ಕಲ್ಕುಡ ಮಹಿಮೆ’ ತುಳು ಭಕ್ತಿಗೀತೆ ವಿಡಿಯೋ ಆಲ್ಬಂ ಬಿಡುಗಡೆ

 ಕುತ್ಲೂರು ಗ್ರಾಮದ ಅರಸಕಟ್ಟೆ ಕೊಲಾನಿ ಎಂಬಲ್ಲಿನ ‘ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿ ದೈವಸ್ಥಾನ’ದ ಕುರಿತಾಗಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಟಿ.ಎನ್. ಕ್ರಿಯೇಷನ್ ಪ್ರಸ್ತುತಪಡಿಸಿರುವ, ವಜ್ರನಾಭ ಜೈನ್ ನಾರಾವಿ ನಿರ್ಮಾಣದ ‘ಕಲ್ಕುಡ ಮಹಿಮೆ’ ಕೊಲಾನಿದ ಸತ್ಯೊಲೆ ಸುಗಿಪು ತುಳು ಭಕ್ತಿಗೀತೆ ವಿಡಿಯೋ ಆಲ್ಬಂ ಎ.14ರಂದು ದೈವಸ್ಥಾನದಲ್ಲಿ ಬಿಡುಗಡೆಗೊಂಡಿತು.

ಕ್ಷೇತ್ರದ ಕಲ್ಕುಡ, ಕಲ್ಲುರ್ಟಿ ಹಾಗೂ ಪಂಜುರ್ಲಿ ದೈವಗಳ ಮಹಿಮೆಯನ್ನು ಸಾರುವ ಭಕ್ತಿಗೀತೆಯನ್ನು ಕ್ಷೇತ್ರದಲ್ಲಿ ನಡೆದ ನೇಮದ ದೃಶ್ಯಗಳಿಗೆ ಹಿನ್ನೆಲೆಯಾಗಿಸಿ ವಿಭಿನ್ನ ಶೈಲಿಯಲ್ಲಿ ಪ್ರಸ್ತುತಪಡಿಸಲಾಗಿದ್ದು, ಯೂಟ್ಯೂಬ್ ಅಪ್ಲೋಡ್ ಮಾಡಲಾಗಿದೆ. 

ಉಜಿರೆ ಎಸ್.ಡಿ.ಎಂ. ಕಾಲೇಜಿನ ಬೋಧಕೇತರ ಸಿಬ್ಬಂದಿ ಸುರೇಂದ್ರ ಜೈನ್ ನಾರಾವಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ವಿಡಿಯೋ ಆಲ್ಬಂಗೆ ಪಾರ್ಶ್ವನಾಥ  ಜೈನ್ ಕಕ್ಯಪದವು ಸಾಹಿತ್ಯ ರಚಿಸಿದ್ದು, ನಾರಾವಿಯ ಧನ್ವಿತಾ ಸ್ಟುಡಿಯೋದ ಗಣೇಶ್ ಹೆಗ್ಡೆ ವಿಡಿಯೋ ಚಿತ್ರೀಕರಣ ಮಾಡುವ ಜತೆಗೆ ಗೀತೆಗೆ ಧ್ವನಿಯಾಗಿದ್ದಾರೆ.

ಹರಿಶ್ಚಂದ್ರ ಪೂಜಾರಿ ನಾರಾವಿ ಅವರ ಪರಿಕಲ್ಪನೆಯ ಈ ವಿಡಿಯೋ ಆಲ್ಬಂಗೆ ಉಜಿರೆ ಎಸ್.ಡಿ.ಎಂ. ಕಾಲೇಜಿನ ಮಲ್ಟಿಮೀಡಿಯಾ ಸ್ಟುಡಿಯೋದ ಡೈರೆಕ್ಟರ್-ವಿಡಿಯೋ ಪ್ರೊಡಕ್ಷನ್ಸ್ ರಕ್ಷಿತ್ ರೈ ಅವರ ಸಂಕಲನವಿದೆ. ಕಾಲೇಜಿನ ಕಲಾಕೇಂದ್ರದ ತರಬೇತುದಾರ ಯಶವಂತ್ ಬೆಳ್ತಂಗಡಿ ತಾಂತ್ರಿಕ ಸಲಹೆ ನೀಡಿ ಸಹಕರಿಸಿದ್ದಾರೆ.  

ವಜ್ರನಾಭ ಜೈನ್ ನಾರಾವಿ ವಿಡಿಯೋ ಆಲ್ಬಂ ಲೋಕಾರ್ಪಣೆಗೊಳಿಸಿದರು. ಕ್ಷೇತ್ರದ ಅರ್ಚಕ ರಮೇಶ್ ಭಟ್ ಕೊಕ್ರಾಡಿ ಶುಭ ಹಾರೈಸಿದರು. ತಂಡದ ಸದಸ್ಯರಾದ ಸೂರಜ್ ಜೈನ್, ಶೀನ ಪೂಜಾರಿ, ಯೋಗೀಶ್ ಶೆಟ್ಟಿ ಹಾಗೂ ಭಕ್ತ ವೃಂದ ಉಪಸ್ಥಿತರಿದ್ದರು.

 https://youtu.be/hk10OYAudEk

Related Posts

Leave a Reply

Your email address will not be published.