ಬಂಟ್ವಾಳ: ಕಲ್ಲಡ್ಕದಲ್ಲಿದೆ ಅಪರೂಪದ ಅಪೂರ್ವ ಸಂಗ್ರಹದ ಮ್ಯೂಸಿಯಂ…!!!
ಬಂಟ್ವಾಳ: ರಾಜರ ಕಾಲದಿಂದ ಆರಂಭಗೊಂಡು ಹಿರಿಯರು ಬಳಸಿದಂತಹ ಅಪರೂಪದ ವಸ್ತುಗಳ ಅಪೂರ್ವ ಸಂಗ್ರಹವನ್ನು ನೋಡಬೇಕಾದರೆ ಒಮ್ಮೆ ಕಲ್ಲಡ್ಕದ ಮ್ಯೂಸಿಯಂಗೆ ಭೇಟಿ ನೀಡಬೇಕು. ಒಂದಾಣೆ, ಎರಡಾಣೆ ನಾಣ್ಯಗಳಿಗಿಂತಲೂ ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ನಾಣ್ಯ, ದೇಶ ವಿದೇಶಗಳ ಕರೆನ್ಸಿಗಳ ಅಪಾರವಾದ ಸಂಗ್ರಹ ಇಲ್ಲಿದ್ದು ಕಣ್ತುಂಬಿಕೊಳ್ಳುವ ಅವಕಾಶವನ್ನು ಈ ಮ್ಯೂಸಿಯಂ ಒದಗಿಸುತ್ತದೆ.
ಮಹಮ್ಮದ್ ಯಾಸೀರ್ ಎನ್ನುವ ಯುವ ಉದ್ಯಮಿಯ ಹವ್ಯಾಸವಾಗಿ ಆರಂಭಗೊಂಡ ಹಳೆ ಪರಕರಗಳು ಹಾಗೂ ನಾಣ್ಯಗಳ ಸಂಗ್ರಹ ಇಂದು ಕಲ್ಲಡ್ಕ ಮ್ಯೂಸಿಯಂ ಆಗಿ ಅಭಿವೃದ್ದಿಗೊಂಡು ವಿಶ್ವದ ಜನರ ಗಮನ ಇತ್ತ ಸೆಳೆಯುತ್ತಿದೆ. ಯಾಸೀರ್ ಕಲ್ಲಡ್ಕದ ಬೀಡಿ ಉದ್ಯಮಿ. 2003 ರಲ್ಲಿ ಶಾಲಾ ವಿದ್ಯಾರ್ಥಿಯಾಗಿದ್ದಾಗ ನಾಣ್ಯ ಸಂಗ್ರಹಿಸುವ ಅವರ ಹವ್ಯಾಸ ಇಂದು ಇಪ್ಪತ್ತು ವರ್ಷಗಳ ಬಳಿಕ ಮ್ಯೂಸಿಯಂ ಆಗಿ ಬದಲಾಗಿದೆ. ನೂರಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ವಸ್ತುಗಳು, ನಾಣ್ಯಗಳು, ವಿವಿಧ ದೇಶಗಳ ಕರೆನ್ಸಿಗಳು ಯಾಸೀರ್ ಅವರ ಮ್ಯೂಸಿಯಂನಲ್ಲಿ ನೋಡಬಹುದಾಗಿದ್ದು ಅದೊಂದು ಅದ್ಭುತ ಲೋಕವನ್ನೃ ಸೃಷ್ಟಿಸಿದೆ. ಅಪಾರ ವಸ್ತುಗಳ ಸಂಗ್ರಹ ಅವರಲ್ಲಿದ್ದು ಸದ್ಯಕ್ಕೆ ಮನೆಯನ್ನೇ ವಸ್ತು ಸಂಗ್ರಹದ ಕೇಂದ್ರವಾಗಿ ಮಾಡಿಕೊಂಡಿದ್ದಾರೆ.
ಕಲ್ಲಡ್ಕ ಹೆದ್ದಾರಿಯ ಪಕ್ಕವೇ ಯಾಸೀರ್ ಅವರ ಮನೆ ಇದ್ದು ರಸ್ತೆ ಅಭಿವೃದ್ದಿ ಕಾಮಗಾರಿಯಿಂದಾಗಿ ವಸ್ತುಗಳಿಗೆ ಧೂಳು ತುಂಬಿಕೊಳ್ಳದಂತೆ ಜತನದಿಂದ ಕಾಯುವ ಸವಾಲಿನ ಮಧ್ಯೆ ಮ್ಯೂಸಿಯಂಗೆ ಭೇಟಿ ನೀಡುವ ಪ್ರತಿಯೊಬ್ಬ ವೀಕ್ಷಕನಿಗೂ ಅವರ ಸಂಗ್ರಹದಲ್ಲಿರುವ ಪ್ರತಿಯೊಂದು ವಸ್ತುವಿನ ನಿಖರವಾದ ಮಾಹಿತಿಯನ್ನು ನೀಡುವ ಕೆಲಸವನ್ನು ಯಾಸೀರ್ ಮಾಡುತ್ತಿದ್ದಾರೆ. ಪತ್ನಿ, ಮಕ್ಕಳು ಅವರ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ. ಜಗತ್ತಿನಲ್ಲೇ ಯಾರಲ್ಲೂ ಸಂಗ್ರಹವಿಲ್ಲದಂತಹ ಅಪರೂಪದ ನಾಣ್ಯ ಹಾಗೂ ಕರೆನ್ಸಿ ನೋಟುಗಳ ಸಂಗ್ರಹ ಯಾಸೀರ್ ಅವರಲ್ಲಿ ಇರುವುದು ವಿಶೇಷ.
ಮಹಮ್ಮದ್ ಯಾಸೀರ್ ಅವರ ವಸ್ತುಗಳ ಸಂಗ್ರಹದಲ್ಲಿ ವೈವಿಧ್ಯತೆ ಇದೆ. ಕೇವಲ ಪುರಾತನ ವಸ್ತುಗಳು, ನಾಣ್ಯಗಳು, ನೋಟುಗಳು ಮಾತ್ರವಲ್ಲದೆ ತುಳುನಾಡಿನಲ್ಲಿ ದಿನ ಬಳಕೆಯಲ್ಲಿದ್ದ ಅಪರೂಪದ ಪಾತ್ರೆಗಳು, ಸೋಡಾ ಬಾಟಲ್‍ಗಳು, ಕ್ರಿಕೆಟ್ ಪಟುಗಳ ಹಸ್ತಾಕ್ಷರ ಇರುವ ಬ್ಯಾಟ್‍ಗಳು, ಕಬಡ್ಡಿ ಆಟಗಾರರ ಟಿಶರ್ಟ್, ಭಗವದ್ಗೀತೆ, ಕುರಾನ್, ಬೈಬಲ್‍ಗಳ ಸಂಗ್ರಹ, ಪತ್ರಿಕೆಗಳು, ಪೆನ್, ದೇವಸ್ಥಾನದ ಪ್ರಸಾದ ಚೀಲಗಳ ಸಂಗ್ರಹ, ತಾಳೆಗರಿ ಶಾಸನ ಸೇರಿದಂತೆ ವೈವಿಧ್ಯಮಯವಾದ ಸಂಗ್ರಹ ಕಲ್ಲಡ್ಕ ಮ್ಯೂಸಿಯಂನಲ್ಲಿದೆ.
ಮಹಮ್ಮದ್ ಯಾಸೀರ್ ಅವರ ಸಂಗ್ರಹಾಲಯದಲ್ಲಿರುವ ಸೋಡ ಬಾಟಲಿಗಳು ಗಮನ ಸೆಳೆಯುತ್ತದೆ. ವಿಶೇಷವೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಯರಾಗುತ್ತಿದ್ದ ಎ ಯಿಂದ ಜೆಡ್ ವರೆಗಿನ ಅಕ್ಷರಗಳಿಂದ ಆರಂಭವಾಗುವ ಹೆಸರಿನ ಕಂಪೆನಿಗಳ ಸೋಡಾ ಬಾಟಲ್‍ಗಳು ಇವರಲ್ಲಿದೆ. ಅಪರೂಪದ ವಸ್ತುಗಳು ಎಲ್ಲೇ ಇದ್ದರೂ ಅದರ ಬಗ್ಗೆ ಮಾಹಿತಿ ಸಿಕ್ಕರೆ ಅವುಗಳನ್ನು ಎಷ್ಟು ಕಷ್ಟಪಟ್ಟದಾರೂ ತಂದು ತನ್ನ ಮ್ಯೂಸಿಯಂನಲ್ಲಿ ಜೋಡಿಸಿಡುವ ಇವರ ಉತ್ಸಾಹ ಮೆಚ್ಚುವಂತದ್ದು.