ಮಂಗಳೂರು : ಗೃಹರಕ್ಷಕ ದಳ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ
ಮಂಗಳೂರು: ಮೇರಿಹಿಲ್‍ನಲ್ಲಿರುವ ಗೃಹರಕ್ಷಕ ದಳ ಕಛೇರಿಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಿ ಧ್ವಜಾರೋಹಣ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರುರವರು ಧ್ವಜಾರೋಹಣ ಮಾಡಿ ಮಾತನಾಡಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವವಾದಿ ರಾಷ್ಟ್ರ ಭಾರತ ಆಗಿದ್ದು, ನಮ್ಮ ಸಂವಿಧಾನ ಅತ್ಯಂತ ಸುದೀರ್ಘ ಸಂವಿಧಾನ ಆಗಿರುತ್ತದೆ. ಇಂತಹ ಪವಿತ್ರ ಸಂವಿಧಾನವನ್ನು ರಕ್ಷಿಸಲು ನಾವೆಲ್ಲರೂ ನಮ್ಮನ್ನು ಮಗದೊಮ್ಮೆ ದೇಶಕ್ಕಾಗಿ ಸಮರ್ಪಿಸಿಕೊಳ್ಳಬೇಕಾದ ಅಗತ್ಯವಿದ ಮತ್ತು ಈ ದೇಶದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಾಮಾಜಿಕ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜೆಗೂ ಇರಬೇಕು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾತ್ಮಗಾಂಧೀಜಿ, ಸರ್ದಾರ್ ಪಟೇಲ್, ನೇತಾಜಿ, ಸುಭಾಸ್‍ಚಂದ್ರ ಬೋಸ್ ಅವರ ತ್ಯಾಗ ಬಲಿದಾನಗಳನ್ನು ವ್ಯರ್ಥವಾಗದಂತೆ ನೋಡಿಕೊಳ್ಳುವುದು ಪ್ರತಿ ಭಾರತೀಯರ ಆದ್ಯ ಕರ್ತವ್ಯವಾಗಿದೆ ಮತ್ತು ಹೊಣೆಗಾರಿಕೆ ಆಗಿರುತ್ತದೆ ಎಂದು ಅವರು ನುಡಿದರು, ಎಲ್ಲಾ ಗೃಹರಕ್ಷಕರಿಗೂ ಗಣರಾಜ್ಯೋತ್ಸವದ ಶುಭಾಶಯ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೊಸಕುರಲ್ ಪತ್ರಿಕೆಯ ಹಿರಿಯ ಪತ್ರಕರ್ತರಾದ ವಿದ್ಯಾಧರ ಶೆಟ್ಟಿ ಇವರು ಮಾತನಾಡಿ ಭಾರತ ಸಂವಿಧಾನವನ್ನು ಡಾ. ಬಿ ಆರ್ ಅಂಬೇಡ್ಕರ್ ಇವರ ನೇತೃತ್ವದಲ್ಲಿ ರಚಿಸಲಾಯಿತು. ನಾವೇಲ್ಲರು ಜವಾಬ್ದಾರಿಯುತ ಭಾರತದ ಪ್ರಜೆಗಳಾಗಿ ಸಂವಿಧಾನದ ನಿಯಮಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಯಾವುದೇ ಇಲಾಖೆ ಹಾಗೂ ನೊಂದಾಯಿತ ಅಥವಾ ನೊಂದಾಯಿತವಲ್ಲದ ಸಂಘ ಸಂಸ್ಥೆಗಳು ಸಂವಿಧಾನದ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದ್ದು, ನಿಯಮಾನುಸಾರ ಕರ್ತವ್ಯ ನಿರ್ವಹಿಸಿದ್ದಲ್ಲಿ ಸಂಘ ಸಂಸ್ಥೆಗಳು ಯಶಸ್ವಿಯಾಗಲು ಸಾಧ್ಯವಿದೆ. ಅದರಂತೆ ನಮ್ಮ ಇಲಾಖೆಯು ಶಿಸ್ತಿನಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು, ದೇಶಕ್ಕಾಗಿ ಬಲಿದಾನ ಗೈದ ಮಹಾತ್ಮರನ್ನು ಸ್ಮರಿಸಿದರು ಹಾಗೂ ಗೃಹರಕ್ಷಕರಿಗೆ ಗಣರಾಜ್ಯೋತ್ಸವದ ಶುಭಾಶಯವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಶ್ರೀಮತಿ ಶ್ಯಾಮಲಾ ಎ., ಮತ್ತು ಸೀನಿಯರ್ ಪ್ಲಟೂನ್ ಕಮಾಂಡರ್ ಮಂಗಳೂರು ಘಟಕದ ಘಟಕಾಧಿಕಾರಿ ಶ್ರೀ ಮಾರ್ಕ್‍ಶೇರಾ ಹಾಗೂ ಮಂಗಳೂರು ಘಟಕದ ಸುಮಾರು 100 ಮಂದಿ ಗೃಹರಕ್ಷಕ/ಗೃಹರಕ್ಷಕಿಯರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.