17ನೇ ಲೋಕ ಸಭೆಗೆ ವಿದಾಯ ಹೇಳುವ ಮೊದಲು

17ನೇ ಲೋಕ ಸಭೆಯು 88% ನಿಗದಿತ ಕೆಲಸ ಮಾಡಿದೆ ಎಂದು ವರದಿ ಆಗಿದೆ. ಆದರೆ ಅವರೆಲ್ಲ ಲೋಕಸಭೆಯಲ್ಲಿ ಗದ್ದಲ ಮಾಡಿದ್ದರ ಬಗೆಗೇ ಮಾಧ್ಯಮಗಳಲ್ಲಿ ಹೆಚ್ಚು ವರದಿಯಾಗಿತ್ತು. ಗದ್ದಲ ಮಾಡಿದ, ಕೂಗಾಡಿದ, ಕಲಾಪ ಮುಂದೂಡಿದ, ಹೊರ ನಡೆದ, ಹಾಜರಿ ಹಾಕಿ ಭತ್ಯೆ ಪಡೆದು ಕ್ಯಾಂಟೀನ್‍ನಲ್ಲಿ ಕುಳಿತ ಕಾಲ ಎಷ್ಟು ಎಂದು ಲೆಕ್ಕ ಸಿಕ್ಕಿಲ್ಲ. ಬಹುತೇಕ ಸಂಸದರು ತಮ್ಮ ಅನುಕೂಲದ ಹೊರತಾಗಿ ಬೇರೆಯದರ ಬಗೆಗೆ ತಲೆ ಕೆಡಿಸಿಕೊಂಡುದು, ತಲೆ ಓಡಿಸಿದ್ದು ಕಡಿಮೆ. ಹಾಲಿ ಲೋಕ ಸಭೆಯ ಅವಧಿ ಮುಗಿಯಲು ಇನ್ನು ಒಂದೂವರೆ ತಿಂಗಳು ಮಾತ್ರ ಬಾಕಿ ಇದೆ. ಸಂಸತ್ ಅಧಿವೇಶನ ಕೊನೆಗೊಂಡಿದೆ. ಇನ್ನು ಎದುರು ನೋಡದ ಘಟನೆ ನಡೆದರೆ ಮಾತ್ರ ರಾಷ್ಟ್ರಪತಿಗಳು ತುರ್ತು ಅಧಿವೇಶನಕ್ಕೆ ಕರೆ ನೀಡಬಹುದು. ಇಲ್ಲದಿದ್ದರೆ 18ನೇ ಲೋಕ ಸಭೆಯು ಎಂದು ಮಳೆಗಾಲದ ಅಧಿವೇಶನ ನಡೆಸುತ್ತದೆ ಎಂದು ಕಾಯಬೇಕು.

18ನೇ ಲೋಕ ಸಭೆಯಲ್ಲಿ ಯಾವುದು ಹೊಸ ಮುಖ, ಯಾವುದು ಹಳತು ಎಂಬುದೆಲ್ಲ ತಿಂಗಳೊಪ್ಪತ್ತಿನಲ್ಲಿ ತಿಳಿಯುತ್ತದೆ. 17ನೇ ಲೋಕಸಭೆ ಮಾತ್ರವಲ್ಲ, ಕಳೆದ ಹತ್ತು ವರುಷದ ವಿಶೇಷ ಎಂದರೆ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರೇ ಇಲ್ಲದಿರುವುದು. ಪ್ರತಿ ಪಕ್ಷದ ನಾಯಕನ ಸ್ಥಾನ ಪಡೆಯಲು ಕನಿಷ್ಟ ಸಂಸತ್ ಬಲದ 10% ಸದಸ್ಯರನ್ನು ಹೊಂದಿರಬೇಕು. ಹತ್ತು ಶೇಕಡಾ ಎಂದರೆ 55. ಪ್ರಮುಖ ಪ್ರತಿ ಪಕ್ಷ ಕಾಂಗ್ರೆಸ್ ಸದ್ಯ 52 ಸಂಸದರನ್ನಷ್ಟೆ ಹೊಂದಿದೆ. ಯುಪಿಎ ಕೂಟಕ್ಕೆ ಪ್ರತಿಪಕ್ಷದ ಸ್ಥಾನಮಾನ ನೀಡಲು ಆಳುವವರು ತಯಾರಿಲ್ಲ. ಪ್ರತಿ ಪಕ್ಷದ ನಾಯಕನಿಗೆ ಸಂಪುಟ ದರ್ಜೆಯ ಮತ್ತು ಉಪ ನಾಯಕನಿಗೆ ರಾಜ್ಯ ಸಚಿವ ಸ್ಥಾನಮಾನ ಮತ್ತು ಸವಲತ್ತು, ಸಂಬಳ ಸಾರಿಗೆ ಇದೆ. ಅದು ಹತ್ತು ವರುಷದಿಂದ ಭಾರತ ಸರಕಾರಕ್ಕೆ ಉಳಿತಾಯ ಆಗಿದೆ. ಅದನ್ನು ಯಾರು ಖರ್ಚು ಮಾಡಿದರು ಎಂದು ಸಂಶೋಧನೆ ಮಾಡುವವರು ಸದ್ಯ ಯಾರೂ ಇಲ್ಲ.

17ನೇ ಲೋಕ ಸಭೆಯು ಅತಿ ಹೆಚ್ಚು 78 ಮಹಿಳಾ ಸಂಸದರನ್ನು ಕಂಡಿದೆ. ಇದು 14 ಚಿಲ್ಲರೆ ಶೇಕಡಾ ಆಗಿದೆ. ಮಹಿಳಾ ಮೀಸಲಾತಿಯ ನಾಟಕ ಇನ್ನೂ ನಡೆಯುತ್ತಲೇ ಇದೆ. ಇನ್ನೊಂದು ಸಮಸ್ಯೆ ಮಹಿಳಾ ಸಂಸದರಲ್ಲಿ 10ರಷ್ಟು ಮಂದಿ ಮಾತ್ರ ಸಂಸತ್ತಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಹೋದ ಪುಟ್ಟಿ ಬಂದ ಪುಟ್ಟಿ ಎಂದರೂ ಸದ್ಯ ಲೋಕ ಸಭೆಯಲ್ಲಿ ತುಟಿ ಬಿಚ್ಚದವರು ಗಂಡಸರೇ ಆಗಿರುವುದು ವಿಶೇಷ. ಕರ್ನಾಟಕದ 4 ಜನ ಸೇರಿ 9 ಸಂಸದರು ಸಂಸತ್ತಿನಲ್ಲಿ ಬಾಯಿ ಹೊಲಿದುಕೊಂಡು ಕೂತಿದ್ದರು. ಮಂತ್ರಿ ಮಂಡಲದಲ್ಲಿ 9 ಮಂದಿ ಮಹಿಳೆಯರು ಇದ್ದಾರೆ. ಹಿಂದೆಯೂ ಒಂದೆರೆಡು ಬಾರಿ ಅದೇ ಗರಿಷ್ಠ. ಪ್ರಮಾಣ 3%ದಷ್ಟು ಮಾತ್ರ. 50 ಶೇಕಡಾಕ್ಕಿಂತಲೂ ಹೆಚ್ಚು ಮಂತ್ರಿ ಪ್ರಮಾಣ ಹೊಂದಿರುವ ದೇಶಗಳೂ ಇವೆ. ಸ್ಪೆಯಿನ್ 64.7%, ನಿಕಾರಗುವಾ 55.6%, ಸ್ವೀಡನ್ 54.4%, ಅಲ್ಬೇನಿಯಾ 53.3%, ಕೊಲಂಬಿಯಾ 52.9%, ಕೋಸ್ಟರಿಕಾ 51.9%, ರುವಾಂಡಾ 51.8% ಮತ್ತು ಕೆನಡಾ ಹಾಗೂ ಫ್ರಾನ್ಸ್‍ಗಳಲ್ಲಿ ತಲಾ 50% ಎಂದು ಸಂಪುಟದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಹಿಳೆಯರೇ ಇದ್ದಾರೆ. ಕೆನಡಾ ಮತ್ತು ಫ್ರಾನ್ಸ್‍ನಲ್ಲಿ 50% ನಿಯಮವೇ ಇದೆ. ರುವಾಂಡಾದ ಕತೆ ವಿಚಿತ್ರವಾದುದು. ಕ್ರಾಂತಿ ದಂಗೆಯಲ್ಲಿ ಸಂಸದರು ಕೊಲ್ಲಲ್ಪಟ್ಟುದರಿಂದ ಪತ್ನಿಯರು ಗಂಡಂದಿರ ಕ್ಷೇತ್ರಗಳಲ್ಲಿ ಗೆದ್ದು ಸಂಸತ್ತನ್ನು ಅತಿ ಹೆಚ್ಚು ಪ್ರಮಾಣದ ಮಹಿಳೆಯರ ಸಂಸತ್ತು ಮಾಡಿದ್ದಾರೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಹೆಣ್ಣು ಇರುವುದು ಸರಿ. ಅಗತ್ಯ ಬಿದ್ದರೆ ಮುಂದೆ ಬಂದು ಆಕೆ ಗಂಡು ಕಾರ್ಯ ನಿರ್ವಹಿಸಬಲ್ಲಳು.

17ನೇ ಲೋಕ ಸಭೆಯು 274 ಸಿಟ್ಟಿಂಗ್ ನಡೆಸಿದೆ. 2019ರ ಜೂನ್ 17ರಿಂದ 2024ರ ಫೆಬ್ರವರಿ 10ರ ನಡುವೆ ಮಳೆಗಾಲ, ಚಳಿಗಾಲ, ಬಜೆಟ್ ಅಧಿವೇಶನ ಅಲ್ಲದೆ ವಿಶೇಷ ಅಧಿವೇಶನ ನಡೆಸಿದೆ. ಅದರಲ್ಲಿ ಮಹಿಳಾ ಮೀಸಲಾತಿ ಬಗೆಗಿನ ನಾಟಕದ ವಿಶೇಷ ಅಧಿವೇಶನವೂ ಒಂದು. ಒಟ್ಟು 274 ದಿನದ ಕಲಾಪ ನಡೆದಿದೆ. ವಿಮರ್ಶಕರ ಪ್ರಕಾರ ಅದು ವ್ಯರ್ಥಾಲಾಪ. ಲೋಕ ಸಭೆಯ ಅವಧಿ 5 ವರುಷ. ಅತಂತ್ರದಲ್ಲಿ, ಸರಕಾರ ನಡೆಸಲಾಗದ ಸ್ಥಿತಿಯಲ್ಲಿ ನಡುವೆಯೇ ಚುನಾವಣೆ ಕಂಡುದೂ ಹಿಂದೆ ಆಗಿದೆ. ಲೋಕ ಸಭೆಯ ಬಲ 545. 543ಕ್ಕೆ ಚುನಾವಣೆ ನಡೆಯುತ್ತದೆ. ಇಬ್ಬರು ಆಂಗ್ಲೋ ಇಂಡಿಯನ್ ಪ್ರತಿನಿಧಿಗಳನ್ನು ನಾಮಕರಣ ಮಾಡಲಾಗುತ್ತದೆ. ಬ್ರಿಟಿಷರು ಭಾರತ ಆಳುವಾಗ ಬ್ರಿಟಿಷ್ ತಂದೆ ಹಾಗೂ ಭಾರತೀಯ ತಾಯಿಗೆ ಹುಟ್ಟಿದವರು ಆಂಗ್ಲೋ ಇಂಡಿಯನ್ಸ್. 55 ವರುಷಗಳ ಹಿಂದೆ ಬಹುತೇಕ ಆಂಗ್ಲೋ ಇಂಡಿಯನ್‍ಗಳನ್ನು ಮುಖ್ಯವಾಗಿ ಆಸ್ಟ್ರೇಲಿಯಾ ತಮ್ಮ ದೇಶಕ್ಕೆ ಕರೆಸಿಕೊಂಡಿತು.

17ನೇ ಲೋಕ ಸಭೆಯಲ್ಲಿ ಎನ್‍ಡಿಎ ಬಲ 340, ಅದರಲ್ಲಿ ಬಿಜೆಪಿಯದು ತ್ರಿಶತಕ. ಆದರೆ ಉಪ ಚುನಾವಣೆಯಲ್ಲಿ ಬಲ ತ್ರಿಶತಕದ ಒಳಕ್ಕೆ ಬಂದಿದೆ. ಉಳಿದಂತೆ ಕಾಂಗ್ರೆಸ್ 52 ಒಂದೆರಡು ಉಪ ಚುನಾವಣೆಗಳಿಂದ ಹೆಚ್ಚಾಗಿದೆ. ಡಿಎಂಕೆ 24, ಕಮ್ಯೂನಿಸ್ಟ್ 22, ವೈಎಸ್‍ಆರ್ ಕಾಂಗ್ರೆಸ್ 22, ಶಿವಸೇನೆ 18, ಸಂಯುಕ್ತ ಜನತಾ ದಳ 16, ಬಿಜೆಡಿ 12 ಇತರ ಹೆಚ್ಚು ಸಂಸದರಿರುವ ಪಕ್ಷಗಳಾಗಿವೆ. ಉತ್ತರ ಪ್ರದೇಶ ಅತಿ ಹೆಚ್ಚು 80 ಲೋಕ ಸಭೆಯ ಸ್ಥಾನಗಳನ್ನು ಹೊಂದಿದೆ. ಮಹಾರಾಷ್ಟ್ರ 48, ಪಡುವಣ ಬಂಗಾಳ ಬಂಗಾಳ 42 ಅನಂತರದವು. ಹಿಂದೆ ಬಿಹಾರ 54 ಲೋಕ ಸಭಾ ಕ್ಷೇತ್ರ ಹೊಂದಿತ್ತು. ಅದರಲ್ಲಿ 14 ಜಾರ್ಖಂಡ್‍ಗೆ ಹೋಗಿದೆ.

17ನೇ ಲೋಕ ಸಭೆಯಲ್ಲಿ ಬುಡಕಟ್ಟು ಪ್ರತಿನಿಧಿ ಉತ್ತರ ಪ್ರದೇಶದ ಹಮೀರ್‍ಪುರದ ಪುಷ್ಪೇಂದ್ರ ಸಿಂಗ್ ಚಾಂಡೇಲ 1,194 ಚರ್ಚೆಗಳಲ್ಲಿ ಪಾಲ್ಗೊಂಡ ಅತಿ ಕಜ್ಜ ತತ್ಪರ ಸಂಸದರು. ಮಾಲೂಕ್ ನಗರ್ ಮತ್ತು ಸೆಂಥಿಲ್ ಕುಮಾರ್ ಕ್ರಮವಾಗಿ 582 ಮತ್ತು 307 ಚರ್ಚೆಗಳಲ್ಲಿ ಭಾಗವಹಿಸಿ ಎರಡ್ಮೂರನೆಯ ಸ್ಥಾನಿಗಳಾಗಿದ್ದಾರೆ. ರಾಜಸ್ತಾನ ಅಜ್ಮೀರದದ ಭಗೀರಥ್ ಚೌಧರಿ ಮತ್ತು ಛತ್ತೀಸಗಡದ ಕಾಂಕೇರ್ ಕ್ಷೇತ್ರದ ಮೋಹನ್ ಮಾಂಡವಿ 100% ಹಾಜರಾತಿ ಗಳಿಸಿದ್ದಾರೆ. 17ನೇ ಲೋಕ ಸಭೆಯಲ್ಲಿ ಸಂಸದರ ಸರಾಸರಿ ಹಾಜರಾತಿ 79% ಎನ್ನಲಾಗಿದೆ. ಲೋಕ ಸಭೆಯ ಒಳಗೆ ತೂಕಡಿಸಿದವರ, ಗೊರಕೆ ಹೊಡೆದವರ ಲೆಕ್ಕ ಸಿಕ್ಕಿಲ್ಲ.

✍ ಬರಹ: ಪೇರೂರು ಜಾರು

Related Posts

Leave a Reply

Your email address will not be published.