ಪ್ರತಿ ಮನೆಯೂ ತುಳು ಅಧ್ಯಯನ ಕೇಂದ್ರವಾದರೆ ಮಾತ್ರ ಭಾಷೆಯ ಉಳಿವು ಸಾಧ್ಯʼ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ

ಮಂಗಳೂರು: ಪ್ರತಿ ಮನೆಯೂ ತುಳು ಅಧ್ಯಯನ ಕೇಂದ್ರಗಳಾದರೆ ಮಾತ್ರ ತುಳುವಿನ ರಕ್ಷಣೆ ಸಾಧ್ಯ. ತುಳು ಎಲ್ಲಾ ಜಾತಿ, ಧರ್ಮಗಳನ್ನು ಒಗ್ಗೂಡಿಸುವ ಒಂದು ವ್ಯಾವಹಾರಿಕ ಭಾಷೆ. ಅದಕ್ಕೆ ಯಾವುದೇ ಕಳಂಕ ಹಚ್ಚುವುದು ಬೇಡ, ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.ಅವರು ಶುಕ್ರವಾರ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಹಂಪನಕಟ್ಟೆ, ಇಲ್ಲಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಹಾಗೂ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ಥಾಪನೆಯಾಗಿರುವ ‘ಶ್ರೀ ಸಂಸ್ಥಾನಮ್ ಒಡಿಯೂರು ತುಳು ಅಧ್ಯಯನ ಕೇಂದ್ರ’ ಉದ್ಘಾಟಿಸಿ ಮಾತನಾಡಿದರು. ತುಳು ಬಾಷೆಯ ಉಳಿಕೆಯ ಬಗ್ಗೆ ನಮ್ಮಲ್ಲಿ ನಂಬಿಕೆಯಿರಲಿ. ಮನೆಯಲ್ಲಿ ಮಕ್ಕಳ ಜೊತೆ ತುಳುವಿನಲ್ಲೇ ಮಾತಾಡಿ ಎಂದ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ರಾಜ್ಯಸಭೆಗೆ ನಾಮನಿರ್ದೇಶನವಾಗಿರುವುದು ತುಳುವರಿಗೆ ಶಕ್ತಿ ತುಂಬಿದೆ, ಎಂದು ಅಭಿಪ್ರಾಯಪಟ್ಟರು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲು ಅವರು, ಸರ್ಕಾರ ಮಾಡಬೇಕಾದ ಕೆಲಸಗಳನ್ನು ಒಡಿಯೂರು ಮಠ ಮತ್ತು ಧರ್ಮಸ್ಥಳ ಕ್ಷೇತ್ರಗಳು ಮಾಡುತ್ತಿವೆ, ಎಂದರು. ತುಳು ಎಂಬುದು ಜಾತ್ಯಾತೀತ ಕಲ್ಪನೆ. ತುಳು ಭಾಷೆ ಮತ್ತು ಸಂಸ್ಕೃತಿ ರಕ್ಷಣೆಗೆ ಯಾವುದೇ ಕಾನೂನಿನ ಅಡ್ಡಿಯಾಗದಂತೆ ನಾನು ನೋಡಿಕೊಳ್ಳುತ್ತೇನೆ. ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವುದು ನಮ್ಮ ಕರ್ತವ್ಯ, ಮತ್ತದನ್ನು ನಾವು ಮಾಡುತ್ತೇವೆ, ಎಂದರು.

ಮಂಗಳೂರು ವಿ.ವಿ. ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ತುಳು ಮಾತನಾಡಿದರೆ ಮಾತ್ರ ತುಳು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬಹುದು. ತುಳು ಭಾಷೆ ಸಂಸ್ಕೃತಿ ರಕ್ಷಣೆಯಂತಹ ಒಳ್ಳೆಯ ಕೆಲಸ ಮಾಡುವಾಗ ಯಾರಿಗೂ ಹೆದರಬೇಕಾಗಿಲ್ಲ, ಎಂದರಲ್ಲದೆ, ತುಳು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಮಾಧವ ಎಂ ಕೆ ಅವರ ಪ್ರಯತ್ನವನ್ನು ಶ್ಲಾಘಿಸಿದರು. ಈ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಡಾ. ಮಾಧವ ಎಂ.ಕೆ, ಕೊವಿಡ್ ಸಾಂಕ್ರಾಮಿಕದ ಸಮಯದಲ್ಲಿ ಆರಂಭಿಸಿದ ತುಳು ವೆಬಿನಾರ್ ಎರಡೂವರೆ ವರ್ಷದಲ್ಲಿ 100 ವಾರ ಪೂರೈಸಿದೆ. ಇದೇ ಭಾನುವಾರ ಧರ್ಮಾಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮುಂದಾಳತ್ವದಲ್ಲಿ 100 ನೇ ಕಾರ್ಯಕ್ರಮ ನಡೆಯಲಿದೆ, ಎಂದರು. ಇದೇ ವೇಳೆ ಅವರು ತುಳುವಿನ ರಕ್ಷಣೆಯಲ್ಲಿ ಎದುರಾಗುವ ಸವಾಲುಗಳನ್ನು ವಿವರಿಸಿದರು.

ಇದೇ ವೇಳೆ ಶ್ರೀ ಗುರುದೇವಾನಂದ ಸ್ವಾಮೀಜಿ ತುಳುವಿಗೆ ಭಾಷಾಂತರಿಸಿದ ʼಹನುಮಾನ್ ಚಾಲೀಸಾʼದ ಸಿಡಿಯನ್ನು ಬಿಡುಗಡೆ ಮಾಡಲಾಯಿತು. ʼಮಂದಾರʼ (ಕೇಶವ ಭಟ್ ಅವರ ಮಂದಾರ ರಾಮಾಯಣ ಕುರಿತ ಲೇಖನಗಳ) ಹಾಗೂ ʼಬಂಗಾರ್ದ ಕೊರಲ್ʼ (ತುಳು ವೆಬಿನಾರ್ ಸರಣಿಯ ಆಯ್ದ ಭಾಗಗಳು) ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ತುಳು ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ‍್ಯಾಂಕ್ ಪಡೆದ ವಿಜಯಲಕ್ಷ್ಮಿ ಪ್ರಸಾದ್ ರೈ ಮತ್ತು ಮಣಿ ರೈ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಮಣಿ ರೈ ಅವರ ಮಗಳು ಮಹಿ ರೈ ಸನ್ಮಾನ ಸ್ವೀಕರಿಸಿದರು. ಎಂಜಿನಿಯರ್ ಯತೀಶ್ ಕುಮಾರ್ ಅವರನ್ನೂ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ ಸಿ ಭಂಡಾರಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಮೋಹನ ಪಡಿವಾಳ್, ರವಿಚಂದ್ರ ಪಿ ಎಂ, ಕೆ ರಮೇಶ್, ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಮಂಗಳೂರು ವಿವಿಯ ತುಳು ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯೆ ರಾಜಶ್ರೀ ಎಸ್ ಹೆಗ್ಡೆ, ಒಡಿಯೂರು ಶ್ರೀ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ ಮೊದಲಾದವರು ಉಪಸ್ಥಿತರಿದ್ದರು. ವಿವಿ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಅತಿಥಿಗಳನ್ನು ಸ್ವಾಗತಿಸಿದರು. ವಿಜಯಲಕ್ಷ್ಮೀ ಕಟೀಲ್ ಕಾರ್ಯಕ್ರಮ ನಿರೂಪಿಸಿದರು. ಒಡಿಯೂರು ತುಳುಕೂಟದ ಮುಖ್ಯಸ್ಥ ಯಶವಂತ ವಿಟ್ಲ ಧನ್ಯವಾದ ಸಮರ್ಪಿಸಿದರು.

Related Posts

Leave a Reply

Your email address will not be published.