ಮಂಜೇಶ್ವರ: ಸಾರ್ವಜನಿಕ ಸ್ಥಳದಲ್ಲಿ ವಸತಿ ಸಮುಚ್ಚಯದ ಕೊಳಚೆ ನೀರು: ಸ್ಥಳೀಯಾಡಳಿತದ ವಿರುದ್ಧ ಸಾರ್ವಜನಿಕರ ಆಕ್ರೋಶ

ಮಂಜೇಶ್ವರ ಸಮೀಪದ ಕುಂಜತ್ತೂರಿನ ದಾರುಸ್ಸಲಾಂ ಸಲಫಿ ಮಸೀದಿ ತಿರುವಿನಲ್ಲಿರುವ ಖಾಸಗಿ ಅಪಾರ್ಟ್ಮೆಂಟ್‍ನಿಂದ ಶೌಚಾಲಯದ ನೀರು ಸಾರ್ವಜನಿಕ ಸ್ಥಳಕ್ಕೆ ಹಾಗೂ ಸಮೀಪದ ರಸ್ತೆಗೆ ಹರಿದು ಬರುತಿದ್ದು, ಪರಿಸರವೆಲ್ಲ ದುರ್ವಾಸನೆ ಆವರಿಸಿದೆ. ಪರಿಸರವಾಸಿಗಳು ಹಾಗೂ ಈ ದಾರಿಯಿಂದ ಸಾಗುವವರು ಮೂಗು ಮುಚ್ಚಿಕೊಂಡು ಸಾಗುವ ಪರಿಸ್ಥಿತಿ ಎದುರಾಗಿದೆ.

ಈ ದಾರಿಯಾಗಿ ದಿನನಿತ್ಯ ಶಾಲೆಗೂ ಮದ್ರಸಕ್ಕೂ ನೂರಾರು ವಿದ್ಯಾರ್ಥಿಗಳು ಈ ಶೌಚಾಲಯದ ನೀರನ್ನು ದಾಟಿಕೊಂಡೇ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದ್ದರೂ ಕಣ್ಣು ಮುಚ್ಚಿ ಕುಳಿತಿರುವ ಸ್ಥಳೀಯಾಡಳಿತ ಮತ್ತು ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಖಾಸಗಿ ಅಪಾರ್ಟ್ಮೆಂಟ್ ಬಿಲ್ಡರ್ ಗಳು ಕಟ್ಟಡ ನಿರ್ಮಾಣ ವೇಳೆ ಶೌಚಾಲಯದ ಕೊಳಕು ನೀರನ್ನು ನೇರವಾಗಿ ಪರಿಸರದ ಮಳೆ ನೀರು ಹರಿದು ಹೋಗುವ ತೋಡಿಗೆ ಸಂಪರ್ಕ ಕಲ್ಪಿಸಿದ್ದಾರೆ. ಆದರೆ ಚತುಷ್ಟಥ ರಸ್ತೆ ಕಾಮಗಾರಿ ನಡೆಯುವಾಗ ಇದನ್ನು ಬಂದ್ ಮಾಡಲಾಗಿದೆ. ಆ ಕೊಳಚೆ ನೀರು ಇದೀಗ ಸಾರ್ವಜನಿಕ ಸ್ಥಳಕ್ಕೆ ಹರಿದು ಬರುತ್ತಿದೆ.

ಈ ಬಗ್ಗೆ ಸ್ಥಳೀಯರು ದೂರು ನೀಡಿದಾಗ ಸ್ಥಳವನ್ನು ಸಂದರ್ಶಿಸಿದ ಆರೋಗ್ಯಾಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ತಿಂಗಳುಗಳೇ ಕಳೆದರೂ ಯಾರೂ ಇತ್ತಕಡೆ ತಿರುಗಿಯೂ ನೋಡಲಿಲ್ಲವೆಂಬುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ. ತಕ್ಷಣ ಅಧಿಕಾರಿಗಳು ಇದಕ್ಕೊಂದು ಪರಿಹಾರವನ್ನು ಕಾಣದೇ ಇದ್ದರೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಗೆ ಮುಂದಾಗಲಿರುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

Related Posts

Leave a Reply

Your email address will not be published.