ಕಟಪಾಡಿಯ ಖಾಸಗಿ ಶಾಲೆಯಲ್ಲಿ “ಸ್ಕೂಲ್ ಲೀಡರ್” ಸಿನಿಮಾದ ಚಿತ್ರೀಕರಣ

ಸನ್ ಮ್ಯಾಟ್ರಿಕ್ಸ್ ಪಿಚರ್ಸ್ ಮತ್ತು ಫಿಲಂ ವೀಲ್ಹ್ ಸ್ಟುಡಿಯೋಸ್ ಇವರ ಸಹಯೋಗದೊಂದಿಗೆ ರಜ್ಹಾಕ್ ಪುತ್ತೂರು ನಿರ್ದೇಶನದ ” ಸ್ಕೂಲ್ ಲೀಡರ್” ಕನ್ನಡ ಸಿನಿಮಾದ ಚಿತ್ರೀಕರಣ ಖ್ಯಾತ ಕಲಾವಿಧರ ಭಾಗವಹಿಸುವಿಕೆಯೊಂದಿಗೆ ಕಟಪಾಡಿಯ ಖಾಸಗಿ ಶಾಲೆಯೊಂದರಲ್ಲಿ ಭರದಿಂದ ಸಾಗುತ್ತಿದೆ.
ಈ ಚಿತ್ರದ ಪ್ರಮುಖ ಪಾತ್ರದಲ್ಲಿ ತುಳುನಾಡಿನ ಕಲಾ ಮುತ್ತುಗಳಾದ ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಜೆ ಅಭಿನಯಿಸುತ್ತಿದ್ದಾರೆ. ಹಾಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳು ಈ ಚಿತ್ರದ ಮೂಲಕ ಮುಖಕ್ಕೆ ಬಣ್ಣ ಹಚ್ಚಿ ಕ್ಯಾಮರಾ ಎದುರಿಸಲಿದ್ದಾರೆ. ಒಂದೇ ಶಾಲೆಯಲ್ಲಿ ಈ ಚಿತ್ರದ ಎಲ್ಲಾ ದೃಶ್ಯಗಳು ಚಿತ್ರೀಕರಣಗೊಳ್ಳುತ್ತಿರುವುದು ಈ ಚಿತ್ರದ ಮತ್ತೊಂದು ವಿಶೇಷ.
ಅತೀ ವೇಗವಾಗಿ ಚಿತ್ರೀಕರಣ ನಡೆಯುತ್ತಿದ್ದು ಮುಂದಿನ ಅಕ್ಟೋಬರ್ ನಲ್ಲಿ ತೆರೆ ಕಾಣಲಿದೆ ಎಂಬುದಾಗಿ ಚಿತ್ರದ ನಿರ್ದೇಶಕ ರಜ್ಹಾಕ್ ಪುತ್ತೂರು ತಿಳಿಸಿದ್ದಾರೆ. ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ತುಳುನಾಡ ಮಾಣಿಕ್ಯ ನಾಮಾಂಕಿತ ನಟ ಅರವಿಂದ ಬೋಳಾರ್ ಮಾತನಾಡಿ ಮಕ್ಕಳ ಬಗೆಗಿನ ಈ ಸ್ಕೂಲ್ ಲೀಡರ್ ಸಿನಿಮಾದಲ್ಲಿ ನಾನು ಅಚ್ಚ ಕನ್ನಡ ಶಿಕ್ಷಕನ ಪಾತ್ರದಲ್ಲಿ ನಟಿಸುತ್ತಿದ್ದೇನೆ, ಈ ಚಿತ್ರದ ಎಲ್ಲಾ ಮಜಲುಗಳು ಬಹಳಷ್ಟು ಉತ್ತಮವಾಗಿದ್ದು, ಚಿತ್ರ ಯಶಸ್ವಿಯಾಗುವುದರಲ್ಲಿ ಎರಡು ಮಾತಿಲ್ಲ, ಅಲ್ಲದೆ ಈ ಹಿಂದೆ ಈ ಚಿತ್ರದ ನಿರ್ದೇಶಕ ರಜ್ಹಾಕ್ ಪುತ್ತೂರು ನಿರ್ದೇಶನದ ಪೆನ್ಸಿಲ್ ಬಾಕ್ಸ್ ಚಿತ್ರದಲ್ಲಿ ನಟಿಸಿದ್ದು ಅವರೊಬ್ಬ ಉತ್ತಮ ನಿರ್ದೇಶಕ ಎಂದರು. ಈ ಚಿತ್ರದ ಕ್ಯಾಮಾರ್ ಮ್ಯಾನ್ ಆಗಿ ಮೋಹನ್ ಪಡ್ರೆ, ಸಹ ನಿರ್ದೇಶಕ ಅಕ್ಷತ್ ವಿಟ್ಲ , ಚಿತ್ರೀಕರಣ ಸಮಗ್ರ ನಿರ್ವಹಣೆಯನ್ನು ನಟ ನಾಗೇಶ್ ಕಾಮತ್ ಕಟಪಾಡಿ ನಿರ್ವಾಹಿಸುತ್ತಿದ್ದಾರೆ.
