ಅಡುಗೆ ಅನಿಲ ಬೆಲೆಯೇರಿಕೆ ವಿರೋಧಿಸಿ ಸಿಪಿಐಎಂ ಪ್ರತಿಭಟನೆ
ಅಡುಗೆ ಅನಿಲ ಬೆಲೆಗಳನ್ನು ಅತ್ಯಂತ ಕ್ರೂರವಾಗಿ ಏರಿಕೆ ಮಾಡಿದ ಕೇಂದ್ರ ಸರಕಾರದ ಕೆಟ್ಟ ನಿರ್ಧಾರದ ವಿರುದ್ಧ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ನೇತೃತ್ವದಲ್ಲಿ ಇಂದು (2-3-2023) ನಗರದ ಕ್ಲಾಕ್ ಟವರ್ ಬಳಿ ಅಡುಗೆ ಖಾಲಿ ಅಡುಗೆ ಅನಿಲ ಸಿಲಿಂಡರ್ ಪ್ರದರ್ಶಿಸಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಪ್ರತಿಭಟನೆಯ್ನು ಉದ್ದೇಶಿಸಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್ ಮಾತನಾಡುತ್ತಾ ಬಿಜೆಪಿ ಸರಕಾರ ಗ್ಯಾಸ್ ದರ ಏರಿಕೆ ಮಾಡಿ ಜನಸಾಮಾನ್ಯರ ಬದುಕಿನ ಮೇಲೆ ಬರೆಯನ್ನು ಎಳೆದಿದೆ. ಅಚ್ಚೇದಿನದ ಹೆಸರಿನಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಸರಕಾರ ಜನರ ಯಾವೊಂದು ಜನಪರ ಆಶೋತ್ತರಗಳನ್ನು ಈವರೆಗೂ ಈಡೇರಿಸಲಿಲ್ಲ. ಅಡುಗೆ ಅನಿಲ ದಿಂದ ಹಿಡಿದು ಪೆಟ್ರೋಲ್, ಡೀಸಲ್ ದಿನಬಳಕೆಯ ಅಗತ್ಯ ವಸ್ತುಗಳ ವಿಪರೀತ ಬೆಲೆ ಏರಿಕೆ ಜನರನ್ನು ಬದುಕಲಾಗದಂತಹ ಪರಿಸ್ಥಿತಿಗೆ ತಂದು ದೂಡಿದೆ. ಜನರ ಶಿಕ್ಷಣ, ಆರೋಗ್ಯ, ಉದ್ಯೋಗದಂತಹ ವಿಚಾರಗಳ ಕುರಿತು ಚರ್ಚಿಸುವ ಬದಲು ಲವ್ ಜಿಹಾದ್, ಗೋಹತ್ಯೆ, ಮತಾಂತರದಂತಹ ಭಾವನಾತ್ಮಕ ಪ್ರಶ್ನೆಗಳನ್ನು ಮುಂದಿಟ್ಟು ಜನರ ಗಮನವನ್ನು ಬದುಕಿನ ನೈಜ್ಯ ವಿಚಾರಗಳಿಂದ ಪ್ರತ್ಯೇಕಿಸಿ ಮತೀಯ ದ್ರುವೀಕರಣ ರಾಜಕಾರಣದಲ್ಲಿ ಹರಾಜಕತೆಯನ್ನು ಸೃಷ್ಟಿಸುವ ಮೂಲಕ ಕಾರ್ಪೋರೇಟ್ ಕಂಪೆನಿಗಳ ಪರವಾದ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಜನರು ಅಭಿವೃದ್ಧಿ ಪ್ರಶ್ನೆಯನ್ನೆತ್ತಬಾರದು ಲವ್ ಜಿಹಾದ್ ವಿರುದ್ದ ಹೋರಾಡಿ ಎಂದು ಕರೆನೀಡುವುದು ಬಿಜೆಪಿ ಪಕ್ಷದ ದುಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಕಟುವಾಗಿ ಟೀಕಿಸಿದರು.
ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಸಮಿತಿ ಸದಸ್ಯರಾದ ಜಯಂತಿ ಬಿ ಶೆಟ್ಟಿ, ಪದ್ಮಾವತಿ ಶೆಟ್ಟಿ, ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಸಾಮಾಜಿಕ ಕಾರ್ಯಕರ್ತರಾದ ಜೆರಾಲ್ಡ್ ಟವರ್, ಸುಜಾತ ಸುವರ್ಣ, ಸಿಪಿಐಎಂ ನಗರ ಸಮಿತಿ ಸದಸ್ಯರಾದ ಭಾರತೀ ಬೋಳಾರ, ನಾಗೇಶ್ ಕೋಟ್ಯಾನ್, ಪ್ರದೀಪ್ ಉರ್ವಸ್ಟೋರ್, ಸಿಪಿಐಎಂ ಮುಖಂಡರಾದ ಪ್ರಮಿಳಾ ದೇವಾಡಿಗ, ಅಸುಂತ ಡಿಸೋಜ, ಮುಸ್ತಫಾ ಕಲ್ಲಕಟ್ಟೆ, ವಿಲ್ಲಿವಿಲ್ಸನ್ ಮುಂತಾದವರು ಉಪಸ್ಥಿತರಿದ್ದರು.