“ಬಾಲ ನ್ಯಾಯ ಸೋನು ನ್ಯಾಯ”

ಬಿಗ್ ಬಾಸ್ ಮತ್ತು ರೀಲ್ಸ್ ಮೂಲಕ ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡಿದ್ದ ಸೋನು ಶ್ರೀನಿವಾಸ ಗೌಡ ಅವರನ್ನು ಕಾನೂನು ಬಾಹಿರ ದತ್ತು ಸ್ವೀಕಾರದ ಸಂಬಂಧ ಬಂಧಿಸಲಾಗಿತ್ತು. ಈಗ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸರಳ ಹಿಂದೆ ಇಡಲಾಗಿದೆ. ಕಾನೂನು ಮತ್ತು ಅದು ಎತ್ತುವ ಪ್ರಶ್ನೆಗಳು ಇಲ್ಲಿ ಮಗುವಿನ ಸ್ಥಿತಿಗತಿಗೆ ಉತ್ತರವನ್ನು ನೀಡುವುದಿಲ್ಲ. ಒಟ್ಟಿನಲ್ಲಿ ಏನೂ ಅರಿಯದ ವಯಸ್ಸಿನಲ್ಲಿ ಇಂತಾ ಮಕ್ಕಳು ತ್ರಿಶಂಕು ಮನೋ ತುಮುಲಕ್ಕೆ ಒಳಗಾಗುತ್ತಾರೆ.


ಒಂದು ಕಾಲದಲ್ಲಿ ಮಕ್ಕಳಿಲ್ಲದವರು ತಮ್ಮ ಸಂಬಂಧದೊಳಗೆ ಯಾರನ್ನಾದರೂ ಸಾಕಿಕೊಳ್ಳುತ್ತಿದ್ದರು. ಅದಕ್ಕೆ ಸಂಬಂಧ ಮಾತ್ರವೇ ಸಾಕ್ಷಿ. ಮತ್ತೆ ಕೆಲವರು ಎಲ್ಲೋ ಸಿಕ್ಕಿದ ಇಲ್ಲವೇ ಅನಾಥವಾದ ಮಕ್ಕಳನ್ನು ಸಾಕಿಕೊಳ್ಳುತ್ತಿದ್ದರು. ಇದಕ್ಕೆ ಊರ ಹಿರಿಯರೇ ಸಾಕ್ಷಿ. ಅದರಾಚೆ ಅದರಲ್ಲಿ ಕಾಗದ ಪತ್ರಗಳೆಲ್ಲ ಇರಲಿಲ್ಲ. ನಂಬಿಕೆ ಮಾತ್ರ ಅಲ್ಲಿನ ಕಣ್ಣಿಗೆ ಕಾಣದ ಕಾಗದ. ದತ್ತು ಸ್ವೀಕಾರ ಅಧಿಕೃತವಾಗಿರಬೇಕು ಎಂಬುದು ಯೂರೋಪಿನಲ್ಲಿ ಮೊದಲು ನೀತಿ ನಿಯಮಗಳಾದವು.


ನಮ್ಮ ಮೈಸೂರು ದೊರೆಗಳನ್ನೇ ನೋಡಿ. ಜಯಚಾಮರಾಜೇಂದ್ರ ಒಡೆಯರ್‍ರ ಮಗ ಶ್ರೀಕಂಠದತ್ತ ಒಡೆಯರ್. ಶ್ರೀಕಂಠದತ್ತ ಒಡೆಯರ್‍ರಿಗೆ ಮಕ್ಕಳಿಲ್ಲ. ಹಾಗಾಗಿ ಯದುರಾಜರ ದತ್ತು. ಈ ಯದುರಾಜ ಹೊರಗಿನವರೇನೂ ಅಲ್ಲ. ಜಯಚಾಮರಾಜೇಂದ್ರ ಒಡೆಯರ್‍ರ ಮಗಳ ಮಗ. ಎಂದರೆ ಶ್ರೀಕಂಠದತ್ತ ಒಡೆಯರ್‍ರ ಒಡಹುಟ್ಟಿದವಳ ಮಗ. ಇದು ರಾಜಸತ್ತೆಯ ದತ್ತಕ. ಯೂರೋಪಿನಲ್ಲೂ ಮಧ್ಯ ಯುಗದಲ್ಲಿ ಬಂದುದು ಇದೇ ತಕರಾರು. ಜನಸಾಮಾನ್ಯರಲ್ಲಿ ದತ್ತು ನಂಬಿಕೆಯ ಮೇಲೇ ಉಳಿದರೂ ರಾಜಸತ್ತೆಗಳಲ್ಲಿ ದತ್ತು ಎಂಬುದಕ್ಕೆ ಸಾರ್ವತ್ರಿಕ ಮಾನ್ಯತೆ ಬೇಕಾಗಿತ್ತು. ಆಸ್ತಿವಂತರಲ್ಲೂ ಇದು ತಕರಾರಿಗೆ ಕಾರಣವಾಗುತ್ತಿತ್ತು. ಅದಕ್ಕೋಸುಗ ಬಂದುದು ದತ್ತು ಸ್ವೀಕಾರ ಕಾಯ್ದೆಗಳು.


ಅಂತರರಾಷ್ಟ್ರೀಯ ದತ್ತು ಸ್ವೀಕಾರ ಕಾಯ್ದೆಯಂತೆ ಒಬ್ಬರು ಇಲ್ಲವೇ ದಂಪತಿ ಯಾವುದಾದರೂ ಮಗುವನ್ನು ಕಾನೂನು ರೀತ್ಯಾ ದತ್ತು ಸ್ವೀಕಾರ ಮಾಡಬಹುದು. ಅಂತರ ದೇಶಗಳ ನಡುವೆ ದತ್ತು ಸ್ವೀಕಾರವನ್ನು ಹೇಗ್ ಸಮಾವೇಶದಲ್ಲಿ ಅಂತಿಮಗೊಳಿಸಲಾಗಿದೆ. ಇದನ್ನು ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಆಂಡ್ ಕೋ ಆಪರೇಶನ್ ಇನ್ ರೆಸ್ಪೆಕ್ಟ್ ಆಫ್ ಇಂಟರ್ ಕಂಟ್ರಿ ಅಡಾಪ್ಶನ್ ಎನ್ನಲಾಗಿದೆ. ಇದು ಆಧುನಿಕ ನೀತಿ ನಿಯಮಾವಳಿಯನ್ನು ಹೇಳುತ್ತದೆ. ಇದು ಹೇಗ್ ವಿಶ್ವ ಸಂಸ್ಥೆ ಸಮಾವೇಶದ ಬಳಿಕ 2008ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸರ್ವ ದೇಶ ಒಪ್ಪಂದ ಎಂದು ಒಪ್ಪಲಾಯಿತು.


ಇದರಲ್ಲಿ ಮಗುವಿಗೆ ಪೌರತ್ವ ನೀಡುವುದಕ್ಕೆ ಮುಖ್ಯತ್ವವಿದೆ. ಅದಕ್ಕಿಂತ ಮೊದಲೇ ಯೂರೋಪಿನ ದೇಶಗಳು ನಾನಾ ರೀತಿಯಲ್ಲಿ ದತ್ತು ಸ್ವೀಕಾರ ಕಾಯ್ದೆಯನ್ನು ಹೊಂದಿದ್ದವು. ಅದು ಭಾರತೀಯರಿಗೆ ಮುಖ್ಯವಾಗಿ ಪರಿಚಯವಾಗುವುದು ಬ್ರಿಟಿಷರು ಕಿತ್ತೂರು, ಜಾನ್ಸಿ ಮೊದಲಾದ ಸಂಸ್ಥಾನಗಳ ಮೇಲೆ ಕೈಗೊಂಡ ಕ್ರಮಗಳಿಂದ. ಕಿತ್ತೂರು ಮತ್ತು ಜಾನ್ಸಿಗಳು ಮೊದಲು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡಿದ್ದವು. ಹಾಗಾಗಿ ಬ್ರಿಟಿಷರಾಡಳಿತದ ಕಾನೂನುಗಳನ್ನು ಆ ರಾಜ ಸಂಸ್ಥಾನಗಳು ಪಾಲಿಸಬೇಕು ಎನ್ನುವುದು ಬ್ರಿಟಿಷರ ಒತ್ತಡವಾಗಿತ್ತು.
ದತ್ತು ಸ್ವೀಕಾರದಿಂದ ರಾಜ್ಯಗಳು ಪರ ವಶವಾಗುವುದನ್ನು ತಡೆದು ತಮ್ಮ ಕೈವಶ ಮಾಡಿಕೊಳ್ಳುವುದು ಕೂಡ ಬ್ರಿಟಿಷರ ತಂತ್ರವಾಗಿತ್ತು. ಹಾಗಾಗಿ ಬ್ರಿಟಿಷರು ದತ್ತು ಒಪ್ಪದ್ದರಿಂದ ಕಿತ್ತೂರು ಚೆನ್ನಮ್ಮ ಮತ್ತು ಜಾನ್ಸಿ ರಾಣಿ ಲಕ್ಷ್ಮೀಬಾಯಿ ಪ್ರಾಣ ತೆತ್ತರು. ಆದರೆ ಅದಕ್ಕೆ ಮೂಲ ಕಾರಣ ಆ ಎರಡೂ ಸಂಸ್ಥಾನಗಳು ಬ್ರಿಟಿಷರೊಡನೆ ಮೊದಲು ಒಂದಾಗಿದ್ದವು ಮತ್ತು ಬ್ರಿಟಿಷ್ ಸೇನೆಯೊಡನೆ ಆ ಸಂಸ್ಥಾನಗಳ ತುಕಡಿಗಳು ಬ್ರಿಟಿಷರ ಪರ ಯುದ್ಧ ಮಾಡಿದ್ದವು.


ಇಲ್ಲಿ ಬರುವ ದತ್ತು ಸ್ವೀಕಾರವು ರಾಜ ಸತ್ತೆಗಳು ಕೈ ಬದಲಾಗುವ ದೊಡ್ಡ ವ್ಯವಹಾರವಾದ್ದರಿಂದ ದೊಡ್ಡ ಶಕ್ತಿಗಳ ತಂತ್ರಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ನಮ್ಮ ಅನಾಥಾಲಯಗಳಿಂದ ಎಷ್ಟೋ ಮಕ್ಕಳನ್ನು ಯೂರೋಪಿಯನರು ದತ್ತು ಪಡೆದುಕೊಂಡು ಹೋದುದಿದೆ. ಅದಕ್ಕೆ ಬ್ರಿಟಿಷರ ಕಾಲದ ದತ್ತು ಕಾಯ್ದೆಯನ್ನೇ ಅನುಸರಿಸಲಾಗಿತ್ತು. ಅಲ್ಲದೆ ಅಂತರರಾಷ್ಟ್ರೀಯ ದತ್ತು ನಿಯಮಾವಳಿಗಳನ್ನು ಪಾಲಿಸಲಾಗಿತ್ತು. ಕೆಲವರು ತಮ್ಮ ಮೂಲ ಬೇರು ಹುಡುಕುತ್ತ ಬಂದು ತಾಯನ್ನು ಹುಡುಕುವಲ್ಲಿ ಗೆದ್ದಿದ್ದಾರೆ; ಕೆಲವರು ಎಡವಿದ್ದಾರೆ. ಕೆಲವರಿಗೆ ಬೇರು ಸಿಗಲೇ ಇಲ್ಲ.
ಅಲೆಕ್ಸ್ ಹ್ಯಾಲಿ ಎಂಬ ಅಮೆರಿಕದ ಕಪ್ಪು ವ್ಯಕ್ತಿ ತನ್ನ ಆಫ್ರಿಕಾದ ಬೇರುಗಳ ಬಗೆಗೆ ‘ರೂಟ್ಸ್ ದ ಸಗಾ ಆಫ್ ಅಮೆರಿಕನ್ ಫ್ಯಾಮಿಲಿ’ ಎಂಬ ಕಾದಂಬರಿಯನ್ನು 1976ರಲ್ಲಿ ಬರೆದದ್ದು ದೊಡ್ಡ ಸದ್ದು ಮಾಡಿತ್ತು. ಆಫ್ರಿಕಾದಿಂದ ಅವರ ಪೂರ್ವಜರು ಯಾವ ದತ್ತು ಸ್ವೀಕಾರವೂ ಇಲ್ಲದೆ ಅಮೆರಿಕಕ್ಕೆ ದಸ್ಯು ಕೂಲಿಗಳಾಗಿ ಮಾರಾಟವಾಗಿ ತರಲ್ಪಟ್ಟರು. ಮುಂದೆ ಅವರು ಹೇಗೆ ಅಲ್ಲಿ ತಮ್ಮ ಬೇರನ್ನು ಅಮೆರಿಕದಲ್ಲಿ ಊರಿದರು; ಆದರೂ ಮರೆಯದ ಆಫ್ರಿಕಾದ ಬೇರಿನ ವೇದನೆಯೇ ಈ ಕಾದಂಬರಿಯ ವಸ್ತು.


ಭಾರತದಲ್ಲಿ ಪಾರಸಿಗಳು, ಕ್ರಿಶ್ಚಿಯನರು ದತ್ತು ಸ್ವೀಕಾರ ಮಾಡುವುದು ಹೆಚ್ಚು. ಆದರೆ ಅದಕ್ಕೆ ಅವರ ಧಾರ್ಮಿಕ ಕಾನೂನುಗಳು ಎಂಬುದು ಇಲ್ಲ. ಮುಸ್ಲಿಂ ವ್ಯಕ್ತಿಗತ ಕಾನೂನಿನಲ್ಲಿ ಹೇಗೆ ದತ್ತು ಸ್ವೀಕರಿಸಬಾರದು ಎಂಬುದಕ್ಕೆ ಹೆಚ್ಚು ಒತ್ತು ನೀಡಿ ಬರೆಯಲಾಗಿದೆ. ದತ್ತು ಸ್ವೀಕಾರಕ್ಕೆ ಅವಕಾಶ ಇರುವುದನ್ನೂ ಹೇಳಲಾಗಿದೆ. ಸ್ವತಂತ್ರÀ ಭಾರತದಲ್ಲಿ ಹಿಂದೂ ದತ್ತಕ ಮತ್ತು ಜೀವನಾಂಶ ಅಧಿನಿಯಮ ಕಾಯ್ದೆಯು 1956ರಲ್ಲಿ ಜಾರಿಗೆ ಬಂದಿದೆ. ಅದು ಬ್ರಿಟಿಷ್ ದತ್ತಕ ಕಾಯ್ದೆಯನ್ನು ಹೊರದಬ್ಬಿಲ್ಲವಾದರೂ ಹಿಂದೂ ಜನ ನಂಬಿಕೆಗೆ ತಕ್ಕಂತೆ ಮಾರ್ಪಾಡನ್ನು ಕಂಡಿದೆ.
ಬಾಲ ನ್ಯಾಯ ಅರ್ಥಾತ್ ಜ್ಯುವೆನಲ್ ಜಸ್ಟಿಸ್ ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯ್ದೆಯು 2015ರಲ್ಲಿ ಜಾರಿಗೆ ಬಂದಿದ್ದು, ಭಾರತದ ಪ್ರತಿಯೊಬ್ಬ ಪ್ರಜೆಯು ದತ್ತು ಸ್ವೀಕಾರ ಮಾಡಲು ಅವಕಾಶ ನೀಡಲಾಗಿದೆ. ಆದರೆ ಇಲ್ಲಿ ಬಾಲ ನ್ಯಾಯ ಮತ್ತು ಮಕ್ಕಳ ರಕ್ಷಣೆ ಮುಖ್ಯವಾಗುತ್ತದೆ. ದತ್ತು ಸ್ವೀಕಾರ ಎನ್ನುವುದು ಎರಡು ಮಗ್ಗುಲನ್ನು ಹೊಂದಿರುತ್ತದೆ. ಒಂದು ದತ್ತು ಸ್ವೀಕಾರದ ಮೂಲಕ ದತ್ತು ಪಡೆದ ಕುಟುಂಬವು ಒಂದು ವಾರಿಸನ್ನು ಪಡೆಯುತ್ತದೆ. ಎಲ್ಲೋ ಕೆಲವೊಮ್ಮೆ ವಾರಸು ಉದ್ದೇಶವಿಲ್ಲದೆಯೂ ದತ್ತು ಪಡೆಯುವವರಿದ್ದಾರೆ.

ಇನ್ನೊಂದು ಮಗ್ಗುಲು ಮಗುವಿಗೆ ನ್ಯಾಯ. ಒಂದು ಕಾಲದಲ್ಲಿ ಧನಿಕರು, ಜಮೀನ್ದಾರರು ಬಡವರ ಮಕ್ಕಳನ್ನು ಸಾಕ್ತೀನಿ ಎಂದು ಒಯ್ದು ಬಿಟ್ಟಿ ಚಾಕರಿಗೆ ಹಚ್ಚುತ್ತಿದ್ದರು. ದತ್ತು ಪಡೆದ ಮಗುವಿನ ರಕ್ಷಣೆ ಎಂದರೆ ಅದಕ್ಕೆ ಕಲಿಕೆ, ಆರೋಗ್ಯ ಭಾಗ್ಯ, ಉತ್ತಮ ಪ್ರಜೆಯಾಗಿ ಬದುಕುವ ಅವಕಾಶ ಒದಗಿಸುವುದಾಗಿದೆ. ಕನ್ನಡದ ಖ್ಯಾತ ನಟರಾಗಿದ್ದ ಬಾಲಕೃಷ್ಣರನ್ನು ಮೂರು ರೂಪಾಯಿಗೆ ಮಾರಿದ್ದರಂತೆ. ಅವರು ರಂಗ ಸಹವಾಸದಲ್ಲಿ ತನ್ನನ್ನು ರೂಪಿಸಿಕೊಂಡರು. ಸೋನು ಶ್ರೀನಿವಾಸ ಗೌಡ ಅವರು ಒಳ್ಳೆಯ ಉದ್ದೇಶದಿಂದ ಬಾಲಕಿಯೊಬ್ಬಳನ್ನು ಉತ್ತಮ ಪ್ರಜೆಯಾಗಿ ಬೆಳೆಸುವ ಉದ್ದೇಶದಿಂದ ದತ್ತು ಪಡೆದಿರುತ್ತಾರೆ. ಆದರೆ ಅಲ್ಲಿ ಕಾನೂನು ಪಾಲನೆಯ ಸಮಸ್ಯೆ ಎದುರಾಗಿದೆ. ಹಣ ಕೊಟ್ಟು ಕೊಂಡಿದ್ದಾರೆ ಎಂಬ ಆರೋಪವೂ ಈಗ ಸೇರಿದೆ. ಈಗ ಅದು ಕಾನೂನು ವ್ಯಾಪ್ತಿಗೆ ಸೇರಿದ ವ್ಯವಹಾರವಾಗಿದೆ. ದತ್ತು ಪಡೆಯುವವರು ಮಗುವನ್ನು ಸಾಕುವ ಅರ್ಹತೆ, ಸವಲತ್ತು ಹೊಂದಿರಬೇಕು ಎನ್ನುವುದು ಕಾಯ್ದೆಯ ಅತಿ ಮುಖ್ಯ ಅಂಶವಾಗಿದೆ.

ಬರಹ: ಪೇರೂರು ಜಾರು( ಹಿರಿಯ ಸಂಪಾದಕರು)

Related Posts

Leave a Reply

Your email address will not be published.