“ಅನೈತಿಕತೆಯಲ್ಲಿ ನೈತಿಕತೆಯ ಹುಡುಕಾಟ”
ತಮಿಳುನಾಡು ವಿಧಾನ ಸಭೆಯ ಸಭಾಪತಿ ಎಂ. ಅಪ್ಪಾವು ಅವರು ಅಲ್ಲಿನ ರಾಜ್ಯಪಾಲ ಆರ್. ಎನ್. ರವಿಯವರನ್ನು ಗೋಡ್ಸೆಯ ಪೂಜೆ ಮಾಡುವ ಮನುಷ್ಯ ಎಂದು ಜರಿದಿದ್ದಾರೆ. ಸಂಘ ಪರಿವಾರದ ಹಿನ್ನೆಲೆಯಿಂದ ಬಂದ ರವಿ ರಾಜ್ಯಪಾಲರ ಕರ್ತವ್ಯಕ್ಕಿಂತ ಅಪ್ಪಾವು ಹೇಳಿದಂತೆ ಗೋಡ್ಸೆ ನಿಷ್ಠೆ ಮತ್ತು ಬಿಜೆಪಿಯೇತರ ಸರಕಾರಗಳ ವಿರುದ್ಧ ಅತಿ ಕೆಟ್ಟದಾಗಿ ನಡೆದುಕೊಂಡ ದಾಖಲೆ ಮಾಡಿದ್ದಾರೆ.
ರಾಜ್ಯಪಾಲರ ಹುದ್ದೆ ನೇರವಾಗಿ ಒಕ್ಕೂಟ ಸರಕಾರದಿಂದ ನೇಮಕಗೊಳ್ಳುವುದಾಗಿದೆ. ಹಿಂದೆ ಕಾಂಗ್ರೆಸ್ಸಿನಿಂದ ನೇಮಕಗೊಂಡ ರಾಜ್ಯಪಾಲರಲ್ಲಿ ಕೆಲವರು ಸಣ್ಣ ಮಟ್ಟಿಗೆ ಕಾಂಗ್ರೆಸ್ಸೇತರ ಪಕ್ಷಗಳ ಸರಕಾರಗಳ ಜೊತೆಗೆ ಆಟ ಆಡಿದ್ದಿದೆ. ಆದರೆ ಬಿಜೆಪಿಯಿಂದ ನೇಮಕಗೊಂಡ ರಾಜ್ಯಪಾಲರು ಬಿಜೆಪಿಯೇತರ ಸರಕಾರಗಳ ಜೊತೆಗೆ ಆಟ ಆಡುವುದನ್ನೇ ಬಹುತೇಕ ಅಭ್ಯಾಸ ಮಾಡಿಕೊಂಡಿದ್ದಾರೆ. ಮೂರು ತಿಂಗಳ ಹಿಂದೆ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಮಳೆಗಾಲದ ಜಂಟಿ ಅಧಿವೇಶನದ ವೇಳೆ ರಾಜ್ಯಪಾಲರ ಭಾಷಣದ ಕೊನೆಯ ಕೆಲವು ವಾಕ್ಯ ಓದಿ ಸುಮ್ಮನಾಗಿದ್ದರು. ಕಮ್ಯೂನಿಸ್ಟ್ ತತ್ವ ಹಿಡಿಸದ ಇವರನ್ನು ಕಮ್ಯೂನಿಸ್ಟ್ ಆಳ್ವಿಕೆಯ ರಾಜ್ಯದಲ್ಲಿ ಬಿಟ್ಟು ಕೇಂದ್ರದ ಬಿಜೆಪಿ ಚೆಂದ ನೋಡುತ್ತಿದೆ. ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡುವ ಭಾಷಣವನ್ನು ಆಯಾ ರಾಜ್ಯ ಸರಕಾರಗಳು ಸಿದ್ಧ ಪಡಿಸುತ್ತವೆ. ಹಾಗಾಗಿ ಆ ಭಾಷಣದಲ್ಲಿ ಆಯಾ ರಾಜ್ಯ ಸರಕಾರಗಳ ಒಲವು ನಿಲುವು ಮತ್ತು ಕೆಲವೊಮ್ಮೆ ತುತ್ತೂರಿ ಇರುತ್ತದೆ.
ಇದೇ ರೀತಿ ಸಂಸತ್ ಅಧಿವೇಶನದ ವೇಳೆ ಜಂಟಿ ಸಭೆಯಲ್ಲಿ ಮೊದಲು ರಾಷ್ಟ್ರಪತಿಗಳು ಓದುವ ಭಾಷಣವು ಒಕ್ಕೂಟ ಸರಕಾರ ಸಿದ್ಧ ಪಡಿಸಿದ್ದು ಆಗಿರುತ್ತದೆ. ಹಾಗಾಗಿ ಅದು ಆಳುವ ಸರಕಾರದ ನೀತಿಗಳನ್ನು ಹೇಳುತ್ತವೆ. ಕೊಚ್ಚಿಕೊಳ್ಳುವುದೂ ಇರುತ್ತದೆ. ರಾಷ್ಟ್ರಪತಿ ಇಲ್ಲವೇ ರಾಜ್ಯಪಾಲರುಗಳ ತಯಾರಾದ ಭಾಷಣದ ಪ್ರತಿಯು ಅವರಿಗೆ ಓದುವುದಕ್ಕೆ ಮೊದಲ ದಿನವಷ್ಟೆ ಸಿಗುತ್ತದೆ. ಕೆಲವರು ಬುದ್ಧಿವಂತಿಕೆಯಿಂದ ತಮ್ಮ ಟಿಪ್ಪಣಿ ಒಂದೆರಡು ಸಾಲು ಭಾಷಣದ ವೇಳೆ ಸೇರಿಸುತ್ತಾರೆ. ಕೆಲವರು ಬುದ್ಧಿಪೂರ್ವಕವಾಗಿ ಒಂದೆರಡು ಸಾಲನ್ನು ಬಿಡುತ್ತಾರೆ ಅವೆಲ್ಲ ಯಾವುದೇ ಸಮಸ್ಯೆ ತಂದುದಿಲ್ಲ. ಬಿಜೆಪಿಯ ರಾಜ್ಯಪಾಲರುಗಳು ಸಮಸ್ಯೆ ಮಾಡುವ ಹವ್ಯಾಸ ಹೊಂದಿದ್ದಾರೆ. ಆದರೆ ನಿತ್ಯ ಅಲ್ಲ, ಕೆಲವೊಮ್ಮೆ. ಕರ್ನಾಟಕದ ರಾಜ್ಯಪಾಲ ತಾವರ್‍ಚಂದ್ ಗೆಹ್ಲೋಟ್ ಕಾಂಗ್ರೆಸ್ ಸರಕಾರದ ಮಸೂದೆಗಳನ್ನು ಹಿಂದೆ ಕಳುಹಿಸಿದ, ಕೆಲವೊಮ್ಮೆ ಅನಗತ್ಯದ ವಿವರ ಕೇಳಿದ್ದು ಮಾಡಿದ್ದಿದೆ. ಆದರೆ ಕಾಂಗ್ರೆಸ್ ಸರಕಾರ ತಯಾರಿಸಿದ ಭಾಷಣ ಓದಿ ತಾವರ್‍ಚಂದ್ ಗೆಹ್ಲೋಟ್ ಅವರು ರಾಜ್ಯಪಾಲರ ಹುದ್ದೆಯ ಘನತೆ ಉಳಿಸಿದ್ದಾರೆ.
ಅಧಿವೇಶನದ ಆರಂಭದ ಜಂಟಿ ಅಧಿವೇಶನದಲ್ಲಿ ಮೇಲ್ಮನೆ, ಕೆಳಮನೆ ಸದಸ್ಯರು ಸೇರಿರುತ್ತಾರೆ. ಎಲ್ಲರೂ ರಾಷ್ಟ್ರಪತಿಗಳಿಗೆ ರಾಜ್ಯಪಾಲರುಗಳಿಗೆ ಗೌರವ ವಂದನೆ ಸಲ್ಲಿಸುತ್ತಾರೆ. ಗದ್ದಲ ಸದ್ದುಗಳ ಅಧಿವೇಶನಕ್ಕೆ ಆರಂಭ ಮಾತ್ರ ಸೌಹಾರ್ದ, ಪರಸ್ಪರ ಗೌರವ, ಕೈಕುಲುಕು, ಕುಶಲೋಪರಿ ಮೊದಲಾದವುಗಳ ಮೇಳೈಸುವಿಕೆ ಆಗಿರುತ್ತದೆ. ರಾಜ್ಯಪಾಲ ತಾವರ್‍ಚಂದ್ ಗೆಹ್ಲೋಟ್‍ರು ಓದಿದ ಭಾಷಣದಲ್ಲಿ ಅವರ ಕೇಂದ್ರದ ಬಿಜೆಪಿ ಸರಕಾರದ ಟೀಕೆ ಸಾಕಷ್ಟು ಇತ್ತು. ರಾಜ್ಯಪಾಲರು ಒಕ್ಕೂಟ ಸರಕಾರದ ನೇಮಕ ಆದರೂ ಅವರು ಸವಲತ್ತು ಪಡೆಯುವುದು ರಾಜ್ಯದಿಂದ. ಹಾಗಾಗಿ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುವುದು ಅವರ ಕರ್ತವ್ಯ. ತಾವರ್‍ಚಂದ್ ಸಹಿತ ಸಾಕಷ್ಟು ರಾಜ್ಯಪಾಲರು ಹಾಗೆಯೇ ನಡೆದುಕೊಳ್ಳುತ್ತಾರೆ; ನಡೆದುಕೊಂಡಿದ್ದಾರೆ.
ತಮಿಳುನಾಡು ರಾಜ್ಯಪಾಲ ರವಿಯವರು ಜಂಟಿ ಸಭೆ ಹೊಕ್ಕವರು ರಾಷ್ಟ್ರಗೀತೆ, ಶಿಷ್ಟಾಚಾರ, ಗೌರವ ವಂದನೆ ಎಲ್ಲದಕ್ಕೂ ಮೊದಲು ಈ ಪುಂಗಿ ಭಾಷಣವನ್ನು ನಾನು ಓದುವುದಿಲ್ಲ ಎಂದರು. ಕೂಡಲೆ ಸ್ಪೀಕರ್ ಎಂ. ಅಪ್ಪಾವು ಅವರು ಗೋಡ್ಸೆಯ ಪೂಜೆ ಮಾಡುವ ವ್ಯಕ್ತಿ ನೀವು ಎಂದರು. ಡಿಎಂಕೆ, ಕಾಂಗ್ರೆಸ್ ಸದಸ್ಯರು ರಾಜ್ಯಪಾಲರ ವಿರುದ್ಧ ಸ್ವರ ತೆಗೆಯುತ್ತಲೇ ನಾಲ್ಕೇ ನಿಮಿಷದಲ್ಲಿ ರವಿಯವರು ನಿರ್ಗಮಿಸಿ ಹೋದರು. ಇಡೀ ಜಂಟಿ ಸಭೆ ಮೌನವಾಗಿ ಕುಳಿತಿತು. ಆಳುವ ಪಕ್ಷದ ಸಹಿತ ಪ್ರತಿಪಕ್ಷಗಳವರು ಸಹ ಮೌನ ಪ್ರತಿಮೆಗಳಾದರು ಎಂದರೆ ರಾಜ್ಯಪಾಲ ಆರ್. ಎನ್. ರವಿ ಹೇಗೆ ನಡೆದುಕೊಂಡಿರಬೇಕು? ಸ್ಪೀಕರ್ ಅವರು ಓದದ ಭಾಷಣವನ್ನು ಕಡತಕ್ಕೆ ಸೇರಿಸಲು ಆದೇಶ ನೀಡಿದರು. ರಾಜ ಭವನ ಸೇರಿದ ಮೇಲೆ ರವಿಯವರಿಗೆ ರಾಷ್ಟ್ರಗೀತೆ ನೆನಪಾಗಿದೆ. ವಂದೇ ಮಾತರಂ ಗೀತೆಯನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಬಳಸಿದವರು ಕಾಂಗ್ರೆಸ್ಸಿಗರು. ಅದನ್ನು ಸ್ವಾತಂತ್ರ್ಯಾನಂತರ ಸಂಘ ಪರಿವಾರದವರು ಹಿಡಿದುಕೊಂಡು ಜನ ಗಣ ಮನ ದೂರ ಟೀಕಿಸುತ್ತಿದ್ದರು. ವಂದೇ ಮಾತರಂ ಗೀತೆಯನ್ನು ರಾಷ್ಟ್ರೀಯತೆಗೆ ತಕ್ಕಂತೆ ಹಾಡದೆ ಬಂಕಿಮಚಂದ್ರ ಚಟರ್ಜಿಯವರು ಮೂಲದಲ್ಲಿ ಬರೆದ ಹತ್ತು ನಿಮಿಷ ಕಾಲದ್ದನ್ನೆಲ್ಲ ಸಂಘದ ಸಭೆಗಳಲ್ಲಿ ಹಾಡುವುದು ಆರೆಸ್ಸೆಸ್ ಮರ್ಜಿ. ಈಗ ಕಾಲಕ್ಕೆ ತಕ್ಕ ಕೋಲ ಎನ್ನುತ್ತ ಅನುಕೂಲ ಶಾಸ್ತ್ರಕ್ಕೆ ಆಗಾಗ ಅಯ್ಯೋ ಜನ ಗಣ ಮನ ಎನ್ನುತ್ತಾರೆ. ಕೆರಗೋಡುನಲ್ಲಿ ದೇಶ ಬಾವುಟದ ಕಂಬಕ್ಕೆ ಹನುಮನ ಧ್ವಜ ಏರಿಸಿ ರಾಷ್ಟ್ರೀಯ ಗಲಭೆ. ಮಂಗಳೂರಿನ ವೆಲೆನ್ಸಿಯಾದಲ್ಲಿ ಸಿಸ್ಟರ್ ವಿರುದ್ಧ ಕ್ರಮಕ್ಕೆ ಹೋಗಿ ಶಾಲಾ ಮಕ್ಕಳಿಂದ ಜೈ ಶ್ರೀರಾಂ ಕುಣಿತ ಮಾಡಿಸಿದ ಶಾಸಕ ಕಾಮತ್ ಎಂದು ಇವರದು ಕೆಲಸ ಕಡಿಮೆ, ಕೂಗು ಜಾಸ್ತಿ.
ಜಾರ್ಖಂಡ್‍ನಲ್ಲಿ ಬೇಳೆ ಬೇಯದು ಎಂದು ಕೂಡಲೆ ವಿಶ್ವಾಸ ಮತ ತೋರಿಸಿ ಎಂದ ಬಿಜೆಪಿ ರಾಜ್ಯಪಾಲರು. ಬೇಳೆ ಖರೀದಿಗೆ ಸಮಯಾವಕಾಶ ಬೇಕು ಎಂದು ಬಿಹಾರದಲ್ಲಿ ವಿಶ್ವಾಸ ಮತ ಯಾಚನೆಗೆ ತಿಂಗಳು ಕಾಲಾವಧಿ ನೀಡಿದ ಬಿಜೆಪಿ ರಾಜ್ಯಪಾಲರು. ಕೊನೆಗೆ ಅಯ್ದು ವಿರೋಧಿ ಮತ ಖರೀದಿಸಿ ನಿತೀಶ್ ಕುಮಾರ್ ಅವರ ಬಿಜೆಪಿ ಸರಕಾರ ವಿಶ್ವಾಸ ಮತ ಗೆದ್ದಿತು. ರಾಷ್ಟ್ರೀಯ ಜನತಾ ದಳದ ಮೂವರು ಶಾಸಕರು ಪಕ್ಷಾಂತರ ಮಸೂದೆಯ ನಿಯಮ ಮುರಿದು ನೇರ ಆಳುವವರ ಕಡೆ ಹೋಗಿ ಮತ ಚಲಾಯಿಸಿದರು. ಕೊನೆಯ ಮಟ್ಟಿಗೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಹೋಗಬೇಕು ಎಂಬ ನೈತಿಕತೆಯೂ ಇಲ್ಲ. ಆ ಮತ ಪರಿಗಣಿಸಿ ಬಿಜೆಪಿಯ ತಾತ್ಕಾಲಿಕ ಸ್ಪೀಕರ್ ಅನೈತಿಕ ರಾಜಕೀಯ ನಮ್ಮದು ಎಂಬುದಕ್ಕೆ ಸಾಕ್ಷ್ಯ ಒತ್ತಿದರು.
ಸಂಸದ ಶಶಿ ತರೂರ್ ವೈ ಐ ಯಾಮ್ ಎ ಹಿಂದೂ ಎಂಬ ಪುಸ್ತಕ ಬರೆದಿದ್ದಾರೆ. ಗಾಂಧೀಜಿ ಮತ್ತು ನೆಹರೂರವರ ಹಿಂದೂ ಧರ್ಮ ಬೇರೆ ಆರೆಸ್ಸೆಸ್, ಬಿಜೆಪಿಯವರ ಹಿಂದೂ ಧರ್ಮ ಬೇರೆ. ಗಾಂಧೀಜಿ ಹಾಗೂ ನೆಹರು ಜನರ ಬದುಕಿಗಾಗಿ ಧರ್ಮದ ದಾರಿ ದೀಪ ಎಂದಿದ್ದರು. ಆರೆಸ್ಸೆಸ್ ಬಿಜೆಪಿಯವರು ಹಿಂದೂ ಧರ್ಮವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಇರುವ ಅಸ್ತ್ರ ಎಂದು ತಿಳಿದಿದ್ದಾರೆ. ವೇದ ಮೂಲ ಎಂದರೂ ಅದಕ್ಕೆ ಹಿಂದೂಗಳ ಬದ್ಧರಾಗಿಲ್ಲ ಎನ್ನುತ್ತಾರೆ ತರೂರ್. ಅವರು ಬರೆಯದ ಕಾರಣ ಅದಕ್ಕೆ ಇದೆ. ವೇದಗಳು ಪ್ರಕೃತಿ ಪೂಜೆ, ಜೀವ ಬಲಿ, ಮಾಂಸದ ನಾನಾ ಬಗೆಯ ಬಳಕೆಯ ಬಗೆಗೆ ಹೇಳುತ್ತವೆ. ವೇದಗಳಲ್ಲಿ ರಾಮ, ಕೃಷ್ಣ ಮೊದಲಾದ ಅನಂತರದ ದೇವರುಗಳ ಹೆಸರೇ ಇಲ್ಲ. ಕೆರಗೋಡುನಲ್ಲಿ ದೇಶ ಬಾವುಟದ ಕಂಬಕ್ಕೆ ಹನುಮಂತ ಬಾವುಟ ಏರಿಸಿ ಗಲಾಟೆ. ಮಂಗಳೂರಿನ ವೆಲೆನ್ಸಿಯಾದಲ್ಲಿ ಶಾಲಾಮಕ್ಕಳಿಂದ ಪಾಠದ ಬದಲು ಜೈ ಶ್ರೀರಾಂ ಕೂಗಿಸಿ ಕುಣಿಸುವ ಶಾಸಕ ಕಾಮತ್. ಇವರಿಗೆಲ್ಲ ಧರ್ಮದ ನೈತಿಕತೆ ಅವರ ಮೂಗಿನ ನೇರಕ್ಕೆ ಮಾತ್ರ ಇರುತ್ತದೆ.
ಬರಹ: ಪೇರೂರು ಜಾರು