ಮಂಗಳೂರು: ಸಮಾಜ ಸೇವಕ ಡಾ. ಅಬ್ದುಲ್ ಶಕೀಲ್‍ಗೆ ಏಷ್ಯಾ ಅಚೀವರ್ಸ್ ಅವಾರ್ಡ್
ಮಂಗಳೂರು: ಕೋವಿಡ್ ಸಂದರ್ಭ ಹತ್ತು ಸಾವಿರಕ್ಕೂ ಅಧಿಕ ಅರ್ಹ ಕುಟುಂಬಗಳಿಗೆ ಅಕ್ಕಿ ವಿತರಣೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಹಿತ ಹಲವು ರೀತಿಯಲ್ಲಿ ಸಾಮಾಜಿಕ ಸೇವೆಯನ್ನು ನಡೆಸುತ್ತಿರುವ ಡಾ. ಅಬ್ದುಲ್ ಶಕೀಲ್ ಅವರು ಭಾರತೀಯ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್, ಸ್ವಾಮಿ ವಿವೇಕಾನಂದ ಕಲ್ಚರಲ್ ಸೆಂಟರ್ ಕೊಲಂಬೊ ಮತ್ತು ಹೈ ಕಮಿಷನ್ ಆಫ್ ಇಂಡಿಯಾ ಕೊಲಂಬೊ ಕೊಡಮಾಡುವ ಏಷ್ಯಾ ಅಚೀವರ್ಸ್ ಅವಾರ್ಡ್‍ಗೆ ಆಯ್ಕೆಯಾಗಿದ್ದಾರೆ.
ಅ.25ರಂದು ಶ್ರೀಲಂಕಾದ ಯುನಿವರ್ಸಿಟಿ ಆಫ್ ವಿಶುವಲ್ ಆಂಡ್ ಫರ್ಪಾಮಿಂಗ್ ಆರ್ಟ್ಸ್ ಸಭಾಂಗಣದಲ್ಲಿ ಅಯೋಜಿಸಲಾದ 40ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ಶ್ರೀಲಂಕಾ ಸರಕಾರದ ಧಾರ್ಮಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ವಿದುರ ವಿಕ್ರೆಮ ನಾಯಕೆ ಹಾಗೂ ಶ್ರೀ ಲಂಕಾ ಸರಕಾರದ ಉನ್ನತ ಶಿಕ್ಷಣ ಸಚಿವ ಸುರೆನಾ ರಾಘವನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಉಳ್ಳಾಲ ತಾಲೂಕಿನ ದೇರಳಕಟ್ಟೆ ರೆಂಜಾಡಿ ನಿವಾಸಿ ಅಬ್ದುಲ್ ಖಾದರ್ ಹರೇಕಳ ಮತ್ತು ಮೈಮುನಾ ದಂಪತಿಯ ಪುತ್ರನಾದ ಡಾ. ಅಬ್ದುಲ್ ಶಕೀಲ್ ಗಲ್ಫ್ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನಿವಾಸಿ ಭಾರತೀಯರಾಗಿ ವಿವಿಧ ದೇಶಗಳಲ್ಲಿ ಉದ್ಯಮ ಸಂಸ್ಥೆಗಳನ್ನು ನಡೆಸುತ್ತಿರುವ ಡಾ. ಅಬ್ದುಲ್ ಶಕೀಲ್ ಅವರು ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಆ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.