ಶಾಸ್ತ್ರೀ ಜಿ ಮತ್ತು ಗಾಂಧೀಜಿಯವರ ಆದರ್ಶಗಳನ್ನು ನಿತ್ಯ ಅಳವಡಿಸಿಕೊಳ್ಳೋಣ : ಡಾ|| ಚೂಂತಾರು

ದಿನಾಂಕ 02-10-2023ನೇ ಸೋಮವಾರದಂದು ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ನಗರದ ಮೇರಿಹಿಲ್‍ನಲ್ಲಿ ಇರುವ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಕಛೇರಿಯಲ್ಲಿ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಮತ್ತು ಗಾಂಧೀಜಿಯವರ ತ್ಯಾಗ, ಸೇವೆ ಹಾಗೂ ಬಲಿದಾನವನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ “ಗಾಂಧೀಜಿಯವರು ಹಾಕಿ ಕೊಟ್ಟ ತ್ಯಾಗ, ಅಹಿಂಸೆ ಮತ್ತು ತತ್ವದ ಹಾದಿಯಲ್ಲಿ ನಡೆದು, ಅವರ ಆದರ್ಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ತುರ್ತು ಅಗತ್ಯ ಈಗ ಇದೆ. ಪ್ರತಿಯೊಬ್ಬರಲ್ಲಿಯೂ ಗಾಂಧೀಜಿಯವರ ಮತ್ತು ಶಾಸ್ತ್ರೀಜಿಯವರ ಆದರ್ಶಗಳು ಇದ್ದರೂ ಯಾರು ಅದನ್ನು ಪರಿಣಾಮಕಾರಿಯಾಗಿ ಪಾಲಿಸುತ್ತಿಲ್ಲ. ಈ ಸುಪ್ತವಾಗಿರುವ ಪ್ರಜ್ಞೆಗಳನ್ನು ಬಡಿದೆಬ್ಬಿಸಬೇಕಾದ ತುರ್ತು ಅಗತ್ಯ ಇದೆ. ಆಗ ಮಾತ್ರ ಸುಭೀಕ್ಷ ಹಾಗೂ ಆರೋಗ್ಯ ಪೂರ್ಣ ಭವ್ಯ ಭಾರತದ ನಿರ್ಮಾಣ ಸಾಧ್ಯ ಮತ್ತು ಗಾಂಧೀಜಿಯವರು ಕನಸು ಕಂಡ ರಾಮ ರಾಜ್ಯ ನಿರ್ಮಾಣ ಸಾಧ್ಯವಿದೆ” ಎಂದು ನುಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕದಳ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ, ಗೃಹರಕ್ಷಕರಾದ ಕನಕಪ್ಪ, ರೋಹಿದಾಸ್, ಸಂದೇಶ್, ರೇವತಿ ದಿನೇಶ್, ನಯನ, ವಾರಿಜ, ಸಬಿತಾ ಲಕ್ಷ್ಮಣ್ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.