ವಿದ್ಯಾಗಿರಿಯಲ್ಲಿ ಮಿಜಾರುಗುತ್ತು ಆನಂದ ಆಳ್ವರಿಗೆ ನುಡಿನಮನ

ಸ್ವರ್ಗಸ್ಥರಾದ ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಅವರಿಗೆ ನುಡಿನಮನ' ಹಾಗೂಸಹಬೋಜನ’ವು ಆಳ್ವಾಸ್ ಕಾಲೇಜಿನ ಕೃಷಿಸಿರಿ ವೇದಿಕೆಯಲ್ಲಿ ಶ್ರದ್ಧಾ-ಭಕ್ತಿಯಿಂದ ನೆರವೇರಿತು.

ನಿಟ್ಟೆ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ವಿನಯ ಹೆಗ್ಡೆ ಅವರು ನುಡಿನಮನ ಸಲ್ಲಿಸುತ್ತಾ `ಕೌಟುಂಬಿಕ ಜವಾಬ್ದಾರಿಯಿಂದ ತನ್ನ ವಿದ್ಯಾಭ್ಯಾಸ ಮೊಟುಕಾದರೂ, ವಿದ್ಯಾಕ್ಷೇತ್ರಕ್ಕೆ ಕೊಡುಗೆ ನೀಡಿ ಹಾಗೂ ವಿಶ್ವವಿದ್ಯಾಲಯಕ್ಕೆ ಸಮಾನಾಗಿ ಶಿಕ್ಷಣ ಸಂಸ್ಥೆ ಕಟ್ಟುವಲ್ಲಿ ಮಗನಿಗೆ ನೆರಳಾಗಿ ನಿಂತ ಆನಂದ ಆಳ್ವರ ವ್ಯಕ್ತಿತ್ವವು ಆದರ್ಶ ಹಾಗೂ ಅನುಕರಣೀಯ’ ಎಂದರು.

ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಾತನಾಡಿ, `ಹಿಂದೂ ಸಂಪ್ರದಾಯದ ಗರುಡ ಪುರಾಣದಲ್ಲಿ ಶ್ರಾದ್ಧ ಹಾಗೂ ಮೋಕ್ಷಗಳ ಕುರಿತ ವಿವರಗಳಿವೆ. ಧರ್ಮ ನಿಷ್ಠ, ಧ್ಯಾನಿ, ಯೋಗಾದಿ ವಿಚಾರಗಳಿಂದ ಮೋಕ್ಷ ಪಡೆಯುತ್ತಾರೆ ಎಂಬ ಉಲ್ಲೇಖವಿದೆ. ಅಂತಹ ಬದುಕನ್ನು ಆನಂದಿಸಿದವರು ಆನಂದ ಆಳ್ವರು’ ಎಂದರು.

ಕೃಷಿಸಿರಿ ವೇದಿಕೆಯಲ್ಲಿ ರಚಿಸಲಾದ ಪುಷ್ಪಾಲಂಕೃತ ಬೃಹತ್ ಮಂಟಪದಲ್ಲಿ ಇರಿಸಲಾದ ಮಿಜಾರುಗುತ್ತು ಆನಂದ ಆಳ್ವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ವಿವಿಧ ಕ್ಷೇತ್ರಗಳ ಸಾಧಕರು, ಆನಂದ ಆಳ್ವರ ಕುಟುಂಬ ಬಳಗ ಸೇರಿದಂತೆ ಮಿಜಾರುಗುತ್ತು ಮನೆತನಕ್ಕೆ ಆತ್ಮೀಯರಾದ ಗಣ್ಯಾತಿಗಣ್ಯರು ಹಾಗೂ ವಿದ್ಯಾರ್ಥಿಗಳು, ಹಿರಿಯರೆಲ್ಲ ಗೌರವ ಸಲ್ಲಿಸಿದರು. ವೈವಿಧ್ಯಮಯ ಭಕ್ಷ್ಯಗಳ, ಅಚ್ಚುಕಟ್ಟಾಗಿ ಆಯೋಜಿಸಿದ್ದ ಅನ್ನಸಂತರ್ಪಣೆಯಲ್ಲಿ ಎಲ್ಲರೂ ಜೊತೆಯಾಗಿ ಪಾಲ್ಗೊಂಡರು. 15 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು, ಶಿಕ್ಷಕೇತರ ವರ್ಗದವರು ಸೇರಿದಂತೆ, 10 ಸಾವಿರಕ್ಕೂ ಅಧಿಕ ಹಿತೈಷಿಗಳು, ಸಾರ್ವಜನಿಕರು, ನೂರಾರು ಗಣ್ಯಾತಿಗಣ್ಯರು ಸೇರಿದ್ದರು.

ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸದಸ್ಯ ಪ್ರತಾಪ್ ಸಿಂಹ ನಾಯಕ್, ಶಾಸಕರಾದ ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ, ಯು. ರಾಜೇಶ್ ನಾಯ್ಕ್, ಕಿರಣ್ ಕೊಡ್ಗಿ, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ಬಿ.ನಾಗರಾಜ ಶೆಟ್ಟಿ, ಕೃಷ್ಣ ಜೆ. ಪಾಲೇಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ, ಪ್ರಮುಖರಾದ ಫಾ.ಗೋಮ್ಸ್, ಎ.ಜೆ. ಶೆಟ್ಟಿ, ಸದಾನಂದ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಗಣೇಶ್ ಕಾರ್ಣಿಕ್, ಶ್ರೀಪತಿ ಭಟ್ ಭಾಗವಹಿಸಿದ್ದರು.

ಆನಂದ ಆಳ್ವರ ಮಕ್ಕಳಾದ ಡಾ. ಎಂ.ಸೀತಾರಾಮ ಆಳ್ವ, ಮೀನಾಕ್ಷಿ ಆಳ್ವ, ಬಾಲಕೃಷ್ಣ ಆಳ್ವ, ಡಾ.ಎಂ.ಮೋಹನ ಆಳ್ವ, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹಾಗೂ ಮಿಜಾರುಗುತ್ತು ಹಾಗೂ ಕೊಡ್ಮಣ್‍ಗುತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.