ಹಾಸನ ಜಿಲ್ಲೆಯ ಅರಸೀಕೆರೆ ಬಳಿ ಭೀಕರ ಅಪಘಾತದಲ್ಲಿ 9 ಮಂದಿ ಸಾವು

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣಾವರ ಹೋಬಳಿಯ ಹಳ್ಳಿಕೆರೆ ಗ್ರಾಮದ ಬಳಿ ಕಳೆದ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು ಒಂದೇ ಕುಟುಂಬದ 9 ಮಂದಿ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ನಡೆದಿದೆ.

ಸರ್ಕಾರಿ ಬಸ್ಸು, ಹಾಲಿನ ಟ್ಯಾಂಕರ್ ಮತ್ತು ಟೆಂಪೋ ಟ್ರಾವೆಲರ್ ಮಧ್ಯೆ ಸರಣಿ ಅಪಘಾತ ಸಂಭವಿಸಿ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರು 50 ವರ್ಷದ ಲೀಲಾವತಿ, 33 ವರ್ಷದ ಚೈತ್ರಾ, 10 ವರ್ಷದ ಸಮರ್ಥ್, 12 ವರ್ಷದ ದೀಪ್ತಿ, 10 ವರ್ಷದ ತನ್ಮಯಿ, 2 ವರ್ಷದ ಮಗು ಧ್ರುವ, 20 ವರ್ಷದ ವಂದನಾ, 60 ವರ್ಷದ ದೊಡ್ಡಯ್ಯ ಮತ್ತು 50 ವರ್ಷದ ಭಾರತಿ ಎಂದು ಗುರುತಿಸಲಾಗಿದೆ. ಮೃತರು ಟೆಂಪೋ ಟ್ರಾವಲರ್ ನಲ್ಲಿ ಪ್ರಯಾಣಿಸುತ್ತಿದ್ದು ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ತಮ್ಮೂರು ಅರಸೀಕೆರೆಯ ಬಾಣಾವರಕ್ಕೆ ವಾಪಸಾಗುತ್ತಿದ್ದರು.

ಟಿಟಿ ವಾಹನದಲ್ಲಿ 14 ಮಂದಿ ಧರ್ಮಸ್ಥಳಕ್ಕೆ ತೆರಳಿದ್ದರು. ಮಂಜುನಾಥನಿಗೆ ಹರಕೆ ಸಲ್ಲಿಸಲೆಂದು ಹೋಗಿದ್ದವರು ದರ್ಶನ ಮಾಡಿಕೊಂಡು ಅಲ್ಲಿಂದ ವಾಪಸ್ ಆಗಿದ್ದರು. ಇನ್ನೇನು ಐದಾರು ಕಿಲೋಮೀಟರ್​ನಲ್ಲಿ ಮನೆಗೆ ಸೇರುವ ಮೊದಲೇ ಈ ದುರಂತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಘೋರ ದುರಂತ ಸಂಭವಿಸಿದ್ದು, ಲಾರಿ ಬಸ್ ಮಧ್ಯೆ ಸಿಲುಕಿ ಟಿಟಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಬಾಣಾವರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪಘಾತದಲ್ಲಿ ಸಾವಿಗೀಡಾಗಿದ್ದನ್ನು ಕೇಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಿನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತರಾಗಿರುವುದು ತೀವ್ರ ದುಃಖದಾಯಕ. ಮೃತರ ಆತ್ಮಗಳಿಗೆ ಶಾಂತಿಯನ್ನು ಕೋರುತ್ತೇನೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು. ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮೊದಲಾದವರು ಕಂಬನಿ ಮಿಡಿದಿದ್ದಾರೆ. 

Related Posts

Leave a Reply

Your email address will not be published.