ಆಳುವವನಿಗೇ ದೊಡ್ಡ ಗಂಟು
ತಾನು ಕಳ್ಳ ಪರರ ನಂಬ ಎಂಬ ಸ್ಥಿತಿ ಯಾರದ್ದು ಎಂದು ನೀವೇ ಲೆಕ್ಕ ಹಾಕಿಕೊಳ್ಳಿ. ಒಳಾಡಳಿತ ಮಂತ್ರಿಗಳಾದ ಅಮಿತ್ ಶಾ ಹೇಳುವುದು ಕೇಳಿ. ನಾವು ಚುನಾವಣಾ ಬಾಂಡ್ ಮೂಲಕ ಮಾತ್ರ ಪಕ್ಷದ ನಿಧಿ ಪಡೆದಿದ್ದೇವೆ. ಆದರೆ ಕಾಂಗ್ರೆಸ್ ಮತ್ತಿತರ ಪಕ್ಷಗಳು ನಗದು ದೇಣಿಗೆ ಪಡೆದು ಸಾವಿರ ರೂಪಾಯಿ ಕಿಸೆಗೆ ಹಾಕಿಕೊಂಡು, ನೂರು ರೂಪಾಯಿ ಮಾತ್ರ ಪಕ್ಷದ ಖಾತೆಗೆ ಜಮಾ ಮಾಡಿವೆ. ಅಮಿತ್ ಶಾ ಅವರ ಈ ಹೇಳಿಕೆಗೆ ಬಪ್ಪರೆ ಭಳಿರೇ ಎನ್ನದೆ ವಿಧಿಯಿಲ್ಲ.
ಭಾರ್ತಿ ಏರ್‍ಟೆಲ್‍ನವರು ಬಿಜೆಪಿ ಪಕ್ಷಕ್ಕೆ ದೇಣಿಗೆಯಾಗಿ ಕಳೆದ ಮೂರು ವರುಷಗಳಲ್ಲಿ ಮೂರು ಕಾಸೋಲೆ ಮೂಲಕ 65 ಕೋಟಿ ರೂಪಾಯಿ ನೀಡಿದ್ದಾಗಿ ಹೇಳಲಾಗಿದೆ. ಅವರು ಬೇರೆ ಪಕ್ಷಗಳಿಗೆ ನಗದು ನೀಡಿದ್ದಾರೆ ಎಂದರೆ ಭಿಕ್ಷೆ ಹಾಕಿದ್ದಾರೆ ಎಂದು ತಿಳಿಯಬೇಕೆ? ರಾಜಕೀಯ ಪಕ್ಷಗಳ ದೇಣಿಗೆಗೆ ತೆರಿಗೆ ಇಲ್ಲ ಎಂಬ ನಿಯಮವನ್ನು ಕಾಂಗ್ರೆಸ್ ಪಕ್ಷವೇ ಮಾಡಿದೆ. ಆದರೆ ಈಗ ತೆರಿಗೆ ಕಟ್ಟಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಣಕಾಸು ವ್ಯವಹಾರದ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ.
ಹಾಗಿದ್ದೂ ಬಿಜೆಪಿ ಪಕ್ಷ ಹೋಗಲಿ ಯಾವ ಪಕ್ಷ ಕೂಡ ದೇಣಿಗೆ ಪಡೆದುದಕ್ಕೆ ತೆರಿಗೆ ಕಟ್ಟಿಲ್ಲ ಎನ್ನುವುದು ಸ್ಪಷ್ಟವಿದೆ. ಅಧಿಕೃತ ಚುನಾವಣಾ ಬಾಂಡ್ ದಾಖಲೆಯಂತೆ ಉಳಿದೆಲ್ಲ ಪಕ್ಷಗಳು ಚುನಾವಣಾ ಬಾಂಡ್ ಮೂಲಕ ಪಡೆದ ದೇಣಿಗೆಯ ಒಟ್ಟು ಮೊತ್ತಕ್ಕಿಂತ ಹೆಚ್ಚು ದೇಣಿಗೆಯನ್ನು ಬಿಜೆಪಿ ಪಡೆದಿದೆ ಎನ್ನಲಾಗಿದೆ. ಹಾಗಾದರೆ ಅದಕ್ಕೆ ತೆರಿಗೆ ಎಷ್ಟು, ಕಾಂಗ್ರೆಸ್ ಪಕ್ಷದ ಖಾತೆ ಸ್ಥಗಿತಗೊಳಿಸಿದಂತೆ ಆ ಬ್ಯಾಂಕ್ ಖಾತೆಯನ್ನೂ ಸ್ಥಗಿತಗೊಳಿಸಲಾಗುತ್ತದೆಯೇ ಎಂಬುದು ತಿಳಿದು ಬಂದಿಲ್ಲ.
ರಾಜಕೀಯ ಪಕ್ಷಗಳಿಗೆ ದೇಣಿಗೆಗಳು ನಾನಾ ರೂಪದಿಂದ ಬರುತ್ತದೆ. ಮುಖ್ಯವಾಗಿ ಪಕ್ಷದ ಸದಸ್ಯರಿಗೆ ಇರುವ ಸದಸ್ಯತ್ವ ಶುಲ್ಕ. ಒಂದು ಕಾಲದಲ್ಲಿ ಕಾಂಗ್ರೆಸ್ ಸದಸ್ಯತ್ವ ಪಡೆಯಲು ಇದ್ದ ಶುಲ್ಕ ನಾಲ್ಕಾಣೆ ಮಾತ್ರ. ಅದು ಬಿಟ್ಟರೆ ಪಕ್ಷಗಳಿಗೆ ತಮ್ಮ ತತ್ವಕ್ಕೆ ಹೊಂದುವುದನ್ನು ನೋಡಿ ಹಣವಂತರು ದೇಣಿಗೆ ಕೊಡುತ್ತಾರೆ. ಉದ್ಯಮಿಗಳು ಯಾವಾಗಲೂ ಆಳುವ ಪಕ್ಷಕ್ಕೆ ಹೆಚ್ಚು ಮತ್ತು ಪ್ರತಿ ಪಕ್ಷಕ್ಕೆ ಕಡಿಮೆ ದೇಣಿಗೆ ನೀಡುವುದನ್ನು ರೂಢಿ ಮಾಡಿಕೊಂಡಿರುತ್ತಾರೆ.
ಇವುಗಳನ್ನು ಮೀರಿ ರಾಜಕೀಯ ಪಕ್ಷಗಳು ಅಡ್ಡ ಹಾದಿಯಿಂದಲೂ ದೇಣಿಗೆ ಪಡೆಯುತ್ತವೆ. ಹೇಗೆ? ಪ್ರಭಾವ ಬೀರುವ ಮೂಲಕ, ಸರಕಾರದ ಅನುಕೂಲ ಒದಗಿಸುವುದಕ್ಕಾಗಿ ಪಾಲು, ಒತ್ತಡ ಹೇರಿ, ಒತ್ತಾಯದಿಂದ ಬೆದರಿಸಿ ಕೂಡ ಪಕ್ಷದ ನಿಧಿ ಕೂಡಿಸುವವರಿದ್ದಾರೆ. ಬಿಜೆಪಿ ಅವಧಿಯಲ್ಲಿ ಕೆಲವು ಕಂಪೆನಿಗಳು ಹೆಚ್ಚು ಸರಕಾರೀ ಗುತ್ತಿಗೆ ಪಡೆದು ಆ ಪಕ್ಷಕ್ಕೆ ಹೆಚ್ಚು ದೇಣಿಗೆ ನೀಡಿರುವುದು ತಿಳಿದು ಬಂದಿದೆ. ಇನ್ನು ಅಮಿತ್ ಶಾ ಅವರು ಹೇಳಿದಂತೆ ಕೆಳ ಹಂತದಲ್ಲಿ ಕೆಲವರು ಪಕ್ಷಕ್ಕಾಗಿ ನಿಧಿ ಸಂಗ್ರಹಿಸಿ ಒಂದಷ್ಟು ತಮ್ಮ ಕಿಸೆಗೆ ತುಂಬಿಸಿಕೊಳ್ಳುವ ಕೆಲಸ ಎಲ್ಲ ಪಕ್ಷಗಳಲ್ಲಿಯೂ ನಡೆಯುತ್ತದೆ.
ಪಾಕಿಸ್ತಾನದ ಜೊತೆಗೆ ಅಧಿಕಾರದಲ್ಲಿದ್ದ ಎಲ್ಲ ಪಕ್ಷಗಳೂ ಮೇಜವಾನಿ ಮಾತುಕತೆ ನಡೆಸಿವೆ. ಕಾಂಗ್ರೆಸ್, ಬಿಜೆಪಿ ಅದಕ್ಕೆ ಹೊರತಲ್ಲ. ವಾಜಪೇಯಿಯವರೂ ಹೋಗಿದ್ದರು, ಬಿರಿಯಾನಿ ಪಾರ್ಟಿ ಮಾತುಕತೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿತ್ತು. ವಾಜಪೇಯಿಯವರು ಭೋಜನ ಪ್ರಿಯರಾಗಿದ್ದರು, ಅದಕ್ಕೆ ತಕ್ಕಂತೆ ಪಾಕಿಸ್ತಾನದಲ್ಲೂ ನಡೆದುಕೊಂಡಿದ್ದರು. ಪ್ರಧಾನಿ ಮೋದಿಯವರು 2015ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದಾಗಲೂ ಊಟದ ಮೇಜು ಭರ್ಜರಿಯಾಗಿಯೇ ಇತ್ತು. ಈಗ ಪಾಕಿಸ್ತಾನದ ಕಂಪೆನಿಯೊಂದು ಬಿಜೆಪಿಗೆ ದೇಣಿಗೆ ನೀಡಿದ್ದಾಗಿ ವರದಿಯಾದ ಮರುದಿನವೇ ಪಾಕಿಸ್ತಾನದಲ್ಲಿ ಅಂತಾ ಕಂಪೆನಿಯೇ ಇಲ್ಲ ಎಂದು ಪಾಕಿಸ್ತಾನ ಸರಕಾರ ಹೇಳಿದೆಯಂತೆ. ಬಿಜೆಪಿ ಕೇಳಿದರೆ ಪಾಕಿಸ್ತಾನ ಸರಕಾರವು ಕೂಡಲೆ ಮಾಹಿತಿ ನೀಡುತ್ತದೆ ಎನ್ನುವುದೇ ವಿಶೇಷ.
ಬ್ರಿಟನ್ ಮತ್ತು ಆಸ್ಟ್ರೇಲಿಯಾದಲ್ಲಿ ಜನಸಂಖ್ಯೆ ಕಡಿಮೆ ಇದ್ದುದರಿಂದ ಅಲ್ಲಿನ ಪ್ರಮಖವಾದ ಪಕ್ಷಗಳು ವೆಚ್ಚಕ್ಕೆ ಬೇಕಾದಷ್ಟು ದೇಣಿಗೆ ಸಂಗ್ರಹವಾಗದೆ ಚುನಾವಣೆ ಕಾಲದಲ್ಲಿ ಒದ್ದಾಡುತ್ತಿದ್ದವು. 1950ರ ದಶಕದ ಬಳಿಕವೇ ಪರಿಸ್ಥಿತಿ ಸುಧಾರಿಸಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ತೆರಿಗೆ ನೀಡುವವರು ತಮ್ಮ ತೆರಿಗೆಯಲ್ಲಿ 3 ಡಾಲರನ್ನು ನೇರವಾಗಿ ತಮ್ಮಿಷ್ಟದ ಅಧ್ಯಕ್ಷೀಯ ಅಭ್ಯರ್ಥಿಯ ನಿಧಿಗೆ ನೀಡಬಹುದು. ಹೆಚ್ಚು ನೀಡುವುದು ಲೆಕ್ಕ ನೀಡಬೇಕಾಗಿರುವುದಾಗಿರುತ್ತದೆ. ಈ ವರುಷ ಯುಎಸ್‍ಎಯಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.
ಫ್ರಾನ್ಸ್, ಇಟೆಲಿ, ನೆದರ್‍ಲ್ಯಾಂಡ್ಸ್, ಅಯರ್‍ಲ್ಯಾಂಡ್ ಮೊದಲಾದ ಕಡೆ ಸಮಾಜವಾದಿ ಇಲ್ಲವೇ ಕಮ್ಯೂನಿಸ್ಟ್ ಪಕ್ಷಗಳವರು ತಮ್ಮ ಕಾರ್ಮಿಕ ಸಂಘಟನೆಗಳ ಸಂಬಳದಿಂದ ನಿಶ್ಚಿತ ಮೊತ್ತವನ್ನು ಮಾತ್ರ ಪಕ್ಷದ ನಿಧಿಯಾಗಿ ಪಡೆದುಕೊಳ್ಳುತ್ತವೆ. ಜರ್ಮನಿಯಿಂದ ಜಪಾನ್‍ವರೆಗೆ, ಸ್ಕ್ಯಾಂಡಿನೇವಿಯನ್ ದೇಶಗಳಿಂದ ಮೆಕ್ಸಿಕೋವರೆಗೆ ಹಲವು ದೇಶಗಳ ರಾಜಕೀಯ ಪಕ್ಷಗಳು ಕಾರ್ಯಕರ್ತರನ್ನು ಬಳಸಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸುವುದು ಮಾಮೂಲು. ಇದರಲ್ಲಿ ಎರಡು ವಿಧವಿದೆ. ಒಂದು ನೇರವಾಗಿ ದೇಣಿಗೆ. ಇನ್ನೊಂದು ಟ್ರಸ್ಟ್ ಇತ್ಯಾದಿಗಳ ಮೂಲಕ ಕೊಡುಗೆ ಕೊಡುವುದಾಗಿದೆ.
ವಿದೇಶೀ ದೇಣಿಗೆ ಪಡೆಯಲು ಕೆಲವು ನಿಯಮಗಳಿವೆ. ಅದನ್ನು ಅನುಸರಿಸಿ ದೇಣಿಗೆ ಪಡೆಯುವ ಪಕ್ಷಗಳು ಎಲ್ಲ ಕಡೆ ಇರುತ್ತವೆ. ಈ ದೇಣಿಗೆಗಳು ಸಾಮಾನ್ಯವಾಗಿ ಪ್ರಜಾಪ್ರಭುತ್ವದ ಪರ, ಕಮ್ಯೂನಿಸ್ಟ್ ಪರ, ನಿರಂಕುಶಾಧಿಕಾರದ ಪರ, ನಿಶ್ಚಿತ ವ್ಯಕ್ತಿಯ ಜನಪ್ರಿಯತೆಯ ಪರ ಎಂದು ವಿದೇಶೀ ಸಹಾಯ ರೂಪದಲ್ಲಿ ಸಲ್ಲಿಕೆಯಾಗುತ್ತವೆ. ಯೂರೋಪಿನಲ್ಲಿ ಎರಡನೆಯ ಮಹಾಯುದ್ಧದ ಬಳಿಕ ವಿದೇಶೀ ನೆರವು ಪಡೆಯುವ ಕಾಯ್ದೆಗಳು ಬಂದವು. ಯುಎಸ್‍ಎಯಲ್ಲಿ 1961ರ ಯುಎಸ್ ಫಾರಿನ್ ಅಸಿಸ್ಟೆಂಟ್ ಕಾಯ್ದೆಯು ಈ ನಿಟ್ಟಿನಲ್ಲಿ ಬಂದು ಚಾಲ್ತಿಯಲ್ಲಿದೆ. ಅಮೆರಿಕ ಸರಕಾರವೇ ಹಲವು ದೇಶಗಳಿಗೆ ನೆರವು ನೀಡುವುದಾದರೂ, ಅದು ವಿದೇಶೀ ದೇಣಿಗೆ ಪಡೆಯಲು ಇಂತಾ ಒಂದು ಕಾಯ್ದೆಯನ್ನು ಹೊಂದಿದೆ.
ಆದರೆ ರಾಜಕೀಯ ವಿದೇಶೀ ದೇಣಿಗೆಗಳು ವಿದೇಶೀ ಹಸ್ತಕ್ಷೇಪಕ್ಕೂ ಕಾರಣವಾಗುತ್ತವೆ. ಸದ್ಯ ಮಾಲ್ಡೀವ್ಸ್ ಭಾರತದ ನೆರವು ಮರೆತು ಚೀನಾದ ನೆರವಿಗೆ ತನ್ನನ್ನು ಒಡ್ಡಿಕೊಂಡಿದೆ. ಅಫಘಾನಿಸ್ತಾನವು ರಶಿಯಾದ ನೆರವಿನಲ್ಲಿ ನಲುಗಿ, ಅಮೆರಿಕದ ಒಳ ತೂರುವಿಕೆಗೆ ಸಿಕ್ಕು, ಈಗ ಇಸ್ಲಾಮಿಕ್ ಕೂಟದ ಕೈಗೆ ಬಿದ್ದಿದೆ. ಆದರೆ ದೇಶೀಯರು. ಅಮೆರಿಕ ಸಂಯುಕ್ತ ಸಂಸ್ಥಾನವು ಮಧ್ಯ ಅಮೆರಿಕದಲ್ಲಿ ದಾಂದಲೆ ಮಾಡಲು ದೇಣಿಗೆ ಮೂಲಕ ಒಳಹೊಕ್ಕು ತಂದ ಹಲವು ಬನಾನಾ ರಿಪಬ್ಲಿಕ್‍ಗಳು ವಿದೇಶೀ ರಾಜಕೀಯ ದೇಣಿಗೆಯ ದುಷ್ಪರಿಣಾಮಗಳನ್ನು ಬಹುಕಾಲ ಉಂಡವು.
ನಿರಂಕುಶಾಧಿಕಾರಿಗಳು ತಮ್ಮ ದೌಲತ್ತಿಗೆ ರಾಜಕೀಯ ದೇಣಿಗೆ ಪಡೆದರೆ, ಪ್ರಜಾಪ್ರಭುತ್ವ ದೇಶದ ರಾಜಕೀಯ ಪಕ್ಷಗಳು ಪಕ್ಷ ನಡೆಸಲು, ಚುನಾವಣೆಗೆ ಎಂದು ದೇಣಿಗೆ ಪಡೆಯುತ್ತವೆ. ಕೆಲವೊಮ್ಮೆ ಮರಿ ಪಕ್ಷಗಳಿಗೆ ದೇಣಿಗೆಯ ಬೋಣಿಯೂ ಆಗುವುದಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಎಂದು ಏಗಬೇಕು ಅಷ್ಟೆ. ಚುನಾವಣಾ ಬಾಂಡ್ ದೇಣಿಗೆಯ ವಿಷಯದಲ್ಲೂ ಇದನ್ನು ಹೇಳಲೇಬೇಕಾಗುತ್ತದೆ.
ಬರಹ: ಪೇರೂರು ಜಾರು