ಕಿನ್ನಿಗೋಳಿ ಬಳ್ಕುಂಜೆಯಲ್ಲಿ ಕೊರಗರ ಭೂಮಿ ಹಬ್ಬ

ದಕ್ಷಿಣ ಕನ್ನಡ ಜಿಲ್ಲಾ ಕೊರಗ ಸಂಘದ ವತಿಯಿಂದ ಕೊರಗರ ಭೂಮಿ ಹಬ್ಬ ’ನಮ್ಮ ಭೂಮಿ ನಮ್ಮ ಹಕ್ಕು’ ಕಾರ್ಯಕ್ರಮ ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಕೊರಗರ ಬಲೆಪುವಿನಲ್ಲಿ ಗುರುವಾರ ನಡೆಯಿತು.
ಬಳ್ಕುಂಜೆ ತಾಲ್ಯಾನ್ ಮನೆತನ ಗುರಿಕಾರರಾದ ಜಬ್ಬ ಕೊರಗ ಅವರು ಹಬ್ಬದ ಜ್ಯೋತಿ ಬೆಳಗಿಸಿ ಧ್ವಜಾರೋಹಣ ನೆವೇರಿಸಿದರು. ಕೊರಗ ಸಮುದಾಯದ ಹಿರಿಯ ಮಹಿಳೆ ಕಾಳಿ ಅವರು ಹಬ್ಬದ ಸಿಹಿಜೇನು ಹಂಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಲ್ಕಿ ತಹಶೀಲ್ದಾರ್ ಗುರುಪ್ರಸಾದ್ ಅವರು ಮಾತನಾಡಿ , ಕೊರಗ ಸಮುದಾಯದವರು ತುಂಬಾ ಸ್ವಾಭಿಮಾನಿಗಳು ಹಾಗೂ ಮುಗ್ದರು , ಇವರು ಯಾವುದೇ ಸವಲತ್ತುಗಳನ್ನು ಕೊಡಿ ಎಂದು ಸರಕಾರದ ಮುಂದೆ ಅರ್ಜಿ ಹಾಕುವುದಿಲ್ಲ, ಇಂತಹ ಸಂದರ್ಭದಲ್ಲಿ ಇವರನ್ನು ಹುಡುಕಿ ಇವರಿಗೆ ಕೊಡಬೇಕಾದ ಸವಲತ್ತುಗಳನ್ನು ತಲುಪಿಸುವಂತಹ ಕೆಲಸಗಳನ್ನು ವಿವಿಧ ಇಲಾಖೆಗಳು ಮಾಡಬೇಕೆಂದು ಹೇಳಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕೊರಗರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಸಂಘಟನಾ ಕಾರ್ಯದರ್ಶಿ ಎಂ.ಸುಂದರ ಬೆಳುವಾಯಿ ಅವರು ವಹಿಸಿದ್ದರು. ಕೊರಗರ ಜನಸಂಖ್ಯೆ ತೀವ್ರಗತಿಯಲ್ಲಿ ಕ್ಷೀಣಿಸುತ್ತಿದ್ದು, ಕೊರಗರ ಆರೋಗ್ಯ ಸಂರಕ್ಷಣೆಗೆ ಬೇಕಾದ ಸವಲತ್ತುಗಳನ್ನು ಸರಕಾರ ಸರಿಯಾಗಿ ನೀಡುತ್ತಿಲ್ಲ , ಇದರಿಂದಾಗಿ ಕೊರಗ ಸಮುದಾಯ ಅಳಿವಿನ ಅಂಚಿಗೆ ತಲುಪುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಭಾಗಹಿಸಿದ ಕೊರಗ ಸಮುದಾಯದ ಮುಖಂಡ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ನೌಕರರ ಸಂಘದ ಅಧ್ಯಕ್ಷ ಬಾಲರಾಜ್ ಕೋಡಿಕಲ್ ಅವರು ಮಾತನಾಡಿ , ಬಳ್ಕುಂಜೆ ಪರಿಸರದ ಭೂಮಿ ಕೈಗಾರಿಕೆಗಾಗಿ ಸರಕಾರ ಭೂಸ್ವಾಧೀನಪಡಿಸುವಂತಹ ಪ್ರಸ್ತಾಪ ಇದ್ದು, ಕೊರಗ ಸಮುದಾಯದ ಮೂಲ ನೆಲೆಯಾಗಿರುವ ಬಳ್ಕುಂಜೆಯಲ್ಲಿ ಅನೇಕ ಕೊರಗ ಕುಟುಂಬಗಳು ಕೃಷಿ ಚಟುವಟಿಕೆಯನ್ನು ನಡೆಸುತ್ತಿದ್ದಾರೆ, ಕೊರಗರು ತಮ್ಮ ಭೂಮಿಯನ್ನು ಕೊಡಲು ಸಿದ್ದರಿಲ್ಲ ಎಂದು ಹೇಳಿದರು.

ಕೊರಗ ಸಮುದಾಯದ ನಾಯಕಿ ಹಾಗೂ ರಾಜ್ಯ ಸರಕಾರದ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತೆ ಗೌರಿ ಕೆಂಜೂರು ಅವರು ಮಾತನಾಡಿ, ಆಗಸ್ಟ್ ೧೮ ಕೊರಗರ ಭೂಮಿ ಹಕ್ಕಿನ ದಿನವಾಗಿದ್ದು, ಎರಡು ದಶಕಗಳ ಹಿಂದೆ ಕೊರಗರು ಭೂಮಿ ಹಕ್ಕಿಗಾಗಿ ನಡೆಸಿದ ಚಾರಿತ್ರಿಕ ಹೊರಾಟದ ನೆನಪಿನಲ್ಲಿ ನಡೆಯುವ ಹಕ್ಕಿನ ದಿನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಡಿ.ಮಂಜ , ಬಳ್ಕುಂಜೆ ಪಿ.ಡಿ.ಓ ಪ್ರಕಾಶ್ ಅವರು ಶುಭಕೋರಿ ಮಾತನಾಡಿದರು.


ಕೊರಲ್ ಕಲಾ ತಂಡದ ಸದಸ್ಯ ರಮೇಶ್ ಮಂಚಕಲ್ ಅವರು ಕೊರಗರ ಭಾಷೆಯಲ್ಲಿ ಕೊರಗ ಸಮುದಾಯದ ಸ್ವಾಭಿಮಾನವನ್ನು ಪರಿಚಯಿಸುವ ಹಾಡನ್ನು ಪ್ರಸ್ತುತಿಪಡಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸಾಂಸ್ಕೃತಿಕ ಮೆರವಣಿಗೆ ನಡೆಯಿತು, ಕೊನೆಯಲ್ಲಿ ಡೋಲು ವಾದನ ಹಾಗೂ ಕೊರಗ ಕುಣಿತ ಕಾರ್ಯಕ್ರಮಕ್ಕೆ ವಿಶೇಷ ಮೆರಗನ್ನು ತಂದಿತು.
ಕೊರಗ ಸಮುದಾಯದ ಮುಖಂಡ ಬಾಬು ಪಾಂಗಾಳ ಅವರು ಸ್ವಾಗತಿಸಿದರು, ರಮೇಶ್ ಗುಂಡಾವು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Related Posts

Leave a Reply

Your email address will not be published.