನ್ನು ಇಲ್ಲಿ ಕ್ರಾಂತಿಕಾರಿ ಆಶ್ವಾಸನೆ ಎಂದು ಹೇಳಬಹುದು.
ಕಾಂಗ್ರೆಸ್ ಪ್ರಣಾಳಿಕೆಯು ಐದು ನ್ಯಾಯ ಇಪ್ಪತ್ತಯಿದು ಗ್ಯಾರಂಟಿಗಳನ್ನು ಒಳಗೊಂಡಿದೆ. ಆ ಐದು ನ್ಯಾಯ ಯಾವುದು? ರೈತ ನ್ಯಾಯ, ನಾರಿ ನ್ಯಾಯ, ಯುವ ನ್ಯಾಯ, ಶ್ರಮಿಕ ನ್ಯಾಯ, ಸಮಾನತೆ ನ್ಯಾಯ ಎನ್ನುವುದೇ ಆ ಐದು ನ್ಯಾಯಗಳು. ಆ ಐದರಡಿ ರೈತರ ಸಾಲ ಮನ್ನಾ, ರಫ್ತು ಆಮದು ನೀತಿ ಇತ್ಯಾದಿ, ನಾರಿ ನ್ಯಾಯದಲ್ಲಿ ಸಾವಿತ್ರಿಬಾಯಿ ಫುಲೆ ಹಾಸ್ಟೆಲ್ ಇತ್ಯಾದಿ, ಸಮಾನತೆ ನ್ಯಾಯದಲ್ಲಿ ಮೀಸಲು ಮಿತಿ ರದ್ದು ಇತ್ಯಾದಿ, ಶ್ರಮಿಕ ನ್ಯಾಯದಲ್ಲಿ ಅಸಂಘಟಿಕ ಕಾರ್ಮಿಕರಿಗೆ ವಿಮೆ, ಉದ್ಯೋಗ ಸಮಾನತೆ ಇತ್ಯಾದಿ, ಯುವ ನ್ಯಾಯದಲ್ಲಿ ಕಾಲಿ ಹುದ್ದೆಗಳ ಭರ್ತಿ ಇತ್ಯಾದಿ ಗ್ಯಾರಂಟಿಗಳನ್ನು ಘೋಷಿಸಲಾಗಿದೆ.


ಪ್ರಣಾಳಿಕೆಗಳುÀ ಪಕ್ಷಗಳ ಮನೋಭಾವಗಳ ಪ್ರತಿಫಲನವೂ ಆಗಿರುತ್ತವೆ. ಕಮ್ಯೂನಿಸ್ಟ್ ಪ್ರಣಾಳಿಕೆಗಳು ಮತ್ತು ಧಾರ್ಮಿಕ ಪಕ್ಷಗಳ ಪ್ರಣಾಳಿಕೆಗಳು ಖಂಡಿತವಾಗಿ ಸಂಪೂರ್ಣ ವಿರುದ್ಧದ ಆಶ್ವಾಸನೆಗಳನ್ನು ನೀಡುತ್ತವೆ. ಉದಾರವಾದಿ ಆಡಳಿತ ಜನ ಹಿತಕ್ಕೆ ಒತ್ತು ನೀಡಿದರೆ, ನಿರಂಕುಶ ಆಡಳಿತ ಮತ್ತು ರಾಜಸತ್ತೆಯು ಆಳುವವರ ಹಿತಾಸಕ್ತಿಗೆ ಒತ್ತು ನೀಡಿ ಪ್ರಣಾಳಿಕೆ ಹೊಂದಿರುತ್ತವೆ. ಪ್ರನಾಳ ಶಿಶು ಕಾಲದಲ್ಲಿ ಈ ಆಶ್ವಾಸನೆಗಳು ಕೂಡ ಒಂದು ಬಗೆಯಲ್ಲಿ ಪ್ರನಾಳ ಶಿಶು ಪಡೆಯುವ ರೀತಿಯದೇ ಆಗಿದೆ.

Related Posts

Leave a Reply

Your email address will not be published.