ಕರಾವಳಿಯಲ್ಲಿ ಸಂಭ್ರಮದಿಂದ ಈದ್ –ಅಲ್ ಅಧಾ ಆಚರಣೆ
ದ.ಕ.ಜಿಲ್ಲೆಯಲ್ಲಿ ಇಂದು ಮುಂಜಾನೆಯಿಂದಲೇ ಅತ್ಯಂತ ಸಡಗರ, ಸಂಭ್ರಮದಿಂದ `ಈದುಲ್ ಅಝ್ಹಾ’ ಆಚರಿಸಲಾಗುತ್ತಿದೆ. ಜಿಲ್ಲೆಯ ಮುಸ್ಲಿಮರು ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಿ, ಈದ್ ಖುತ್ಬಾ ಮತ್ತು ಪ್ರವಚನ ಆಲಿಸಿ, ಈದ್ ಸಂದೇಶ ಸ್ವೀಕರಿಸುವುದು ಮತ್ತು ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುತ್ತಿರುವುದು ಕಂಡು ಬಂತು.
ಮಂಗಳೂರಿನ ಬಾವುಟಗುಡ್ಡೆ ಈದ್ಗಾ ಮಸ್ಜಿದ್, ಸಹಿತ ಜಿಲ್ಲೆಯ ಜುಮಾ ಮಸ್ಜಿದ್ ಮತ್ತು ಈದ್ಗಾಗಳಲ್ಲಿ ನಮಾಝ್ ಹಾಗೂ ಖುತ್ಬಾ ನೆರವೇರಿಸಲಾಯಿತು.ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ, ನಾನಾ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಸಂಭ್ರಮಿಸಿದರು.
ಬಳಿಕ ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಸಲ್ಲಿಸುತ್ತಿದ್ದಾರೆ.