ಲಬಕ್ ನಾರಿಶಕ್ತಿ ಚಬುಕು

ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂಬ ಆಪಾದನೆ ಹೊರಿಸಿ, ಲೋಕ ಸಭೆಯಲ್ಲಿ ಮಾತನಾಡಲೂ ಬಿಡದೆ, ಬೇಟಿ ಹಟಾವೊ ರೀತಿಯಲ್ಲಿ ಮಹುವಾ ಮೊಯಿತ್ರಾರನ್ನು ಲೋಕ ಸಭೆಯಿಂದ ವಜಾ ಮಾಡಲಾಯಿತು. ಇಂತಾ ಕೆಲವು ಘಟನೆಗಳು ಸಂಸತ್ತಿನಲ್ಲಿ ಹಿಂದೆ ಸಹ ನಡೆದಿವೆ. ಆದರೆ ಅದಾನಿ ಸಂಪತ್ತು ಪ್ರಶ್ನಿಸಿದ ರಾಹುಲ್ ಗಾಂಧಿ ಮತ್ತು ಮಹುವಾ ಮೊಯಿತ್ರ ಇಬ್ಬರು ಕೂಡ, ಸಂಸತ್ ವಜಾ ಕಂಡುದು ಸರಕಾರ ಯಾರದು ಎಂಬ ಪ್ರಶ್ನೆಯನ್ನು ಎಬ್ಬಿಸುತ್ತದೆ. ಮಹುವಾರನ್ನು ರಾಜಕೀಯಕ್ಕೆ ಕರೆತಂದ ರಾಹುಲ್ ಗಾಂಧಿಯವರು ವಜಾಗೊಂಡ ಕತೆ ಧಾರಾವಾಹಿ ಆಗಿರುವಾಗಲೆ, ಆ ಸೀರಿಯಲ್ ನಿಲ್ಲಿಸಿ ಲಬಕ್ ಮಹುವಾ ಹೊಸ ಸೀರಿಯಲ್ ಆರಂಭವಾಗಿದೆ.

ಅದಾನಿ ವ್ಯವಹಾರದ ಬಗೆಗೆ ಮಹುವಾ ಮೊಯಿತ್ರರಷ್ಟು ಚೆನ್ನಾಗಿ ಬೇರೆಯವರಿಗೆ ಗೊತ್ತಿರಲು ಸಾಧ್ಯವಿಲ್ಲ. ಹಣಕಾಸು ಓದಿ, ಬ್ಯಾಂಕರ್ ಆಗಿ ಅದಾನಿ ಮಾದರಿಯ ಹಲವರ ವ್ಯವಹಾರ ಕಂಡವರು ಮಹುವಾ ಮೊಯಿತ್ರ. ಸಂಸತ್ತಿನಲ್ಲಿ ಬೇಟಿ ಹಟಾವೊ ನಡೆಯುತ್ತಲೇ ಹೊರ ಬಂದ ಮಹುವಾರು ನನಗೀಗ 49 ವರುಷ. ಇನ್ನೂ 30 ವರುಷ ಬಿಜೆಪಿಯ ಬೇಟಿಯರ ಬೇಟೆಯ ಬಗೆಗೆ ಹೋರಾಟ ನಡೆಸುವೆ. ಅದು ಮೋರಿಯಿಂದ ಗೋರಿಯತನಕ ಎಂದು ಅವರು ಘೋಷಣೆ ಮಾಡಿದ್ದಾರೆ.

ಪಡುವಣ ಬಂಗಾಳದ ಲಬಕ್ ಎಂಬುದು ಮಹುವಾ ಹುಟ್ಟಿದ ಊರು. ಅಲ್ಲಿಂದ ಕಾಲೂರಿ ಹಾರಿ ಅಮೆರಿಕ ಸಂಯುಕ್ತ ಸಂಸ್ಥಾನ ಸೇರಿ ಮಸಾಚು ಸೆಟ್ಸ್‍ನಲ್ಲಿ ಗಣಿತ ಮತ್ತು ಹಣಕಾಸು ಶಾಸ್ತ್ರದಲ್ಲಿ ಪದವಿ. ನ್ಯೂಯಾರ್ಕ್ ನಗರದ ಅತಿದೊಡ್ಡ ಜೆಪಿ ಮಾರ್ಗನ್ ಚೇಸ್‍ನಲ್ಲಿ ಬ್ಯಾಂಕರ್ ಆಗಿ ಹಣ ಚೇಸ್ ಮಾಡಿ ಹಿಡಿದರು. ಇವರ ಹಣ ಚೇಸ್ ಮೆಚ್ಚಿದ ಕಂಪೆನಿ ಇವರನ್ನು ಉಪಾಧ್ಯಕ್ಷೆ ಮಾಡಿ ಲಂಡನ್ ವಿಭಾಗಕ್ಕೆ ಕಳುಹಿಸಿತು. ಅಲ್ಲಿ ಮಹುವಾರಿಗೆ ಭಾರತದ ರಾಜಕೀಯ ಗೊತ್ತಾಯಿತು. ಆಮ್‍ದನಿ ಕೆಲಸ ಬಿಟ್ಟರು. ಆಮ್ ಆದ್ಮಿ ಕಾ ಸಿಪಾಯಿ ಎಂದು ಕಾಂಗ್ರೆಸ್ ಸೇರಿದರು. ಆಮ್ ಆದ್ಮಿ ಪಕ್ಷದ ಬೀಜ ಇದರಲ್ಲಿದೆ. 2009ರಲ್ಲಿ ರಾಹುಲ್ ಗಾಂಧಿಯವರ ಹಿಂದೆ ಇದ್ದರು. ಅವರ ಬಂಗಾಳ ರಾಜ್ಯದ ರಾಜಕೀಯ ರಾಹುಲ್‍ರ ಅಪ್ಪ ರಾಜೀವ್ ಗಾಂಧಿಯವರ ಶಿಷ್ಯೆ ಮಮತಾ ಬ್ಯಾನರ್ಜಿಯವರಿಂದಾಗಿ ಬೇರೆ ದಾರಿ ಹಿಡಿದಿತ್ತು. ಮಹುವಾ ಕೂಡ 2010ರಲ್ಲಿ ತೃಣಮೂಲ ಕಾಂಗ್ರೆಸ್‍ಗೆ ಲಬಕ್ಕನೆ ಜಿಗಿದರು.

2016ರಲ್ಲಿ ನಾಡಿಯ ಜಿಲ್ಲೆಯ ಕರೀಂಪುರದ ಶಾಸಕಿ, 2019ರಲ್ಲಿ ಕೃಷ್ಣ ನಗರ್‍ನ ಸಂಸದೆ. ಬಿಜೆಪಿ ಹೆಣೆದಿದ್ದ ಸಂಸದೀಯ ಸಮಿತಿಯ ಸದಸ್ಯರು ವರದಿ ಮೂಲಕ, ಈಗ ಇರುವುದು ಬರೇ ಹರೇ ರಾಮ್, ಹರೇ ಕೃಷ್ಣ ನಗರ ಎಂಪಿ ಹೊರ ನಡೆ ಎಂದರು.

ಆಗ ಬೇಟಿಗೆ ಬಾಯಿ ಬಿಡಲು ಬಿಡದಿದ್ದರೂ ಹಲವು ಬಿಜೆಪಿ ಜನ ಭಾಷಣ ಬಿಗಿದರು. ಬಿಜೆಪಿಯ ಒಂದಿಬ್ಬರು ಮುಸ್ಲಿಂ ಸಂಸದರಲ್ಲಿ ಒಬ್ಬರಾದ ಡ್ಯಾನಿಶ್ ಆಲಿಯವರು ನಾವು 300 ಸಂಸದರನ್ನು ಗೆಲ್ಲಿಸಿಕೊಂಡು ಬಂದವರು ಎಂದರು. ಅದಕ್ಕೆ ಸಂಸದ ರಮೇಶ್ ಬಿದುರಿಯವರು ಅದರಲ್ಲಿ ಮೂರು ಮುಸ್ಲಿಂ ಸಂಸದರನ್ನು ಗೆಲ್ಲಿಸಿ ತರಲಾಗದವರು. ನೀವು ನಾರಿ ಶಕ್ತಿ ವಿರೋಧಿ, ಮುಸ್ಲಿಂ ವಿರೋಧಿ ಎಂದು ಬಿಟ್ಟರು. ಇನ್ನು ತಡ ಮಾಡಿದರೆ ಕೆಲಸ ಕೆಡುತ್ತದೆ ಎಂದು ಮುಂದೆ ಮಾತಿಗೆ ಅವಕಾಶ ನೀಡದೆ ನಾರಿ ಶಕ್ತಿ ಔಟ್ ಎಂದು ಬಿಟ್ಟರು.

ಈಗ ಬಂಗಾಳದಲ್ಲಿ ಮತ್ತೆ ಮಹುವಾರನ್ನು ಸಂಸತ್ತಿನಲ್ಲೇ ಕೂರಿಸುತ್ತೇವೆ ಎಂದು ಜನ ಬೀದಿಗೆ ಇಳಿದಿದ್ದಾರೆ. ಭೂಮಿ ಬಾಯ್ಬಿಟ್ಟರೂ ನುಂಗುವುದು ಸೀತೆಯನ್ನು ತಾನೆ ಎಂದು ರಾಮ ಮಂತ್ರದವರು ಅಯೋಧ್ಯೆಯಿಂದ ಕರ್ನಾಟಕದ ಕೊಪ್ಪಳಕ್ಕೆ ರೈಲು ಬಿಡುತ್ತಿದ್ದಾರೆ. ಕೊಪಣ ಎಂಬ ಕೊಪ್ಪಳವು ಚಾರಿತ್ರಿಕ ಜೈನ, ಬೌದ್ಧ ಕ್ಷೇತ್ರ. ಬಿಜೆಪಿಯವರು ಪುರಾಣದ ಹನುಮಂತನ ಹತ್ತಿರ ಇನ್ನೂ ನಿಂತುಕೊಂಡು ಕನ್ನಡಿಗರತ್ತ ಹಲ್ಲು ಕಿರಿಯುತ್ತಿದ್ದಾರೆ.

✍ ಬರಹ: ಪೇರೂರು ಜಾರು


Related Posts

Leave a Reply

Your email address will not be published.