ನೇಹದ ನಾಟಕ ನೇಯ್ಗೆ
ಬರಹ: ಪೇರೂರು ಜಾರು( ಹಿರಿಯ ಸಂಪಾದಕರು)
ನೇಹದ ನೇಯ್ಗೆ ಒಂದು ರಂಗಾಸಕ್ತರ ಕಾರ್ಯಾಗಾರ. ಅದು ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನ ಆತಿಥ್ಯದಲ್ಲಿ ನಡೆದು ಮುಗಿದಿದೆ. ನಾಟಕಕ್ಕೆ ಒಂದು ಕಾಯಂ ಗುರುತು ಇದೆ. ಅದು ಒಂದು ಕಡೆ ನಗು ಮುಖ, ಇನ್ನೊಂದು ಕಡೆ ಅಳು ಮುಖ. ಅರ್ಧ ಶತಮಾನದ ಹಿಂದಿನವರಗೆ ಎಲ್ಲ ರಂಗ ಕಲೆಗೆ ಏನು ದೈವ ಕಲೆಗೆ ಸಂಬಂಧಿಸಿದವರ ಬದುಕು ನಗುವಿನ ಅಳುವಿನ ಉಯ್ಯಾಲೆ ಈ ರಂಗ ಸಂಗದ ಕರೆಯೋಲೆ ಎಂದು ಜೋಲಿ ಹೊಡೆಯುತ್ತಿದ್ದುದಾಗಿತ್ತು. ಆದರೆ ಅದು ಒಂದು ರೀತಿಯ ಬಂಧುತ್ವ.
ಅದನ್ನು ಕೆಲವರು ಚಟ ಎಂದೂ, ಕೆಲವರು ಜೂಜು ಎಂದೂ ಕರೆದುದು ಇದೆ. ನಿಜ ಕಲಾವಿದರು ಈ ಚಟದಲ್ಲಿ ಬಿದ್ದ ಮೇಲೆ ಎದ್ದು ಬಂದುದು ಕಡಿಮೆ. ಹಾಗೆಯೇ ಈ ಜೂಜಾಡಲು ಹೊರಟವರು ಹಿಂತಿರುಗಿ ನೋಡಿದ್ದಿಲ್ಲ. ಒಂದೇ ಒಂದಷ್ಟು ಕಾಲ ಮೆರೆತ, ಇಲ್ಲವೇ ದಿವಾಳಿ. ಎಂದಿಗೆ ಬರುವುದೊ ಬೆಳಕಿನ ಹಬ್ಬ ಎನ್ನುತ್ತ ಅಲೆದವರೇ ಹೆಚ್ಚು. ಯಾಕೆಂದರೆ ಈ ರಂಗ ಕ್ಷೇತ್ರ ಎನ್ನುವುದು ಬೆಳಕು ನೆರಳಿನಾಟ. ಅಲ್ಲಿ ನಟಿಸುವವರ ಬದುಕು ಕೂಡ ಬೆಳಕಿನಲ್ಲಿ ಮಿಂಚಿ, ನೆರಳಿನಲ್ಲಿ ಬೀಳುವುದಾಗಿದೆ.
ಜೀವನ ನಾಟಕ ಎಂಬ ಒಂದು ಕನ್ನಡ ನಾಟಕ ಒಂದು ಕಾಲದಲ್ಲಿ ತುಂಬ ಪ್ರಸಿದ್ಧವಾಗಿತ್ತು. ಭಾವುಕರು ಜಗವೇ ನಾಟಕ ರಂಗ ಎಂದು ಹಾಡುತ್ತ ತಾವೇ ಪಾತ್ರಧಾರಿಗಳಾಗಿ ಕನಸಿನ ಲೋಕದಲ್ಲಿ ವಿಹರಿಸಿದ್ದು ಇದ್ದೇ ಇದೆ. ಇದು ಎಲ್ಲ ಕಲೆಗಳಿಗೂ ಅನ್ವಯಿಸುವ ಮಾತಾಗಿದೆ. ಇದ್ದುದರಲ್ಲಿ ಈಗೀಗ ಕೆಲವು ಕಲಾವಿದರು ಉತ್ತಮ ಆದಾಯ ಪಡೆಯುತ್ತಾರೆ. ಹಿಂದೆಲ್ಲ ಅದಕ್ಕೆ ದಾರಿಯೇ ಇರಲಿಲ್ಲ.
ಅರ್ಧ ಶತಮಾನದ ಹಿಂದೆ ನಾಟಕ ಎಂಬುದು ಜನ ಮನ ಸೆಳೆಯುವ ಲೋಕವಾಗಿತ್ತು. ಚಲನಚಿತ್ರ ರಂಗವು ಬಣ್ಣದತ್ತ ಹೊರಳುತ್ತಿತ್ತು. ನಾಟಕ ನೋಡಲು ಜನರು ಗಾಡಿ ಕಟ್ಟಿಕೊಂಡು ಬಂದು ಗುಂಪಾಗಿ ನೋಡುತ್ತಿದ್ದರು. ಹಾಗೂ ಹೀಗೂ ಹತ್ತೂವರೆ ಗಂಟೆಗೆ ನಾಟಕ ಆರಂಭವಾಗಿ ಎರಡೂವರೆ ಗಂಟೆಯವರೆಗೆ ನಡೆದರೆ ಅದು ಆಗ ನಾಟಕ. ಅದೆಲ್ಲ ಇಂದು ಹಳ್ಳಿಗಳಲ್ಲೂ ಇಲ್ಲ. ಇನ್ನು ಆಟದ ಮೇಳದ ಎರಡನೇ ವೇಷಧಾರಿ ಕೂಡ ತನ್ನ ವೇಷದ ಸಾಮಗ್ರಿಯ ಬೆತ್ತದ ಪೆಟ್ಟಿಗೆಯನ್ನು ತಾನೇ ಹೊತ್ತು ನಡೆಯುತ್ತಿದ್ದ ಕಾಲವದು.
ಸಾಂಪ್ರದಾಯಿಕ ಜಾತೀಯ ಗುತ್ತಿಗೆಗೆ ವಿರುದ್ಧವಾಗಿ ಶೂದ್ರರು ಗೋಳಿಗರಡಿ ಮೇಳದಂತಾವನ್ನು ಕಟ್ಟಿ ಏಗಿದ್ದೂ ಇದೆ. ಊರೂರು ಅಲೆದು ಅಂದಂದೇ ಹಣ ಸಂಗ್ರಹಿಸಿ ಆ ಊರಿನಲ್ಲಿ ಅಂತಾ ಮೇಳಗಳವರು ಅಂದೇ ಆಟ ಆಡಬೇಕಾದ ದಿನಗಳು ಅವು. ಇಂದು ಕಲಾವಿದರು ಆಟದ ಸಮಯಕ್ಕೆ ವಾಹನಗಳಲ್ಲಿ ಬರುತ್ತಾರೆ. ಮೇಳದ ಎಲ್ಲ ಸಾಮಗ್ರಿ ತರಲು ಹೊಂದಿಸಲು ಬೇರೆಯೇ ಸಿಬ್ಬಂದಿ ಇರುತ್ತದೆ. ಅವರು ಹಗಲು ಎಲ್ಲ ವ್ಯವಸ್ಥೆ ಮಾಡುತ್ತಾರೆ.
ದೈವ ರಂಗ ಸೇವೆ ಎನ್ನುವುದು ಕೂಡ ಸರಿಯಾದ ಬೆಳಕು ಕಂಡುದು ಇತ್ತೀಚೆಗೇನೆ. ದೈವಾವೇಶಗೊಳ್ಳುವ ವ್ಯಕ್ತಿಯಲ್ಲಿ ಎಲ್ಲ ಜಾತಿಯವರು ತಗ್ಗಿ, ಬಗ್ಗಿ ದೈವವೇ ಎಂದು ನಡೆದುಕೊಳ್ಳುತ್ತಾರೆ. ಆದರೆ ದೈವ ನರ್ತಕ ವೇಷ ಕಳಚುತ್ತಲೇ ದಾನಿಂಬೇ ಎಂದು ಅವರ ಜಾತಿ ಮತ್ತು ಹೆಸರನ್ನು ಕೀಳಾಗಿ ಕಂಡು ಮಾತನಾಡುತ್ತಿದ್ದರು. ಅಂದರೆ ವೇಷಕ್ಕೆ ಮಾತ್ರ ಬೆಲೆ. ಅದನ್ನು ನಿರ್ವಹಿಸುವ ವ್ಯಕ್ತಿಗೆ ಬೆಲೆಯಿಲ್ಲ. ಆದರೆ ಕಳೆದೆರಡು ದಶಕದಿಂದ ಬದಲಾವಣೆ ಆಗಿದೆ. ದೈವ ನರ್ತಕರು ಒಳ್ಳೆಯ ಸಂಭಾವನೆ ಮತ್ತು ಗೌರವ ಪಡೆಯುತ್ತಿದ್ದಾರೆ. ಆದರೂ ಅವನು ದೈವದ ವೇಷದಲ್ಲಿ ನನ್ನ ಹೆಸರು ಹೇಳಿ ಅಷ್ಟು ಜೋರಾಗಿ ಕೂಗಿದ ಎಂದು ಹೇಳುವವರು ಈಗಲೂ ಇಲ್ಲದೆ ಇಲ್ಲ.
ನಾಟಕದಲ್ಲಿ ರಾಜಾ ಪಾರ್ಟ್ ರಂಗದೊರೈ ನಿಜ ಜೀವನದಲ್ಲಿ ಕಷ್ಟದಲ್ಲಿ ಸಂಸಾರ ಸುಧಾರಕ ರಂಗಸೂರ ಆಗಿರಬಹುದು. ಸಿನಿಮಾ ಕ್ಷೇತ್ರದಲ್ಲಿ ಕೂಡ ಹಿಂದೆಲ್ಲ ಆಮ್ದನ್ನಿ ಅಟ್ಟನ್ನಿ, ಖರ್ಚಾ ರುಪಯ್ಯ. ಇಂದು ಆ ಸ್ಥಿತಿ ಇಲ್ಲ. ರಂಗದಿಂದ ತೆರೆಯವರೆಗೆ ಇಂದು ಆ ಸ್ಥಿತಿ ಇಲ್ಲ ಎಂದ ಕೂಡಲೆ ಎಲ್ಲ ಬದಲಾಗಿದೆ ಎಂದು ಅರ್ಥವಲ್ಲ. ಕೆಲವರಿಗೆ ಯಾವುದೇ ಅವಕಾಶ ಸರಿಯಾಗಿ ಸಿಗದೆ ಆರಕ್ಕೆ ಏರದೆ, ಮೂರಕ್ಕೆ ಇಳಿಯದೆ ಇರುತ್ತಾರೆ. ಕೆಲವೊಮ್ಮೆ ಎಲ್ಲೂ ಸಲ್ಲದವರಾಗಿ ಕಳೆದು ಹೋಗುತ್ತಾರೆ.
ಇಷ್ಟಕ್ಕೂ ನಾಟಕ ಎಂದರೆ ಏನು? ಸಮಾಜದಲ್ಲಿ ನಡೆಯುವುದನ್ನು ಮನೋರಂಜನೆ ಇಲ್ಲವೇ ತತ್ವ ಬಿತ್ತನೆ ರೂಪದಲ್ಲಿ ಒಂದು ಕ್ರಮದಲ್ಲಿ ಜನರೆದುರು ತೆರೆದಿಡುವುದಾಗಿದೆ. ಇದಕ್ಕೆ ಮುಖ್ಯ ಮುಖ. ಕತೆಯನ್ನು ನೋಟ ಜೋಡಣೆಯೊಡನೆ ಕೊಂಡೊಯ್ಯುವುದಾಗಿದೆ. ಇದನ್ನೇ ಚಲನಚಿತ್ರದಲ್ಲಿ ಚಿತ್ರಕತೆ ಎನ್ನುತ್ತಾರೆ. ಇದಕ್ಕೆ ತುಳು ಚಿತ್ರರಂಗದಲ್ಲೇ ಅತ್ಯುತ್ತಮ ಉದಾಹರಣೆಯಿದೆ. ವಿಶುಕುಮಾರ್ ನಿರ್ದೇಶನದ ಕೋಟಿ ಚೆನ್ನಯ ಕಪ್ಪು ಬಿಳುಪು ತುಳು ಚಿತ್ರ ಬಂದಿತ್ತು. ಅದು ತುಳುವಿನಲ್ಲಿ ಮೊದಲು 100 ದಿನ ಓಡಿದ ಮತ್ತು ಬೆಂಗಳೂರಿನಲ್ಲೂ ಭರ್ಜರಿಯಾಗಿ ಬಿಡುಗಡೆಯಾದ ಮೊದಲ ಚಲನಚಿತ್ರ.
ಆ ಕಪ್ಪು ಬಿಳುಪು ತುಳು ಚಿತ್ರದ ಯಶಸ್ವಿಗೆ ಅತಿ ಮುಖ್ಯ ಕಾರಣ ಬಿಗಿಯಾದ ಚಿತ್ರಕತೆ. ಮುಂದೆ ಬಣ್ಣದಲ್ಲಿ ರಾಜಶೇಖರ ಕೋಟ್ಯಾನ್ ಮೊದಲಾದವರು ಇದ್ದ ಕೋಟಿ ಚೆನ್ನಯ ತುಳು ಚಿತ್ರ ಬಂತು. ಅದು ಅಸಲಿಗಿಷ್ಟು ಪ್ರದರ್ಶನ ಕಂಡಿತು. ಈ ಚಿತ್ರವು ಪಾಡ್ದನ ಹೋದಂತೆ ಹೋಗಿದೆಯೇ ಹೊರತು ಗಟ್ಟಿಯಾದ ಚಿತ್ರಕತೆಯನ್ನು ಹೊಂದಿರಲಿಲ್ಲ. ಅದೇ ಕೊರತೆ. ಕತೆ, ಕಾದಂಬರಿ, ನಾಟಕಗಳಿಗೆ ಇರುವ ಮುಖ್ಯ ವ್ಯತ್ಯಾಸ ದೃಶ್ಯ ಜೋಡಣೆಯದಾಗಿದೆ.
ಚಲನಚಿತ್ರವಾದರೆ ಕೆಲವು ದೃಶ್ಯಗಳನ್ನು ಮಾತಿಲ್ಲದೆ ತೋರಿಸಬಹುದು. ಆದರೆ ನಾಟಕಗಳಲಿ ಮಾತಿಲ್ಲದ ದೃಶ್ಯವನ್ನು ಹೆಚ್ಚಾಗಿ ತೋರಿಸುವುದು ಸಾಧ್ಯವಿಲ್ಲ. ಅದಕ್ಕೊಂದು ಮಿತಿ ಇರುತ್ತದೆ. ಕತೆಯಲ್ಲಿ ಬರುವ ವಿವರಣೆಯನ್ನು ಚಲನಚಿತ್ರದಲ್ಲಿ ತೋರಿಸಿದಂತೆ ನಾಟಕದಲ್ಲಿ ಹೆಚ್ಚು ತೋರಿಸಲಾಗದು. ಇಲ್ಲಿ ಮಾತೇ ಮಾಣಿಕ್ಯ. ಆದ್ದರಿಂದ ಮಾತು ಬರೆಯುವವರು ಮುಖ್ಯರಾಗುತ್ತಾರೆ. ಅವರೇ ನಾಟಕಕಾರರಾಗುತ್ತಾರೆ. ನಾಟಕಗಳು ಕೆಲವೊಮ್ಮೆ ಒಳ್ಳೆಯದಿದ್ದರೂ ಸೂಕ್ತ ಪ್ರಚಾರ, ಚುರುಕು ಮಾತಿನ ಮಂಟಪ ಇಲ್ಲದಿದ್ದರೆ ಅದು ಜನರನ್ನು ಮುಟ್ಟುವುದು ಕಷ್ಟ. ನಾಟಕವನ್ನು ಜನರಿಗೆ ಮುಟ್ಟಿಸುವಲ್ಲಿ ಕಲಾ ಪೋಷಕರ ಪಾತ್ರವೂ ಮುಖ್ಯ.
ಈಗೀಗ ಕೆಲವರು ಕಲಾ ಪೋಷಕರೆಂದರೆ ದೇಣಿಗೆ ನೀಡುವವರು ಎಂದಾಗಿದೆ. ಕಲಾ ಪೋಷಕರು ಎಂದರೆ ಒಂದು ನಾಟಕ ತಂಡದೊಡನೆ ನಿಂತು ಮುನ್ನಡೆಸುವವರಾಗಿದ್ದಾರೆ. ಕೆಲವೊಮ್ಮೆ ಅವರು ದೇಣಿಗೆ ನೀಡುವಷ್ಟು ಹಣವಂತರಲ್ಲವಾದರೆ, ದೇಣಿಗೆ ನೀಡುವವರನ್ನು ಹಿಡಿದು ಮುನ್ನಡೆಸುವವರು ಕಲಾ ಪೋಷಕರಾಗುತ್ತಾರೆ. ನಾಟಕ ಚಪಟಾಗುವುದು ಇಲ್ಲವೇ ಸೂಪರಾಗುವುದು ಬರೆದ ಮಾತು ಮತ್ತು ಅದನ್ನು ನಟರು ಜನರ ಮುಂದಿಟ್ಟ ಶೈಲಿಯನ್ನು ಅವಲಂಬಿಸಿರುತ್ತದೆ. ಹೀಗೆಯೆ ಮುಂದಿಡಬೇಕು ಎಂದು ತಿಳಿಸುವವರೇ ನಿರ್ದೇಶಕರು.
ಒಟ್ಟಿನಲ್ಲಿ ನಾಟಕಗಳು ಬೆಳಕು, ರಂಗ ಸಜ್ಜಿಕೆ, ಪ್ರಸಾದನ, ನಾದ ಲೀಲೆ, ಸಾಹಿತ್ಯ, ಮಾರ್ಗದರ್ಶನ, ಜನರಿಗೆ ಮುಟ್ಟಿಸುವ ನಟ ವರ್ಗ ಇವೆಲ್ಲವನ್ನೂ ಒಳಗೊಂಡುದಾಗಿದೆ. ಸಂತ ಅಲೋಸಿಯಸ್ ಕಾಲೇಜಿನಲ್ಲಿ ನಡೆದ ನೇಹದ ನೇಯ್ಗೆ ಎಂಬುದು ನಾಟಕ ನೇಯ್ಗೆಗೆ ಒಂದು ಬೀಜ ಮಂತ್ರ. ಆ ಬೀಜ ಮೊಳೆತು ಮರವಾಗಬೇಕು ಅಷ್ಟೆ.