ಮೂಡುಬಿದಿರೆ: ಬಲಿಷ್ಠ ಭಾರತ ನಿರ್ಮಾಣಕ್ಕೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ : ಸಭಾಪತಿ ಯು.ಟಿ.ಖಾದರ್

ಮೂಡುಬಿದಿರೆ: ಬಲಿಷ್ಠ ಭಾರತ ನಿರ್ಮಾಣವಾಗಬೇಕಾದರೆ ತರಗತಿಯಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಸಿಗಬೇಕು. ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಓರ್ವ ಉತ್ತಮವಾದ ಡಾಕ್ಟರ್, ಎಂಜಿನಿಯರ್, ಸಿ.ಎ ಹಾಗೂ ವಕೀಲರನ್ನು ಮಾತ್ರ ತಯಾರು ಮಾಡುವುದಲ್ಲ ಬದಲಾಗಿ ಎಲ್ಲಾ ಕ್ಷೇತ್ರಗಳನ್ನು ನಿಭಾಯಿಸಬಲ್ಲ ಓರ್ವ ಉತ್ತಮವಾದ ರಾಜಕರಣಿಯನ್ನು ನೀಡುವ ಶಕ್ತಿ ಕೇಂದ್ರಗಳಾಗಬೇಕು ಎಂದು ರಾಜ್ಯ ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ಹೇಳಿದರು.


ಅವರು ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಎರಡು ದಿನ ನಡೆಯುವ ಕರ್ನಾಟಕ ಅನುದಾನ ರಹಿತ ಪಿಯು ಆಡಳಿತ ಮಂಡಳಿ ಅಸೋಸಿಯೇಶನ್ ನ ರಾಜ್ಯ ಮಟ್ಟದ ಮುಕ್ತ ಸಮಾವೇಶವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.


ಪಿಯುಸಿವರೆಗಿನ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು. ಇದು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ಸರಕಾರದ ಜತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಕಾರವು ಅಗತ್ಯ. ಆರೋಗ್ಯ ಕ್ಷೇತ್ರದಂತೆ ಶಿಕ್ಷಣ ಕ್ಷೇತ್ರದಲ್ಲೂ ಸರಕಾರದ ಜತೆಗೆ ಖಾಸಗಿ ಸಹಭಾಗಿತ್ವ ಇದ್ದರೆ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆ ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರು, ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಶೀಘ್ರದಲ್ಲೆ ಇನ್ನೊಂದು ಸಭೆ ನಡೆಸುವುದಾಗಿ ತಿಳಿಸಿದ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಊರಿನ ಸರಕಾರಿ ಶಾಲೆಯನ್ನು ಬೆಳೆಸುವಲ್ಲಿ ಸಹಕಾರ ನೀಡಬೇಕು. ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಪಾಲುಗಾರಿಕೆ ದೊಡ್ಡದಿದೆ. ಎಲ್ಲವನ್ನು ಸರಕಾರ ಮಾಡುವುದು ಅಸಾಧ್ಯ ಎಂದರು.

ಕರ್ನಾಟಕ ಅನುದಾನ ರಹಿತ ಪಿಯು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ. ಮೋಹನ ಅಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದ ಅಭಿವೃದ್ಧಿಯಲ್ಲಿ ನಮ್ಮ ಪಾಲು ದೊಡ್ಡದಿದೆ. ಸರಕಾರದ ಬಗ್ಗೆ ನಮಗೆ ಗೌರವ ಇದೆ. ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿ ಸರಕಾರ ನಿಯಮಾವಳಿಗಳನ್ನು ರೂಪಿಸುವಾಗ ಅಥವಾ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಮ್ಮ ಬಗ್ಗೆ ಅನಪೇಕ್ಷಿತ ಪದ ಬಳಕೆ ಒಪ್ಪುವಂತದ್ದಲ್ಲ ಎಂದರು. ಇದುವರೆಗೆ ಜಿಲ್ಲಾ ಮಟ್ಟಕ್ಕೆ ಸೀಮಿತವಾಗಿದ್ದ ಕರ್ನಾಟಕ ಅನುದಾನ ರಹಿತ ಪಿಯು ಆಡಳಿತ ಮಂಡಳಿಯ ಅಸೋಸಿಯೇಶನ್ ರಾಜ್ಯಮಟ್ಟಕ್ಕೆ ವಿಸ್ತರಿಸಲಾಗಿದ್ದು ಪ್ರತೀ ಜಿಲ್ಲೆಯಲ್ಲೂ ಈ ಸಂಘಟನೆ ಕಾರ್ಯನಿರ್ವಹಿಸಲಿದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.


ಎಂಎಲ್‌ಸಿ ಭೋಜೆಗೌಡ, ಮಾಜಿ ಸಚಿವ ಅಭಯಚಂದ್ರ, ಮಾಜಿ ಎಂಎಲ್‌ಸಿ ಅರುಣ್ ಶಾಹಪುರೆ, ಗೌರವ ಅಧ್ಯಕ್ಷ ಎಂ.ಬಿ ಪುರಾಣಿಕ್, ಕಾರ್ಯದರ್ಶಿ ನರೇಂದ್ರ ನಾಯಕ್, ಖಾದರ್ ಶಹೀನ್, ಜಯಪ್ರಕಾಶ್ ಗೌಡ, ಕೆ.ಸಿ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.

Related Posts

Leave a Reply

Your email address will not be published.