ಮಂಜೇಶ್ವರ : ಸಿಪಿಐ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ರಾಜನ್ ನಿಧನ
ಮಂಜೇಶ್ವರ : ಸಿಪಿಐ ಕಾಸರಗೋಡು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ರಾಜನ್ ನಿಧನರಾದರು.
ಮಂಜೇಶ್ವರ ಪಂಚಾಯತ್‌ನ ವತಿಯಿಂದ ನಡೆದ ಶುಚಿತ್ವ ಮಿಷನ್‌ನ ಸಭೆಯಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿರುವ ಮಧ್ಯೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಮಂಜೇಶ್ವರದ ರಾಜಕೀಯ ವಲಯದಲ್ಲಿ ಬಿ.ವಿ.ರಾಜನ್ ವಿಶೇಷ ವ್ಯಕ್ತಿತ್ವದೊಂದಿಗೆ ಗುರುತಿಸಿದವರು. ಈ ಪ್ರದೇಶದಲ್ಲಿ ಸಿಪಿಐ ಚಳುವಳಿಯಲ್ಲಿ ದಿ.ಕಾಮ್ರೇಡ್ ಡಾ.ಸುಬ್ಬರಾವ್ ರವರ ಕಾಲಘಟ್ಟದಿಂದಲೇ ಮುಂಚೂಣಿಯಲ್ಲಿ ಗುರುತಿಸಿಕೊಂಡವರು. ವಿದ್ಯಾರ್ಥಿದೆಸೆಯಿಂದಲೇ ಕಮ್ಯೂನಿಸ್ಟ್ ಹೋರಾಟಕ್ಕೆ ಧುಮುಕ್ಕಿದ್ದ ಬಿ.ವಿ.ರಾಜನ್ ಯುವಜನ ಸಂಘಟನೆಯಲ್ಲಿಯು ಗುರುತಿಸಿಕೊಂಡವರು. ನಿರರ್ಗಳವಾಗಿ ಮಲೆಯಾಳಂ, ಕನ್ನಡ ಹಾಗೂ ತುಳುಭಾಷೆಯಲ್ಲಿ ಭಾಷಣ ಮಾಡಬಲ್ಲ ಅಸಾಮಾನ್ಯ ಶಕ್ತಿ ಹೊಂದಿದವರು.
ರಾಜಕೀಯ ರಂಗದ ಜೊತೆಗೆ ರೈತಚಳುವಳಿಯಲ್ಲಿಯೂ ಗುರುತಿಸಿಕೊಂಡಿದ್ದ ಇವರು ಮಂಜೇಶ್ವರ ಆಸುಪಾಸಿನಲ್ಲಿ ಸಹಕಾರಿ ರಂಗದ ಉನ್ನತಿಗೆ ಭಧ್ರಬುನಾದಿ ಹಾಕಿದ ಪ್ರಬುದ್ಧ ರಾಜಕಾರಣಿ. ಸಹಕಾರಿ ರಂಗದೊಂದಿಗೆ ತನ್ಪ ರಾಜಕೀಯ ನೆಲೆಗಟ್ಟನ್ನು ಭಧ್ರಗೊಳಿಸಿದವರು. ಅದೆಷ್ಟೋ ಯುವಜನತೆಗೆ ಬದುಕುವ ಹಾದಿಯೊಂದಿಗೆ ರಾಜಕೀಯ ಭವಿಷ್ಯವನ್ನೂ ರೂಪಿಸಿದವರು. ಕಾರ್ಮಿಕರ ಪರ ಧ್ವನಿಯೆತ್ತಿ, ಕೃಷಿಕರ ಪರ ಕಾಳಜಿಹೊಂದಿ, ಅಸಹಾಯಕರ ಪಾಲಿಗೆ ಧೈರ್ಯದಾಸರೆಯಾಗಿದ್ದ ಬಿ.ವಿ.ರಾಜನ್ ರನ್ನು ಎಲ್ಲಾ ರಾಜಕೀಯ ಪಕ್ಷದವರು ಸಮಾನವಾಗಿ ಗೌರವಿಸುತ್ತಿದ್ದರು.
ಕಾಸರಗೋಡು ಜಿಲ್ಲೆಯ ತುಳುನಾಡಿನಲ್ಲಿ ಕಮ್ಯೂನಿಸ್ಟ್ ಪಕ್ಷದ ಏಳಿಗೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಬಿ.ವಿ.ರಾಜನ್ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡು, ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷರಾಗಿ, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ, ಮಂಜೇಶ್ವರ ಅಭಿವೃದ್ಧಿ ಸಮಿತಿಯ ಮುಂದಾಳುವಾಗಿ ಜನಾನುರಾಗಿಯಾಗಿದ್ದ ಅಪರೂಪದ ರಾಜಕಾರಣಿ. ನಾಡಿನ ಅಭಿವೃದ್ಧಿಯ ವಿಷಯ ಬಂದಾಗ ಎಲ್ಲಾ ರಾಜಕೀಯ ಪಕ್ಷದ ಮುಖಂಡರನ್ನು ಜತೆಗೂಡಿಸಿಕೊಂಡು ಹೋರಾಟಮಾಡಬಲ್ಲ ವಿಶೇಷ ಚಾಕಚಕ್ಯತೆ ಇವರದ್ದು.
ಬಿ.ವಿ.ರಾಜನ್ ಮಂಜೇಶ್ವರದ ಪ್ರತಿಯೊಬ್ಬರಿಗೂ ಚಿರಪರಿಚಿತರಾದ ವ್ಯಕ್ತಿ. ತುಳುನಾಡು ಕಂಡ ಅಪರೂಪದ ರಾಜಕಾರಣಿ.ಗ್ರಾಮೀಣ ಮಟ್ಟದಲ್ಲಿ ಜನಸಾಮಾನ್ಯರ ಕಷ್ಟಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಿದ್ದ ವ್ಯಕ್ತಿ ಕೂಡಾ ಹೌದು. ನೇರಮಾತಿನ ಅವರ ನಡೆನುಡಿಗಳಲ್ಲಿ ಆಳವಾದ ಅಧ್ಯಯನಶೀಲತೆ, ಕಾರ್ಯತತ್ಪರತೆ ಕ್ರೀಯಾಶೀಲತೆ ಹಾಗೂ ಪ್ರತಿಬದ್ಧತೆ ನಿಜಕ್ಕೂ ಶ್ಲಾಘನೀಯ. ಉತ್ತಮ ಓದುಗ, ಬರಹಗಾರ, ಚಿಂತಕ, ಸಂಘಟಕ, ಅಪ್ಪಟ ಜಾತ್ಯಾತೀತವಾದಿ… ಹೀಗೆ ಎಲ್ಲವನ್ನೂ ತನ್ನೊಳಗೆ ಹುದುಗಿಸಿಗೊಂಡಿದ್ದ ಬಹು ವ್ಯಕ್ತಿತ್ವದ ರಾಜಕಾರಣಿ. ನೋಟ ತೀಕ್ಷ್ಣವಾದರೂ ಅಷ್ಟೇ ಮೃದುಹೃದಯಿ. ಬಿ.ವಿ.ರಾಜನ್ ರವರ ಅಗಲಿಕೆ ನಿಜಕ್ಕೂ ಗಡಿ ನಾಡಿಗೆ ತುಂಬಲಾರದ ನಷ್ಟ. ಅವರ ಅಗಲಿಕೆ ಈ ನಾಡಿನಲ್ಲಿ ಶೂನ್ಯತೆಯನ್ನು ಸೃಷ್ಟಿಸಿದೆ. ಕಳೆದ ಐದು ದಶಕಗಳ ಕಾಲದ ಅವರು ನಾಡಿಗೆ ಸಮರ್ಪಿಸಿದ ಸಮಾಜ ಸೇವೆಯನ್ನು ಈ ತುಳುನಾಡು ಯಾವತ್ತೂ ನೆನಪಿಸಿಕೊಳ್ಳುತ್ತದೆ.