ಕುಂದಾಪುರ: ಸೌಹಾರ್ದ ಕ್ರಿಸ್ಮಸ್ ಆಚರಣೆ

ಉಡುಪಿ: ಕ್ರಿಸ್ತ ಜಯಂತಿ ಹಬ್ಬವು ಶಾಂತಿಯನ್ನು ಸಾರುತ್ತದೆ. ಶಾಂತಿಯ ಸಾಧನವಾಗಲು, ಶಾಂತಿಯ ದೂತರಾಗಲು ನಮ್ಮನ್ನು ಪ್ರೇರೇಪಿಸುತ್ತದೆ. ಕ್ರಿಸ್ತ ಜಯಂತಿಯ ಪ್ರೀತಿಯ ಜ್ಯೋತಿ ನಮ್ಮ ತನುಮನಗಳಲ್ಲಿ ಪ್ರಜ್ವಲಿಸಬೇಕಾದರೆ ನಾವು ಕ್ರಿಸ್ತರಂತೆ ಪ್ರೀತಿ ಸ್ವರೂಪರಾಗಿ ಸೇವಾಮನೋಭಾವದಿಂದ ನಿಸ್ವಾರ್ಥಿಗಳಾಗಬೇಕು ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಶನಿವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ  ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಆಯೋಜಿಸಿದ್ದ ಸೌಹಾರ್ದ ಕ್ರಿಸ್ಮಸ್ ಆಚರಣೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಎರಡು ಸಾವಿರ ವರುಷಗಳ ಹಿಂದೆಯೇ ಜನಿಸಿದ ಯೇಸು ದೇವರೇ ಪ್ರೀತಿಯೆಂದು ಸಾರಿದರು. ದೇವರು ನಮ್ಮ ಮಧ್ಯೆ ಇದ್ದಾರೆ ಎಂದು ತೋರಿಸಿದರು. ದೇವರ ಪ್ರೀತಿ ಪಾತ್ರರಾಗಬೇಕಾದರೆ ದೀನತಾಭಾವ ಅತ್ಯಗತ್ಯ ಎಂದು ಬೋಧಿಸಿದರು. ತನಗಾಗಿ ಏನನ್ನೂ ಹಿಡಿದಿಟ್ಟುಕೊಳ್ಳದೆ ಎಲ್ಲವನ್ನೂ ಧರೆಗೆ ಧಾರೆ ಎರೆಯುವುದೇ ಸ್ವಾರ್ಥ ರಹಿತ ಪ್ರೀತಿ. ದೇವರ ಈ ನಿಸ್ವಾರ್ಥ ಪ್ರೀತಿಯ ಕಥೆಯನ್ನು ಸಾರಿ ಹೇಳುವ ಮಹಾ ಸಂದರ್ಭವೇ ಕ್ರಿಸ್ಮಸ್ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಸದಸ್ಯರಾದ ಅಬ್ದುಲ್ ಅಝಿಜ್ ಉದ್ಯಾವರ ಮಾತನಾಡಿ ಸೌಹಾರ್ದತೆಯನ್ನು ಪ್ರೇರೆಪಿಸುವ ಇಂತಹ ಕಾರ್ಯಕ್ರಮಗಳು ಬರಡು ಭೂಮಿಯಲ್ಲಿ ಮಳೆನೀರಿನ ಸಿಂಚನವಾದಂತೆ ಭಾಸವಾಗುತ್ತದೆ. ಈ ಮೂಲಕ ಸಮಾಜದಲ್ಲಿ ಕೂಡು ಬಾಳುವಿಕೆಯಿಂದ ಸಮಾಜವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸಲು ಸಾಧ್ಯ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇದರ ಸುಂದರ ಮಾಸ್ತರ್, ಹಾಗೂ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಟಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಹಕಾರ ರತ್ನ ಪ್ರಶಸ್ತಿ ಪಡೆದ ಎಂ.ಸಿಸಿ ಬ್ಯಾಂಕ್ ಇದರ ಅಧ್ಯಕ್ಷ ಅನಿಲ್ ಲೋಬೊ ಫೆರ್ಮಾಯಿ, ಪತ್ರಕರ್ತರಾದ ಶಶಿಧರ ಮಾಸ್ತಿಬೈಲು, ಮಹಮ್ಮದ್ ಷರೀಫ್, ನಝೀರ್ ಪೊಲ್ಯ, ಶ್ರೀಕಾಂತ ಹೆಮ್ಮಾಡಿ, ಜಸ್ಟೀನ್ ಎರೋಲ್ ಡಿ’ಸಿಲ್ವಾ, ಸಮಾಜ ಸೇವಕರಾದ ಹಾಜಿ ಅಬ್ದುಲ್ಲಾ ಪರ್ಕಳ, ಆಯಿಷಾ ಭಾನು, ವಿಶು ಶೆಟ್ಟಿ ಅಂಬಲಪಾಡಿ, ಈಶ್ವರ್ ಮಲ್ಪೆ, ಮೇರಿ ಶ್ರೇಷ್ಠ, ಕ್ಲಾರೆನ್ಸ್ ಡಿಸೋಜಾ, ಹೆನ್ರಿ ಸಾಂತುಮಾಯೆರ್, ರಾಜಕೀಯ ಕ್ಷೇತ್ರದ್ಲಲಿ ಅರುಣ್ ಫೆರ್ನಾಂಡಿಸ್, ವಿಲ್ಸನ್ ರೊಡ್ರಿಗಸ್, ಮೇರಿ ಮಸ್ಕರೇನ್ಹಸ್, ಜೋನ್ ಸಿಕ್ವೇರಾ ಹಾಗೂ ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೋ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷರಾದ ಮೇರಿ ಡಿ’ಸೋಜಾ, ನಿಯೋಜಿತ ಅಧ್ಯಕ್ಷರಾದ ರೊನಾಲ್ಡ್ ಡಿ’ಆಲ್ಮೇಡಾ, ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ವಾಲ್ಟರ್ ಸಿರಿಲ್ ಪಿಂಟೊ, ಆಲ್ಫೋನ್ಸ್ ಡಿಕೋಸ್ತಾ, ಮಾಧ್ಯಮ ಸಮಿತಿ ಸಂಚಾಲಕ ಮೈಕಲ್ ರೊಡ್ರಿಗಸ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ ಮೆಲ್ವಿನ್ ಅರಾನ್ಹಾ ಸ್ವಾಗತಿಸಿ, ಕಥೊಲಿಕ್ ಸಭಾ ಉಡುಪಿ ಪ್ರದೇಶ ಕಾರ್ಯದರ್ಶಿ ಒಲಿವಿಯಾ ಡಿಮೆಲ್ಲೊ ವಂದಿಸಿದರು. ಮಾಜಿ ಅಧ್ಯಕ್ಷರಾದ ಡಾ|ಜೆರಾಲ್ಡ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು

Related Posts

Leave a Reply

Your email address will not be published.