ಅನ್ನದ ಬಟ್ಟಲಿಗೆ ಅಡಕೆಯ ದಾಳಿ
ಕರ್ನಾಟಕ ರಾಜ್ಯದಲ್ಲಿ ಕಳೆದ ಐದು ವರುಷಗಳಲ್ಲಿ ಅಡಕೆ ಬೆಳೆಯುವ ಪ್ರದೇಶವು ಮೂರು ಪಾಲು ಹೆಚ್ಚಾಗಿದೆ. ಕ್ವಿಂಟಾಲ್ ಅಡಕೆಗೆ ಜಣ ಜಣ 50,000 ಎನ್ನುತ್ತಲೇ ಅಡಕೆ ಬೆಳೆಯುವ ಪ್ರದೇಶವು 5 ವರ್ಷಗಳಲ್ಲಿ 4.52 ಲಕ್ಷ ಹೆಕ್ಟೇರ್ ಹೆಚ್ಚಾಗಿ 7.32 ಲಕ್ಷ ಹೆಕ್ಟೇರಿಗೆ ವಿಸ್ತರಣೆಗೊಂಡಿದೆ. ಆಹಾರ ಬೆಳೆಯುವ ನೆಲೆಗಳೆಲ್ಲ ಅಡಕೆ ತೋಟಗಳಾಗಿ ಮೇಲೆದ್ದಿವೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್ ಹೇಳಿದ್ದು ವರದಿಯಾಗಿದೆ. ಮುಂದೆ ಆಹಾರ ಸಮಸ್ಯೆ ಏಳಬಹುದು ಎಂಬುದು ಅವರ ಮಾತಿನಲ್ಲಿ ದನಿಸುತ್ತಿತ್ತು.
ಅಡಕೆ ಚಾ, ಅಡಕೆ ಗೊಜ್ಜು, ಅಡಕೆ ಶರಬತ್, ಅಡಕೆ ಪಾಯಸ, ಅಡಕೆ ಸುಕ್ಕ, ಅಡಕೆ ಪುಳಿಮುಂಚಿ, ಅಡಕೆ ಮಜ್ಹಿಗೆ ಮೊದಲಾದವನ್ನೆಲ್ಲ ಬಟ್ಟಲು ತುಂಬ ಹರಡಿಕೊಂಡು ತಟ್ಟೆಯಲ್ಲಿ ಅನ್ನ ಉಣ್ಣುವ ದಿನ ಬಂದೀತು. ಇದು ವಿನೋದ, ಇಂದಿನ ವಿನೋದವೇ ದಿಟಸಮವಾಗಿ ಮುಂದಿನ ಸತ್ಯ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೊಂದು ದಶಕದಲ್ಲಿ ಅಡಕೆ ತೋಟ ದುಪ್ಪಟ್ಟು ಆಗಿ 32,582 ಹೆಕ್ಟೇರ್ ಮುಟ್ಟಿದೆ. ಜಿಲ್ಲೆಯ ಅಡಕೆ ಉತ್ಪಾದನೆ 33,155 ಮೆಟ್ರಿಕ್ ಟನ್. ಇದು ಲೆಕ್ಕ, ಲೆಕ್ಕ ಬರೆಯದ್ದು ಸೇರಿದರೆ 50,000 ಮೆಟ್ರಿಕ್ ಟನ್ ಎಂದು ಹೇಳಲಾಗುತ್ತಿದೆ.
ಮಲೇಶಿಯಾ ಮೂಲದ ಅಡಕೆಯನ್ನು ಕರ್ನಾಟಕದಲ್ಲಿ ಮೊದಲು ಸಾಗರ ತಾಲೂಕಿನ ಕ್ಯಾಸನೂರಿನಲ್ಲಿ ಬೆಳೆಯಲಾರಂಭಿಸಿದ್ದು ಎನ್ನಲಾಗಿದೆ. ಇಂದಿಗೂ ಕ್ಯಾಸನೂರು ಅಡಕೆ ಮತ್ತು ತಳಿ ಪ್ರಸಿದ್ಧವಾಗಿದೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಬೆಳೆಯಾಗಿತ್ತು ಅಡಕೆ. ಬಯಲು ಸೀಮೆಯಲ್ಲಿ ಮೆಲ್ಲ ಜಾಗ ಹಿಡಿಯಿತು. ದಾವಣಗೆರೆ, ಚಿತ್ರದುರ್ಗ, ತುಮಕೂರು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಹಬ್ಬಿದ ಅಡಕೆ ತೋಟಗಳು ಈಗ ಮಂಡ್ಯದ ಕಬ್ಬಿಗೆ ಸವಾಲು ಹಾಕಿದೆ. ದಾವಣಗೆರೆಯಲ್ಲಿ ಇತರ ಬೆಳೆಗಳಿಗೆ ಸವಾಲು ಹಾಕಿದ ಅಡಕೆಯು ಈಗ ಅಲ್ಲಿ ಇತರ ಬೆಳೆಗಳ ಮೇಲೆ ಸವಾರಿ ಮಾಡುತ್ತಿದೆ. ದಾವಣಗೆರೆ ಜಿಲ್ಲೆಯ 10,000 ಹೆಕ್ಟೇರ್ ಭತ್ತ ಬೆಳೆಯುವ, 30,890 ಹೆಕ್ಟೇರ್ ನೆಲಕಡಲೆ ಇತ್ಯಾದಿ ಬೆಳೆಯುವ ನೆಲವನ್ನು ಅಡಕೆ ಗೆದ್ದುಕೊಂಡಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಈಗ ಸರಕಾರಿ ನೌಕರರ ಅಡಕೆ ಎಸ್ಟೇಟ್‍ಗಳಾಗಿ ಬದಲಾಗಿದೆ. ಇವು ಚಿಕ್ಕಮಗಳೂರು ಜಿಲ್ಲೆಯ ಕಾಫಿ ಚಾ ಎಸ್ಟೇಟುಗಳನ್ನು ಹಿಂದಿಕ್ಕಲಿವೆ ಎನ್ನಲಾಗುತ್ತಿದೆ. ಬಯಲುಸೀಮೆ ಪ್ರದೇಶದಲ್ಲಿ ಏತ ನೀರಾವರಿ ಮೂಲಕ ಕೆರೆ ತುಂಬುವ ಯೋಜನೆ ಜಯ ಕಾಣುತ್ತಿರುವುದು ಅಡಕೆ ಬೆಳೆಯುವವರಿಗೆ ವರದಾನವಾಗಿದೆ. ಅಡಕೆ ಕದ್ದರೂ ಕಳ್ಳ ಆನೆ ಕದ್ದರೂ ಕಳ್ಳ ಎಂಬ ಗಾದೆ ಹೋಗಲಿ, ಅಡಕೆಗೆ ಬಂಗಾರದ ಬೆಲೆ ಬರುತ್ತಲೇ ಒಣ ಹಾಕಿದ ಅಡಕೆಯನ್ನು ಕದಿಯುವವರು ಕೂಡ ಹೆಚ್ಚಾಗಿದ್ದಾರೆ. ಈಗ ಅಡಕೆಗೊಂದು ಕಾಲ, ಆನೆಗೊಂದು ಕಾಲ ಎಂದು ಹೇಳಬಹುದು. ಹೊಸದಾಗಿ ನೆಟ್ಟ ಅಡಕೆ ಫಲ ಕೊಡಲು ಐದಾರೇಳು ವರುಷ ಬೇಕು. ಕಾಡು ಕದ್ದು ಅಡಕೆ ನೆಟ್ಟಿರುವುದೂ ಇರುವುದರಿಂದ ಕಾಡಾನೆಗಳು ಹೊಸ ಅಡಕೆ ಸಸಿ ಸಿಕ್ಕರೆ ಸಂತೋಷದಿಂದ ಕಿತ್ತು ತಿನ್ನುತ್ತವೆ. ಗುಟ್ಕಾ ಅಗಿದು ಎಲ್ಲೆಂದರಲ್ಲಿ ಉಗುಳುವ ಮನುಷ್ಯರಂತೆ ಆನೆ ನಡೆದುಕೊಳ್ಳುವುದಿಲ್ಲ.
ಅರಕಾಲೆಸ್ ಗುಂಪಿನ ಅರೆಕಾಸಿಯೇಸಿ ಕುಟುಂಬದ ಅರೆಕಾ ಅಡಕೆಯಲ್ಲಿ 51 ಬಗೆಯವು ಇವೆ. ರಾಜ್ಯದ ವಾಣಿಜ್ಯ ಬೆಳೆಗಳಲ್ಲಿ ಅಡಕೆ ಸಹ ಒಂದು. ಬೇಯಿಸಿ ಕೆಂಪಡಕೆ, ಬೇಯಿಸದೆ ಒಣಗಿಸಿ ಸಿಪ್ಪೆ ತೆಗೆದು ಚಾಲಿ ಅಡಕೆ ಮಾರಾಟಕ್ಕೆ ಹೋಗುತ್ತದೆ. ಅಡಕೆ ಮಾರಾಟದ ದೊಡ್ಡ ದಲ್ಲಾಳಿಗಳು, ವ್ಯಾಪಾರಿಗಳು ಗುಜರಾತಿಗಳು. ತಾಳೆ ಜಾತಿಯ ಮರಗಳಲ್ಲಿ ಅರೆಕಾ ಪಾಮ್ ಕೂಡ ಒಂದು. ಅಡ ಎಂಬುದು ತುಳು ಶಬ್ದ. ಅಡ ಎಂದರೆ ತಿರುಳು. ಅಡಕೆ ಒಂದು ತಿರುಳು ಆಗಿರುವುದರಿಂದ ಅದನ್ನು ಅಡಕೆ ಎನ್ನುತ್ತಾರೆ. ಕೆಲವರು ಅಡಿಕೆ ಎಂದು ಬರೆಯುವುದು ತಪ್ಪು. ಅಡಕೆ ಮರದ ಅಡಿಗಿಂತ ಮೇಲಿನದೇ ಹೆಚ್ಚು ಲಾಭಕರ. ಹಿಂದೆ ಅಡಕೆಯ ಹಾಳೆ ಕೊಂಬರು ಟೊಪ್ಪಿ, ಸೆಗಣಿ ಸಾರಿಸಲು ಬಳಕೆಯಾಗುತ್ತಿತ್ತು. ಇಂದು ತಟ್ಟೆ ಬಟ್ಟಲುಗಳಾಗಿ ಗತ್ತಿನಿಂದ ಊಟದ ಹಜಾರ ಪ್ರವೇಶಿಸಿದೆ. ವೀಳ್ಯ ಕೊಡುವಾಗ, ವೀಳ್ಯ ಪಡೆಯುವಾಗ ವೀಳಯದೆಲೆಯ ಜೊತೆಗೆ ಅಡಕೆಯೂ ಶುಭ ಕಾರ್ಯ ಭಾಗ್ಯ ಪಡೆದಿದೆ. ಶುಭ ಕಾರ್ಯದಲ್ಲಿ ಬಳಸಿದ್ದು ತಿಂದಾಗ ಎಲೆಯಡಿಕೆ, ಬೀಡ ಇತ್ಯಾದಿ ರೂಪ. ಈಗ ಗುಟಕಾದಿ ಆಗಿ ಚಟ ಚಕ್ರವರ್ತಿಗಳನ್ನು ಅಡಕೆ ತಯಾರಿಸಿದೆ. ಇದರ ಜೊತೆಗಿನ ತುಸು ಅಮಲು ಹೊಗೆಸೊಪ್ಪು ಕೂಡ ಭಾರತದ್ದಲ್ಲ. ಅಮೆರಿಕ ಖಂಡದಿಂದ ಬಂದುದು.
ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎನ್ನುವ ಗಾದೆಯೂ ಇದೆ. ದಂಡ ಹಾಕುವ ಹೆಸರಲಗೆ ಇದ್ದರೂ ಉಗಿಯುವುದು ನಮ್ಮ ಮೂಲಭೂತ ಹಕ್ಕು ಎಂದು ಬಸ್ಸು ನಿಲ್ದಾಣಗಳನ್ನು ಪಾವನ ಮಾಡುವವರು ಹೆಚ್ಚಿದ್ದಾರೆ. ಗುಜರಾತಿನ ವ್ಯಾಪಾರಿಗಳು ಮುಸಿಮುಸಿ ನಕ್ಕು ಚಟ ದಾಸರಿಗೆ ಕೇಸರಿ ತೋರಿಸಿ ತಾವು ಕೇಸರಿಬಾತ್ ತಿನ್ನುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಡಕೆಯ ಪಾನೀಯ ಇತ್ಯಾದಿ ಸಂಶೋಧನೆ ಜೋರಾಗಿ ನಡೆದಿದೆ. ಪಾನ್ ಕಾಯಾ ಪಾನೀಯ ಪಿಯಾ ದಿನ ಹತ್ತಿರದಲ್ಲಿ ಇದೆ. ಅನ್ನ ಎಲ್ಲಿಗೆ ಗಯಾ ಎಂಬ ದಿನ ಸಹ ದೂರವಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ 20,000 ಹೆಕ್ಟೇರ್ ಇದ್ದ ಅಡಕೆ ಬೆಳೆ 47,000 ಹೆಕ್ಟೇರಿಗೆ ಹಿಗ್ಗಿದೆ. ನಷ್ಟವಾದುದು ಭತ್ತದ ಗದ್ದೆ ಮತ್ತು ಕಾಡು. 2018ರಲ್ಲಿ 2,79,000 ಹೆಕ್ಟೇರ್ ಇದ್ದ ಅಡಕೆ ತೋಟ 2023ರ ಅಂತ್ಯಕ್ಕೆ 7.32 ಲಕ್ಷ ಹೆಕ್ಟೇರಿಗೆ ವಿಸ್ತರಣೆ ಕಂಡಿದೆ. 5 ವರ್ಷಗಳಲ್ಲಿ ಹೆಚ್ಚಾಗಿರುವ ಅಡಕೆ ತೋಟದ ವಿಸ್ತೀರ್ಣ 4.52 ಲಕ್ಷ ಹೆಕ್ಟೇರುಗಳು. ಅನ್ನ ತಿನ್ನುವ ಬದಲು ಚಿನ್ನ ತಿನ್ನಲಾಗದು ದಿಟ, ಆದರೆ ಅಡಕೆ ತಿನ್ನಬಹುದು. ಅರಗಿಸಿಕೊಳ್ಳುವುದು ಸಾಧ್ಯವೇ ಎನ್ನುವ ಸಂಶೋಧನೆಯನ್ನು ಯಾರೂ ಮಾಡಿಲ್ಲ.