ಕಡಬ: ಬಾಲಕಿ ಬರೆದ ಪತ್ರಕ್ಕೆ ಸಿಎಂ ಪ್ರತಿಕ್ರಿಯೆ: ಟ್ವಿಟ್ಟರ್(x)ನಲ್ಲಿ ಸಂತಸ ಹಂಚಿಕೊಂಡ ಸಿದ್ದರಾಮಯ್ಯ
ಶಾಲೆಯ ಪಕ್ಕದ ಅಂಗಡಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ತಡೆಯಿರಿ ಎಂಬ ಬಾಲಕಿಯ ಮನವಿಗೆ ಸಿಎಂ ಸಿದ್ದರಾಮಯ್ಯ ಅವರು ತಕ್ಷಣ ಸ್ಪಂದಿಸಿದ್ದೂ,ಇದೀಗ ತನ್ನ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಸಾರ್ವಜನಿಕ ವಲಯದಿಂದ ಬರುತ್ತಿರುವ ಕೆಲವು ವಿಶೇಷ ವಿಚಾರಗಳಿಗೆ ತ್ವರಿತವಾಗಿ ಸ್ಪಂದಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಿಳಿನೆಲೆ ಕೈಕಂಬದ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಪುಟಾಣಿಯಾದ ಅಯಾರ ಎಂಬ ಬಾಲಕಿ ತನ್ನ ಶಾಲೆಯ ಪಕ್ಕದ ಅಂಗಡಿಗಳಲ್ಲಿ ತಂಬಾಕು ಮಾರಾಟ ಮಾಡಲಾಗುತ್ತಿದೆ.
ಇದನ್ನು ನಿಲ್ಲಿಸಿ ಎಂದು ಪತ್ರಿಕೆಯೊಂದಕ್ಕೆ ಪತ್ರ ಬರೆದಿದ್ದಳು.ಈ ಪತ್ರವನ್ನು ಪತ್ರಿಕೆಯವರು ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿದ್ದೂ ತಕ್ಷಣವೇ ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ತ್ವರಿತವಾಗಿ ಸ್ಪಂದಿಸಿ ಕಡಬದ ಪೊಲೀಸ್ ಅಧಿಕಾರಿ ಅಭಿನಂದನ್ ಅವರನ್ನು ಈ ಅಂಗಡಿಗೆ ಕಳುಹಿಸಿ ಕ್ರಮ ಕೈಗೊಳ್ಳಲಾಗಿತ್ತು.ಇದೀಗ ಈ ವಿಚಾರವನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕು ಕೈಕಂಬದ 3ನೇ ತರಗತಿಯಲ್ಲಿ ಓದುವ ಪುಟ್ಟ ಬಾಲಕಿ ಅಯಾರ ತನ್ನ ಶಾಲೆಯ ಸಮೀಪದ ಅಂಗಡಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುತ್ತಿದ್ದಾರೆ, ಇದನ್ನು ನಿಲ್ಲಿಸಬೇಕು ಎಂದು ನಮಗೆ ಪತ್ರ ಬರೆದು ಮನವಿ ಮಾಡಿದ್ದಳು. ಬಾಲಕಿಯ ಸಮಸ್ಯೆ ಚಿಕ್ಕದಾದರೂ ಕಾನೂನಿನ ಬಗ್ಗೆ ಆಕೆಗಿರುವ ಅರಿವು ಮತ್ತು ಅಕ್ರಮದ ವಿರುದ್ಧ ಧ್ವನಿಯೆತ್ತುವ ಧೈರ್ಯ ಕಂಡು ಖುಷಿಯಾಯಿತು.
ಬಾಲಕಿಯ ಪತ್ರ ತಲುಪಿದ ಕೆಲವೇ ಕೆಲವು ಗಂಟೆಗಳ ಒಳಗೆ ನಮ್ಮ ಕಚೇರಿಯ ಸಾರ್ವಜನಿಕ ಕುಂದುಕೊರತೆಗಳ ವಿಭಾಗದ ವಿಶೇಷಾಧಿಕಾರಿಗಳು ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ. ಕೂಡಲೆ ಅಧಿಕಾರಿಗಳ ತಂಡ ಅಕ್ರಮವಾಗಿ ತಂಬಾಕು ಉತ್ಪನ್ನಗಳನ್ನು ಮಾರುತ್ತಿದ್ದ ಸ್ಥಳಕ್ಕೆ ತೆರಳಿ, ತಪ್ಪಿತಸ್ಥನಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಿದೆ.
ಬಾಲಕಿಯ ಕೋರಿಕೆ ಚಿಕ್ಕದಾದರೂ ಸರ್ಕಾರ ತಮ್ಮ ಅಹವಾಲನ್ನೂ ಆಲಿಸಿ, ಸಮಸ್ಯೆ ಬಗೆಹರಿಸುತ್ತದೆ ಎಂಬ ವಿಶ್ವಾಸ ಮಕ್ಕಳಲ್ಲಿ ಬಂದರೆ ತಮ್ಮ ಸುತ್ತಮುತ್ತ ನಡೆಯುವ ಅಕ್ರಮ, ಅನ್ಯಾಯಗಳನ್ನು ಖಂಡಿಸುತ್ತಾರೆ. ಅವರಲ್ಲಿ ಈ ಆತ್ಮಸ್ಥೈರ್ಯ ತುಂಬುವುದು ನಮ್ಮ ಜವಾಬ್ದಾರಿಯಾಗಿದೆ- ಎಂದು ಸಿಎಂ ಅವರು ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.