ಬಂದರು ಮೂಲಕ ರಫ್ತು ಮತ್ತು ಪ್ರವಾಸೋದ್ಯಮಕ್ಕೆ ಆದ್ಯತೆ : ಪ್ರಧಾನಿ ಮೋದಿ
ಬಂದರು ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು. ಸಾಗರ ಪ್ರವಾಸೋದ್ಯಮಕ್ಕೆ ಮಂಗಳೂರು ಬಂದರು ಅತ್ಯುತ್ತಮ ಕೊಡುಗೆಯನ್ನು ನೀಡುತ್ತಿದೆ. ಕಳೆದ ವರ್ಷದಲ್ಲಿ 15 ಸಾವಿರ ವಿದೇಶಿ ಪ್ರವಾಸಿಗರು ಮಂಗಳೂರು ಬಂದರು ಮೂಲಕ ಬಂದಿರುತ್ತಾರೆ. ಸಾಗರ ಪ್ರವಾಸೋದ್ಯಮದ ಪ್ರಯೋಜನ ಹಾಗೂ ಲಾಭವನ್ನು ಟ್ಯಾಕ್ಸಿ, ಆಟೋ ಚಾಲಕರು ಸಣ್ಣ ವ್ಯಾಪಾರಿಗಳು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದರು.
ವಿಸ್ತಾರವಾದ ಕರಾವಳಿಯನ್ನು ಹೊಂದಿರುವ ನಮ್ಮ ದೇಶದಲ್ಲಿ ಹಡಗು ಪ್ರವಾಸಿ ಸಾರಿಗೆಗೆ ವಿಫುಲವಾದ ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಮಂಗಳೂರು ಸೇರಿದಂತೆ ದೇಶದ ಎಲ್ಲಾ ಬಂದರುಗಳನ್ನು ಜೋಡಿಸುವ ಕಾರ್ಯ ನಡೆಯಲಿದೆ ಎಂದು ಮೋದಿ ಹೇಳಿದರು.ಕರ್ನಾಟಕಕ್ಕೆ ವಿಸ್ತಾರವಾದ ಕರಾವಳಿ ಮತ್ತು ಪಶ್ಚಮ ಘಟ್ಟದ ಪಾಕೃತಿಕ ಕೊಡುಗೆಗಳಿರುವುದರಿಂದ ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಎಲ್ಲಾ ಅವಕಾಶಗಳು ಇವೆ. ಇದನ್ನು ಸರ್ಕಾರ ಸದ್ಬಳಕೆ ಮಾಡಿಕೊಳ್ಳಲಿದೆ ಎಂದು ಹೇಳಿದರು.
ದೇಶದ ಆಮದು ವಿದೇಶಿ ಉತ್ಪನ್ನಗಳ ಆಮದಿಗಿಂತಲೂ ಸ್ವದೇಶಿ ಉತ್ಪನ್ನಗಳ ರಪ್ತಿನ ಪ್ರಮಾಣ ವೃದ್ಧಿಯಾಗಿದೆ. ಜಿಡಿಪಿ ಏರಿಕೆಯಾಗುತ್ತಿದೆ ಒಟ್ಟಾಗಿ ಆರ್ಥಿಕತೆ ಸದೃಢವಾಗುತ್ತಿದೆ. ಇದೆಲ್ಲದರ ಪ್ರಯೋಜವು ಇದೀಗ ಸಾಮಾನ್ಯ ವ್ಯಾಪಾರಿಗಳಿಗೆ, ಉದ್ದಿಮೆದಾರರಿಗೆ, ಸಣ್ಣ ರೈತರಿಗೆ, ಮೀನುಗಾರರಿಗೆ, ಸಿಗುವಂತಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಹೆದ್ದಾರಿ ಅಭಿವೃದ್ಧಿಗಾಗಿ 70 ಸಾವಿರ ಕೋಟಿಗಳನ್ನು ವಿನಿಯೋಗಿಸಲಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರ ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿಯನ್ನು ಸಾಧಿಸುತ್ತಿದ್ದು ಕಳೆದ 8 ವರ್ಷಗಳಲ್ಲಿ ಅಪಾರದವಾದ ಸಾಧನೆಯನ್ನು ಮಾಡಿದೆ. ದೇಶದಲ್ಲಿ 3 ಕೋಟಿ ಬಡವರಿಗೆ ಮನೆ ನಿರ್ಮಿಸಿಕೊಟ್ಟಿದೆ. ಕರ್ನಾಟಕದಲ್ಲಿ 8 ಲಕ್ಷ ಬಡವರಿಗೆ ಮನೆ ನಿರ್ಮಿಸಿಕೊಡಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ದೇಶದ 11 ಕೋಟಿ ರೈತರಿಗೆ ಪ್ರಯೋಜನ ಲಭಿಸಿದೆ. ಆರ್ಥಿಕತೆಯೂ ಈಗ ಸ್ವಚ್ಛ ಆರ್ಥಿಕತೆಯಾಗಿ ಪರಿವರ್ತನೆಯಾಗಿದೆ, ಡಿಜಿಟಲ್ ಪೇಮೆಂಟ್ ಜನವ್ಯಾಪಿಯಾಗಿದೆ. ಎಲ್ಲಾ ಗ್ರಾಮಗಳಿಗೂ ಇಂಟರ್‍ನೆಟ್ ಸೌಲಭ್ಯ ಕಲ್ಪಿಸಲಾಗಿದೆ. 5 ಜಿ ಸೌಲಭ್ಯವು ಜನತೆಯ ಮನೆ ಬಾಗಿಲಿಗೆ ಬರುತ್ತಿದೆ.
ಫಲಾನುಭವಿ ರೈತರಿಗೆ ಹಾಗೂ ಮೀನುಗಾರರಿಗೆ ಪ್ರಧಾನಿ ಮೋದಿ ಅವರು ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಮತ್ಸ್ಯಾ ಸಂಪದನಾ ಯೋಜನೆಯಲ್ಲಿ ಆಳ ಸಮುದ್ರ ಮೀನುಗಾರಿಕೆಯ ಬೋಟ್‍ನ ಸೌಲಭ್ಯವನ್ನು ವಿತರಿಸಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕದ ವಿವಿಧ ಪ್ರಗತಿಯಲ್ಲಿರುವ ಯೋಜನೆಗಳ ಬಗ್ಗೆ ವಿವರಿಸಿದರು.
ಕೇಂದ್ರ ಸಚಿವ ಸರ್ಬಾನಂದ್ ಸೊನೊವಾಲ್ ಅವರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.ಇಂಧನ ಉಳಿತಾಯ, ಹಸಿರು ಪರಿಸರಸಯ್ಯ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ವಿಶೇಷ ಗಮನ ನೀಡಲಾಗುತ್ತಿದೆ. ಜನರ ಮನೆ ಬಾಗಿಲಿಗೆ ಎಲ್‍ಪಿಜಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ತುಳುನಾಡಿನ ರಾಣಿ ಅಬ್ಬಕ್ಕ ಹಾಗೂ ಕರ್ನಾಟಕದ ಕಿತ್ತೂರು ರಾಣಿ ಚೆನ್ನಮ್ಮನ ಕೊಡುಗೆಯನ್ನು ನಾವು ಸ್ಮರಿಸೋಣ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಹರ್ದಿಪ್ ಸಿಂಗ್ ಪುರಿ, ಶ್ರೀಪಾದ್ ಯಶೋನಾಯಕ್, ಸಂತುನು ಠಾಕೂರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರ, ಗೋವಿಂದ ಕಾರಜೋಳ, ಶಾಸಕರು ಹಾಗೂ ಅಧಿಕಾರಿಗಳು ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.