ಕುಂದಾಪುರ|| ಗೋಪಾಡಿ ಅಂಬೇಡ್ಕರ್ ಭವನ ನಿರ್ಮಾಣದ ತನಿಖೆಯಾಗಲಿ: ಗೋಪಾಡಿ ಗ್ರಾಮಸಭೆಯಲ್ಲಿ ದಲಿತ ಮುಖಂಡರ ಆಗ್ರಹ
ಕುಂದಾಪುರ: ದಲಿತ ಸಮುದಾಯದ ಮನೆಗಳೇ ಇಲ್ಲದ ಇಕ್ಕಟ್ಟಿನ ಸ್ಥಳದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲಾಗಿದ್ದು, ದಲಿತರು ಭವನವನ್ನು ಬಳಸಬಾರದು ಎನ್ನುವ ದೃಷ್ಠಿಯಲ್ಲಿ ನಿರ್ಮಿಸಿದಂತಿದೆ. ಅಂಬೇಡ್ಕರ್ ಭವನ ನಿರ್ಮಾಣದ ಹಿಂದಿನ ಉದ್ದೇಶವೇನು? ಯಾರ ಲಾಭಕ್ಕಾಗಿ ಈ ಕಟ್ಟಡ ನಿರ್ಮಾಣ ಮಾಡಲಾಗಿದೆ ಎನ್ನುವುದರ ಕುರಿತು ಸಮಗ್ರ ತನಿಖೆ ನಡೆಯಲಿ ಎಂದು ದಸಂಸ ಮುಖಂಡ ರಾಜು ಬೆಟ್ಟಿನಮನೆ ಆಗ್ರಹಿಸಿದ್ದಾರೆ.
ಗೋಪಾಡಿ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಜರುಗಿದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಗೋಪಾಡಿ ಪಡುಚಾವಡಿಬೆಟ್ಟುವಿನಲ್ಲಿ ನಿರ್ಮಿಸಿದ ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ವೇಳೆ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ದಲಿತರ ಸಮಸ್ಯೆಗಳು ಬಂದಾಗ ಅದನ್ನು ಕೂಡಲೇ ಪರಿಹರಿಸುವ ಗೋಜಿಗೆ ಪಂಚಾಯತ್ ಆಡಳಿತ ಹೋಗುವುದಿಲ್ಲ. ಪಂಚಾಯತ್ ಆಡಳಿತಕ್ಕೆ ಇಚ್ಛಾಶಕ್ತಿಯೂ ಇಲ್ಲ ಎಂದು ದೂರಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ವರ್ಣೇಕರ್, ಎರಡು-ಮೂರು ಬಾರಿ ಖುದ್ದು ನಾನೇ ಹೋಗಿ ಸ್ಥಳ ಪರಿಶೀಲನೆ ಮಾಡಿದ್ದೇನೆ. ನಾನು ಅಧಿಕಾರ ಸ್ವೀಕರಿಸುವ ಮೊದಲೇ ಕಟ್ಟಡ ನಿರ್ಮಾಣ ಆಗಿತ್ತು. ಆ ಬಳಿಕ ಜಾಗ ಸರ್ವೇ ಮಾಡಿ ದಾಖಲಾತಿ ಮಾಡಲಾಗಿದೆ. ಶಾಸಕರ ಶಿಫಾರಸ್ಸಿನ ಮೇರೆಗೆ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪರಿಶಿಷ್ಟಜಾತಿ-ಪಂಗಡದ ಹಣ ದಲಿತರಿಗೆ ಸದ್ಬಳಕೆಯಾಗಬೇಕೆನ್ನುವುದು ನಮ್ಮ ಉದ್ದೇಶ. ಈ ಬಗ್ಗೆ ಸ್ಥಳೀಯ ದಲಿತ ಸಂಘಟನೆಗಳ ಮುಖಂಡರು ಹಾಗೂ ಪಿಡಿಒ ನೇತೃತ್ವದ ಸಮಿತಿಯ ಸಭೆ ಕರೆದು ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದರು.
ಸಭೆಯಲ್ಲಿ ಶಿಕ್ಷಣ, ಕೃಷಿ, ಕಂದಾಯ, ಮೆಸ್ಕಾಂ, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಸರ್ಕಾರಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಗೋಪಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಸಂತೋಷ್ ಕುಮಾರ್ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದರು. ಗೋಪಾಡಿ ಗ್ರಾ.ಪಂ ಉಪಾಧ್ಯಕ್ಷೆ ಶಾಂತಾ, ಸದಸ್ಯರು ಉಪಸ್ಥಿತರಿದ್ದರು. ಪಿಡಿಓ ಗಣೇಶ್ ಸ್ವಾಗತಿಸಿದರು.