ಬಾಯಿಯೇ ಆರೋಗ್ಯದ ಹೆಬ್ಬಾಗಿಲು : ಡಾ|| ಚೂಂತಾರು

ನಾವು ತಿನ್ನುವ ಎಲ್ಲಾ ಆಹಾರ ಬಾಯಿಯ ಮುಖಾಂತರವೇ ದೇಹದೊಳಗೆ ಸೇರುತ್ತದೆ. ನಮ್ಮ ಬಾಯಿಯ ಆರೋಗ್ಯ ಚೆನ್ನಾಗಿದ್ದು, ಆರೋಗ್ಯವಂತ ಹಲ್ಲುಗಳು ಇದ್ದಲ್ಲಿ, ನಾವು ತಿನ್ನುವ ಆಹಾರ ಚೆನ್ನಾಗಿ ಪಚನಗೊಂಡು ದೇಹಕ್ಕೆ ಬೇಗನೆ ಸೇರಿಕೊಂಡು ನಮ್ಮ ಆರೋಗ್ಯ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ಬಾಯಿಯ ಆರೋಗ್ಯ ಕಾಪಾಡಿಕೊಂಡಲ್ಲಿ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ತನ್ನಿಂತಾನೇ ವೃದ್ಧಿಸುತ್ತದೆ.

ಬಾಯಿಯೇ ನಮ್ಮ ಆರೋಗ್ಯದ ಹೆಬ್ಬಾಗಿಲು ಆಗಿರುತ್ತದೆ. ನಿರಂತರವಾಗಿ ಬಾಯಿಯ ಆರೋಗ್ಯದ ತಪಾಸಣೆ ಮಾಡಿಸಿ, ಆರೋಗ್ಯ ಪೂರ್ಣ ಹಲ್ಲುಗಳನ್ನು ಉಳಿಸಿಕೊಂಡಲ್ಲಿ ದೇಹದ ಆರೋಗ್ಯ ಸದಾ ಕಾಲ ಸುಸ್ಥಿತಿಯಲ್ಲಿರುತ್ತದೆ ಎಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇದರ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು.
ದಿನಾಂಕ 30-12-2022ನೇ ಶುಕ್ರವಾರದಂದು ರಾಷ್ಟ್ರೀಯ ದಂತ ವೈದ್ಯರ ದಿನದ ಅಂಗವಾಗಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇದರ ವತಿಯಿಂದ ನಗರದ ಕಾವೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇದರ ಮಕ್ಕಳಿಗೆ ಉಚಿತವಾಗಿ ಟೂತ್ ಪೇಸ್ಟ್ ವಿತರಣೆ ಮಾಡಿ ದಂತ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ದಂತ ಆರೋಗ್ಯದ ಮಾಹಿತಿ ಇರುವ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ಉಚಿತವಾಗಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗಂಗಾಧರ ಮತ್ತು ಶಾಲಾ ಶಿಕ್ಷಕಿಯರಾದ ಸುನೀತಾ ಡಿಕಾಸ್ಟಾ, ಮತ್ತು ಗೌರವ ಶಿಕ್ಷಕಿ ರುಕ್ಸಾನಾ ಇವರು ಉಪಸ್ಥಿತರಿದ್ದರು. ಸುಮಾರು 55 ಮಂದಿ ಮಕ್ಕಳು ಈ ಶಿಬಿರದ ಪ್ರಾಯೋಜನ ಪಡೆದರು