ಪಿಲಿಕುಳದಲ್ಲಿ ಮತ್ಸ್ಯೋತ್ಸವ

ಬಲೆಗೆ ಬಿದ್ದ ಕೆಜಿಗಟ್ಟಲೆ ತೂಕವಿರುವ ಮೀನು . ಬಲೆಯಿಂದ ಇಳಿಸುತ್ತಿದ್ದಂತೆ ಮೀನುಗಳ ಮಾರಾಟ. ಖರೀದಿಸಿದ ಮೀನು ಮಧ್ಯಾಹ್ನಕ್ಕೆ ಔತಣ.

ಹೌದು.. ಈ ದೃಶ್ಯ ಕಂಡುಬಂದದ್ದು ಮಂಗಳೂರಿನ ಪಿಲಿಕುಳ ಮತ್ಸ್ಯೋತ್ಸವದಲ್ಲಿ. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ಮೀನುಗಾರಿಕಾ ಇಲಾಖೆಯ ಜಂಟಿ ಆಶ್ರಯದಲ್ಲಿ ಪಿಲಿಕುಳದ ಲೇಕ್ ಗಾರ್ಡನ್ ಕೆರೆಯಲ್ಲಿ ಮತ್ಸ್ಯಬೇಟೆ ನಡೆದು ಅಲ್ಲಿಯೇ ತಾಜಾ ಮೀನುಗಳ ಮಾರಾಟ ಮಾಡಲಾಯಿತು. ರೋಹ್, ಕಾಟ್ಲ, ತಿಲೇಪಿಯಾ, ಮುಗುಡು ಹಾಗೂ ಗೌರಿ ಮೀನುಗಳು ಇಲ್ಲಿ ಲಭ್ಯವಿದ್ದು, ಎಲ್ಲಾ ಮೀನುಗಳು ಕೆಜಿಗೆ 150ರೂಪಾಯಿಯಂತೆ ಮಾರಾಟವಾಗುತ್ತಿತ್ತು. ಜೊತೆಗೆ ಮೀನು ಕಟ್ ಮಾಡಿಕೊಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಪಿಲಿಕುಳದ ಐದು ಎಕರೆಯಷ್ಟು ವಿಸ್ತಾರವಿರುವ ಈ ಲೇಕ್ ಗಾರ್ಡನ್ ಕೆರೆಗೆ ಮೀನುಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಪ್ರತೀವರ್ಷ ಮೀನುಮರಿಗಳನ್ನು ಬಿಡಲಾಗುತ್ತದೆ. ಹಾಗೆಯೇ ವರ್ಷಂಪ್ರತಿ ಜುಲೈ ವೇಳೆಗೆ ಮತ್ಸ್ಯೋತ್ಸವ ನಡೆಸಿ ಬೃಹತ್ ಗಾತ್ರದಲ್ಲಿ ಬೆಳೆದ ಮೀನುಗಳನ್ನು ಹಿಡಿದು ಮಾರಾಟ ಮಾಡಲಾಗುತ್ತದೆ. 2019ರಲ್ಲಿ ಮತ್ಸ್ಯಬೇಟೆ ನಡೆದಿದ್ದು, ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ಮತ್ಸ್ಯಬೇಟೆ ನಡೆದಿದೆ. ಈ ಬಾರಿ 2ಟನ್ ಗಳಷ್ಟು ಮೀನುಗಳು ಲಭ್ಯವಿರುವ ನಿರೀಕ್ಷೆಯಿದೆ. ಆದರೆ ಪ್ರಚಾರದ ಕೊರತೆಯಿಂದ ಖರೀದಿದಾರರು ನಿರೀಕ್ಷಿಸಿದಷ್ಟು ಮಟ್ಟದಲ್ಲಿ ಬಾರದೆ ಸಾಕಷ್ಟು ಮೀನುಗಳು ಬಲೆಗಳಲ್ಲಿಯೇ ಉಳಿದಿತ್ತು.
