ಮಂಗಳೂರು : ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯಲ್ಲಿ “ಶ್ರೀ ರಾಮೋತ್ಸವ” ಕಾರ್ಯಕ್ರಮ
ಮಂಗಳೂರು : ಆಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಲೋಕಾರ್ಪಣೆ ಸಲುವಾಗಿ ಮಹಾವೀರ ಶಾಖೆ, ಬಜಿಲಕೇರಿ ವತಿಯಿಂದ ನಗರದ ಟಿ. ಟಿ ರಸ್ತೆಯಲ್ಲಿರುವ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯಲ್ಲಿ (ಗೋಧೆ) “ಶ್ರೀ ರಾಮೋತ್ಸವ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸೋಮವಾರ ಸಂಜೆ 6:30 ಗಂಟೆಗೆ ರಾಮ ದೇವರ ಭಾವಚಿತ್ರಕ್ಕೆ ಪುಷ್ಪವೃಶ್ಟಿ ಮೂಲಕ ಮೆರವಣಿಗೆ ಆಗಮಿಸಿತು. ಪುಟಾಣಿ ಮಕ್ಕಳು ಶ್ರೀ ರಾಮ, ಸೀತಾ ಮಾತೆ, ಲಕ್ಷ್ಮಣ ಹಾಗೂ ಹನುಮಂತನ ವೇಷ ಧರಿಸಿದ್ದು ಎಲ್ಲರ ಆಕರ್ಷಣೆಗೆ ಸಾಕ್ಷಿಯಾಯಿತು.
ನಂತರ ದೀಪಾಲಂಕಾರ, ಭಜನೆ, ಹನುಮಾನ್ ಚಾಲಿಸ ಪಠಣ, ರಾಮ ತಾರಕ ಜಪ ಎಲ್ಲರನ್ನು ಭಕ್ತಿ ಅಲೆಯಲ್ಲಿ ತೇಲಿಸಿತು. ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಸರಯೂ ಬಾಲ ಯಕ್ಷ ವೃಂದ (ರಿ.) ಮಕ್ಕಳ ಮೇಳ, ಕೋಡಿಕಲ್ ಇವರಿಂದ ಯಕ್ಷಗಾನ ಬಯಲಾಟ ನಡೆಯಿತು. ಕೊನೆಯಲ್ಲಿ ಅಯೋಧ್ಯೆಯ ಸಂಘರ್ಷದ ಕುರಿತಾದ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ದೇವರ ಮಹಾಪೂಜೆ ಬಳಿಕ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ವಂದೇ ಮಾತರಂನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ವಿಶೇಷವಾದ ಸಾಂಪ್ರದಾಯಿಕ ಕಾರ್ಯಕ್ರಮಗಳ ಮೂಲಕ ಸಮಾರಂಭವು ವಿಜ್ರಂಭಣೆಯಿಂದ ಸಂಪನ್ನಗೊಂಡಿತಾಗಿದೆ.