ಮೂಡುಬಿದಿರೆ ಬಸದಿಗಳಲ್ಲಿ ತೆನೆ ಹಬ್ಬ

ಮೂಡುಬಿದಿರೆ:ವಿಜಯದಶಮಿ ಪ್ರಯುಕ್ತ ಮೂಡುಬಿದಿರೆ ಶ್ರೀ ಜೈನಮಠ
ಹಾಗೂ ಬಸದಿಗಳಲ್ಲಿ ತೆನೆಹಬ್ಬ, ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಅವರ ಮಾರ್ಗದರ್ಶನದಲ್ಲಿ ನಡೆಯಿತು. ದೇಶದ ಸಮಸ್ತರಿಗೆ ಒಳಿತಾಗಲಿ. ಕಾಲ ಕಾಲಕ್ಕೆ ಮಳೆ ಬಂದು ಪ್ರಕೃತಿ ವಿಕೋಪ ವಾಗದೆ, ಲೋಕದಲ್ಲಿ ಶಾಂತಿ, ಸುಭಿಕ್ಷೆ ಉಂಟಾಗಲಿ ಎಂದು ಭಟ್ಟಾರಕ ಸ್ವಾಮೀಜಿ ನುಡಿದರು.

ಸಾವಿರಕಂಬ ಬಸದಿ ಹಾಗೂ ಗುರು ಬಸದಿಯಿಂದ ಜೈನಪೇಟೆಯ ಮೂಲಕ ಅಮ್ಮನವರ ಬಸದಿ ಬಳಿ ಕದಿರು ಕಟ್ಟೆಯಲ್ಲಿ ಬೆಟ್ಕೇರಿ ಗದ್ದೆಯಿಂದ ತಂದ ತೆನೆ ಇಟ್ಟು ಅರಹಂತಾದಿ ನವ ದೇವತಾ ಪೂಜೆ ನಡೆಯಿತು. ಮೂಲ ಸ್ವಾಮಿ ಪಾರ್ಶ್ವನಾಥ ಸ್ವಾಮಿ, ಚಂದ್ರನಾಥ ಸ್ವಾಮಿ ಪೂಜೆ, ಭೂಮಿ ದೇವಿ ಪೂಜೆ, ಧಾನ್ಯ ಲಕ್ಷಿ ಪೂಜೆ ನೆರವೇರಿಸಲಾಯಿತು.

ಜೈನಮಠದಲ್ಲಿ ಗುರು ಬಸದಿಯ ಅರ್ಚಕ ವಿರಾಜ್ ಇಂದ್ರ ಅವರು ಪಾರ್ಶ್ವನಾಥ ಸ್ವಾಮಿ, ನವ ದೇವತೆ, ಭೂಮಿ ಪೂಜೆ, ಪಂಚ ಕುಮಾರ ಪೂಜೆ, ಕೂಷ್ಮಾಂಡಿನಿ ದೇವಿ ಪೂಜೆ ನರೆವೇರಿಸಿದರು. ಗುರು ಬಸದಿ ಯಲ್ಲಿ ಅಭಿಷೇಕ ಪೂಜೆ ನೆರವೇರಿಸಲಾಯಿತು. ಸಾವಿರ ಕಂಬ ಬಸದಿಯಲ್ಲಿ ಕ್ಷಿರಾಬೀಷೇಕ ನೆರವೇರಿತು.ಬಸದಿ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಆನಡ್ಕ, ಆದರ್ಶ್, ಪುರೋಹಿತ ಪಾರ್ಶ್ವನಾಥ ಇಂದ್ರ, ವಿರಾಜ್, ಸುವಿದಿ, ಧರಣೇಂದ್ರ ಹಾಗೂ ಬಸದಿಗಳ ಪುರೋಹಿತರು, ಶ್ರಾವಕರು ಭಾಗವಹಿಸಿದರು.

Related Posts

Leave a Reply

Your email address will not be published.