ಮೂಡುಬಿದಿರೆ: ಭೂಮಿ ಹಕ್ಕಿಗೆ ಒತ್ತಾಯಿಸಿ ನಡೆಯುತ್ತಿದ್ದ ಧರಣಿ ಸತ್ಯಾಗ್ರಹ ವಾಪಾಸ್
ಮೂಡುಬಿದಿರೆ: ಭೂಮಿ ಹಕ್ಕಿಗೆ ಒತ್ತಾಯಿಸಿ ಭೂಮಿ ಹೋರಾಟ ಸಮಿತಿಯು ಆಡಳಿತ ಸೌಧದ ಮುಂಭಾಗ ಸೋಮವಾರ ಕೈಗೊಂಡಿದ್ದ ಅಹೋರಾತ್ರಿ ಧರಣಿಯು ಮೂಡುಬಿದಿರೆ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರ ಮನವೊಲಿಕೆಯಿಂದಾಗಿ ವಾಪಾಸ್ ಪಡೆದುಕೊಂಡಿದೆ.
ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಾದವ ಶೆಟ್ಟಿ ಅವರು ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿ, ಮೂಡುಬಿದಿರೆ ತಾಲೂಕು ವ್ಯಾಪ್ತಿಯ ಇರುವೈಲು, ತೋಡಾರು, ಪುತ್ತಿಗೆ, ಬೆಳುವಾಯಿ, ಶಿರ್ತಾಡಿ, ಪಾಲಡ್ಕ ಇನ್ನಿತರ ಪ್ರದೇಶಗಳಲ್ಲಿ ಸರಕಾರಿ ಸ್ಥಳದಲ್ಲಿ ಮನೆಕಟ್ಟಿಕೊಂಡು ವಾಸವಿದ್ದು ಸಣ್ಣಪುಟ್ಟ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲೂಕಿನಲ್ಲಿ 94 ಸಿ, 94 ಸಿಸಿ, ಫಾರಂ ನಂ 50, 53, 57 ರಲ್ಲಿ ಸಲ್ಲಿಸಿದ ಅರ್ಜಿಗಳು ಡೀಮ್ಡ್ ಫಾರೆಸ್ಟ್ ಎಂದು ತಿರಸ್ಕರಿಸಿದ್ದು ಅರ್ಜಿಗಳಿಗೆ ತಾರ್ಕಿಕ ಅಂತ್ಯ ನೀಡಬೇಕು ಧರಣಿಯಲ್ಲಿ ಆಗ್ರಹಿಸಿದರು.
ಧರಣಿ ಸತ್ತಾಗ್ರಹ ನಡೆಯುತ್ತಿದ್ದ ಸ್ಥಳಕ್ಕೆ ಸಂಜೆ ವೇಳೆಗೆ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಅವರು ಭೇಟಿ ನೀಡಿ ನಲವತ್ತೈದು ದಿನಗಳ ಕಾಲಾವಕಾಶವನ್ನು ನೀಡಿದರೆ ಹಂತ ಹಂತವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆಯನ್ನು ನೀಡಿದಾಗ ಸಮಿತಿಯು ಧರಣಿಯನ್ನು ವಾಪಾಸ್ ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಡಿವೈಎಫ್‍ಐನ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಭೂಮಿ ಹೋರಾಟ ಸಮಿತಿಯ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಕಾರ್ಯದರ್ಶಿ ಆನಂದ ಪೂಜಾರಿ, ಉಪಾಧ್ಯಕ್ಷ ಶೀನ ನಾಯ್ಕ್, ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಸದಾಶಿವ ದಾಸ್, ಹೊಸಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ಗ್ರಾಮಸ್ಥರು ಧರಣಿಯಲ್ಲಿ ಭಾಗವಹಿಸಿದ್ದರು.