ಶತಮಾನದ ಬಳಿಕ ಪ್ಯಾರಿಸ್ ಒಲಿಂಪಿಕ್ಸ್ || Olympic Games Paris 2024
ಒಲಿಂಪಿಕ್ಸ್ ಬೆಳಕಿನ ಪಂಜು ಗ್ರೀಸಿನ ಅಥೆನ್ಸ್‍ನಿಂz 12 ದಿನಗಳ ಸಾಗರ ಪಯಣದ ಬಳಿಕ ಫ್ರಾನ್ಸಿನ ಮಾರ್ಸೆಲ್ ಬಂದರು ತಲುಪಿದೆ. ಸಾವಿರ ದೋಣಿಗಳು ಕವಾಯತಿನ ನಡುವೆ ಒಲಿಂಪಿಕ್ಸ್ ದೊಂದಿ ತಂದ 1896ರ ಬೆಲೆಮ್ ವ್ಯಾಪಾರಿ ಹಡಗನ್ನು ಮಾರ್ಸೆಲ್‍ನಲ್ಲಿ ಸ್ವಾಗತಿಸಲಾಯಿತು. ಕಳೆದ ಮೂರು ಒಲಿಂಪಿಕ್ಸ್‍ಗಳಲ್ಲಿ ಮಾರ್ಸೆಲ್‍ನವರೇ ಇದ್ದ ಫ್ರಾನ್ಸಿನ ಹುಟ್ಟು ಹಾಕು ತಂಡವು ಚಿನ್ನ ಗೆದ್ದಿತ್ತು. ಮಾಜೀ ಒಲಿಂಪಿಕ್ಸ್ ಆಟಗಾರ ಟೋನಿ ವಿಸ್ಟಾಂ ಸಕಲ ಸೇನಾ, ಪೋಲೀಸು, ನಾಗರಿಕ ಮರ್ಯಾದೆಯೊಡನೆ ಒಲಿಂಪಿಕ್ಸ್ ಜ್ಯೋತಿ ಸ್ವೀಕರಿಸಿದರು.
2024ರ ಪ್ಯಾರಿಸ್ ಒಲಿಂಪಿಕ್ಸ್ ಫ್ರಾನ್ಸಿನಲ್ಲಿ ಜುಲಾಯಿ 26ರ ಶುಕ್ರವಾರದಂದು ಆರಂಭವಾಗುತ್ತದೆ. ಅಲ್ಲಿಯವರೆಗೆ ಒಲಿಂಪಿಕ್ಸ್ ಪಂಜು ಜಗತ್ತನ್ನು ಓಟಗಾರರ ಮೂಲಕ ಸುತ್ತು ಹೊಡೆಯಲಿದೆ. ಮಾರ್ಸೆಲ್‍ಗೆ ಬಂದ ದಿನವೇ ಅದರ ಓಟವು ಜಗಮುಖಿಯಾಗಿ ಆರಂಭವಾಯಿತು. ಮತ್ತೆ ಅದು ಫ್ರಾನ್ಸಿಗೆ ವಾಪಾಸು ಬಂದು ಪ್ಯಾರಿಸ್ಸಿನ ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ಉರಿಯುವುದು ಒಲಿಂಪಿಕ್ಸ್ ಆರಂಭದ ದಿನ. ಫ್ರಾನ್ಸಿಗೂ ಒಲಿಂಪಿಕ್ಸ್‍ಗೂ ಅವಿನಾಭಾವ ಸಂಬಂಧವಿದೆ. ಆಧುನಿಕ ಒಲಿಂಪಿಕ್ಸ್ ಆರಂಭದ ಹೆಜ್ಜೆ ಫ್ರಾನ್ಸಿನಲ್ಲಿ, ಪಿಯರ್ ಡೆ ಕೊಬರ್ಟಿನ್ ಆಧುನಿಕ ಒಲಿಂಪಿಕ್ಸ್ ಮತ್ತೆ ಬೆಳಗುವಂತೆ ಮಾಡಿದ ಪ್ರಮುಖರು.
ಗೇಮ್ಸ್ ಆಫ್ ಒಲಿಂಪಿಯಾಡ್ ಇಲ್ಲವೇ ಸಮ್ಮರ್ ಒಲಿಂಪಿಕ್ಸ್ ಎಂಬುದು ನಾಲ್ಕು ವರುಷಕ್ಕೊಮ್ಮೆ ನಡೆಯುವ ಜಗತ್ತಿನ ಅತಿ ದೊಡ್ಡದಾದ ಈ ಕ್ರೀಡಾಕೂಟವನ್ನು ಕರೆಯುವ ಬಗೆಯಾಗಿದೆ. 1896ರಲ್ಲಿ ಆಧುನಿಕ ಒಲಿಂಪಿಕ್ಸ್ ಕ್ರೀಡಾಕೂಟವು ಮತ್ತೆ ಅದರ ಮೂಲ ನೆಲೆಯಾದ ಗ್ರೀಸಿನ ಅಥೆನ್ಸ್‍ನಲ್ಲಿ ಆರಂಭವಾಯಿತು. ಗ್ರೀಸಿನ ಒಲಿಂಪಿಯಾದಲ್ಲಿ ಕ್ರಿಸ್ತ ಪೂರ್ವ 776ರಲ್ಲಿ ಆರಂಭವಾದ ಒಲಿಂಪಿಕ್ಸ್ ಕ್ರೀಡಾಕೂಟವು ಕ್ರಿಸ್ತ ಶಕ 393ರವರೆಗೆ ನಡೆದಿದೆ. ಅನಂತರ 1503 ವರುಷಗಳ ಬಳಿಕ 1896ರಲ್ಲಿ ಅಥೆನ್ಸಿನಲ್ಲಿ ಮತ್ತೆ ಆರಂಭವಾಯಿತು.
ಫ್ರಾನ್ಸಿನ ಪಿಯರ್ ಡೆ ಕೊಬರ್ಟಿನ್ 1894ರಲ್ಲಿ ಒಂದು ಕಾಲದ ಕ್ರೀಡಾ ಇತಿಹಾಸವಾದ ಒಲಿಂಪಿಕ್ಸ್ ಮತ್ತೆ ಆರಂಭಿಸಲು ಯೋಜಿಸಿದರು. ಸುಮ್ಮನೆ ಕೂರದೆ ಹಲವರನ್ನು ಸಂಪರ್ಕಿಸಿದರು. ಕೊನೆಗೂ 1896ರಲ್ಲಿ ಆಧುನಿಕ ಒಲಿಂಪಿಕ್ಸ್ ಮೂಲ ನೆಲೆ ಗ್ರೀಸಿನ ರಾಜಧಾನಿಯಲ್ಲೇ ನಡೆಯುವಂತೆ ಮಾಡಿದರು. ಅದರಲ್ಲಿ ಹಲವರ ಪ್ರಯತ್ನವಿದೆ. ಗ್ರೀಸ್ ಆಗ ಟರ್ಕಿ ಎಂದರೆ ಒಟ್ಟೋಮನ್ ಸಾಮ್ರಾಜ್ಯದ ಭಾಗವಾಗಿತ್ತು. ಹಾಗಾಗಿ ಸಾಮ್ರಾಟರಿಂದ ಸಾಮಾನ್ಯನವರೆಗೆ ಸಾವಿರಾರು ಜನರನ್ನು ಸಂಪರ್ಕಿಸಿ ಆಧುನಿಕ ಒಲಿಂಪಿಕ್ಸ್‍ಗೆ ನಾಂದಿ ಹಾಡಲಾಯಿತು. ಅದು ಇಂದು ವಿಶ್ವದ ಅತಿ ದೊಡ್ಡ ಆಟೋಟ ಸ್ಪರ್ಧೆಯ ಅಂಗಣ ಎನಿಸಿದೆ.
ಪುರಾತನ ಕಾಲದಲ್ಲಿ 293 ಒಲಿಂಪಿಕ್ಸ್‍ಗಳು ಸತತವಾಗಿ ನಡೆದವು ಎಂದು ದಾಖಲೆ ಹೇಳುತ್ತದೆ. ಅದು ಒಲಿಂಪಿಯಾದಲ್ಲಿ ನಡೆಯುತ್ತಿದ್ದುದರಿಂದ ಒಲಿಂಪಿಕ್ಸ್ ಎಂಬ ಹೆಸರಿನಿಂದ ಖ್ಯಾತವಾಗಿದೆ. ಪುರಾತನ ಒಲಿಂಪಿಕ್ಸ್‍ನಲ್ಲಿ ನಡೆದ ಅತಿ ಮುಖ್ಯ ಕ್ರೀಡೆ ಕುಸ್ತಿ. ತೆಂಕಣ ಯೂರೋಪಿನ ಗವಿಗಳಲ್ಲಿ ಕಂಡುಬಂದ ಚಿತ್ರಗಳ ಮೂಲಕ ಕುಸ್ತಿ ಕ್ರೀಡೆಯು 15ರಿಂದ 20,000 ವರುಷಗಳಷ್ಟು ಹಳೆಯ ಕ್ರೀಡೆ ಎಂದು ತಿಳಿಯಲಾಗಿದೆ. ಪುರಾತನ ಒಲಿಂಪಿಕ್ಸನ್ನು ಆರಂಭಿಸಿದವನು ಗ್ರೀಸ್ ದೊರೆ ಹೆರಾಕ್ಲಸ್. ಪುರಾತನ ಗ್ರೀಸಿನ ಪೆಲೋಪೆನ್ನಿಸ್‍ನಲ್ಲಿ 3,000 ವರುಷಗಳ ಹಿಂದೆಯೇ ನಾಲ್ಕು ವರುಷಕ್ಕೊಮ್ಮೆ ನಡೆಯುವ ಕ್ರೀಡಾಕೂಟವನ್ನು ಆರಂಭಿಸಲಾಗಿತ್ತು. ಅದರ ಇತಿಹಾಸ ಅಸ್ಪಷ್ಟವಿದೆ.
ಆ ಕಾಲದಲ್ಲಿ ಗ್ರೀಕ್ ದೇವ ಜಿವುಸ್ ಪ್ರೀತ್ಯರ್ಥ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಿಸಲಾಯಿತು ಎಂದು ಹೇಳಲಾಗಿದೆ. ಪುರಾತನ ಒಲಿಂಪಿಕ್ಸ್‍ನಲ್ಲಿ ಓಟ, ಕುಸ್ತಿ ಮೊದಲಾದ ನೇರ ಹೋರಾಟದ ಆಟೋಟಗಳು ಮಾತ್ರ ಇದ್ದವು. ತಂಡಗಳ ಆಟೋಟ ಯಾವುದೂ ಇರಲಿಲ್ಲ. ಪದಕಗಳ ಬದಲು ಗೆದ್ದವರಿಗೆ ಓಲಿವ್ ಎಲೆಯ ಕಿರೀಟ ತೊಡಿಸಲಾಗುತ್ತಿತ್ತು. ಮಹಿಳೆಯರ ಯಾವುದೇ ಆಟೋಟ ಸ್ಪರ್ಧೆ ಇರಲಿಲ್ಲ. ಬಹು ಜನಪ್ರಿಯವಾದ ಒಲಿಂಪಿಕ್ಸ್ ಕ್ರೀಡಾಕೂಟಗಳು ಕ್ರಿಸ್ತ ಶಕ 393ರ ಬಳಿಕ ನಡೆಯಲಿಲ್ಲ.
ಪ್ಯಾರಿಸಿನ ಸ್ಟೇಡ್ ಡೆ ಫ್ರಾನ್ಸ್ 2024ರ 33ನೇ ಒಲಿಂಪಿಯಾಡ್ ನಡೆಯುವ ಪ್ರಧಾನ ಕ್ರೀಡಾಂಗಣವಾಗಿದೆ. 2024ರ ಜುಲಾಯಿ 26ರಂದು ಉದ್ಘಾಟನೆ ಕಾಣುವ ಪ್ಯಾರಿಸ್ ಒಲಿಂಪಿಕ್ಸ್ ಆಗಸ್ಟ್ 11ನೇ ದಿನಾಂಕದಂದು ಸಮಾರೋಪ ಕಾಣುತ್ತದೆ. ಪ್ಯಾರಿಸ್ ಮುಖ್ಯ ಆತಿಥೇಯ ನಗರವಲ್ಲದೆ ಇತರ 16 ನಗರಗಳಲ್ಲೂ ಈ ಒಲಿಂಪಿಕ್ಸ್ ಆಟೋಟಗಳು ನಡೆಯುತ್ತವೆ. ಎರಡನೆಯ ಆಧುನಿಕ ಒಲಿಂಪಿಕ್ಸ್ ಸಹಜವಾಗಿಯೇ 1900ರಲ್ಲಿ ಪ್ಯಾರಿಸಿನಲ್ಲಿ ನಡೆದಿತ್ತು. 1924ರಲ್ಲೂ ಪ್ಯಾರಿಸ್‍ನಲ್ಲಿ ಒಲಿಂಪಿಕ್ಸ್ ನಡೆದಿತ್ತು. ಒಂದು ಶತಮಾನದ ಬಳಿಕ ಮತ್ತೆ ಪ್ಯಾರಿಸ್ ಒಲಿಂಪಿಕ್ಸ್ ನಡೆಯುತ್ತಿದೆ.
2020ರಲ್ಲಿ 32ನೇ ಒಲಿಂಪಿಕ್ಸ್ ಟೋಕಿಯೋದಲ್ಲಿ, 2016ರಲ್ಲಿ 31ನೇ ಒಲಿಂಪಿಕ್ಸ್ ರಿಯೋ ಡಿ ಜನೈರೊದಲ್ಲಿ, 2012ರ 30ನೇ ಒಲಿಂಪಿಕ್ಸ್ ಲಂಡನ್‍ನಲ್ಲಿ ಮತ್ತು 2008ರ 29ನೇ ಒಲಿಂಪಿಕ್ಸ್ ಬೀಜಿಂಗ್‍ನಲ್ಲಿ ನಡೆದಿತ್ತು. ಒಲಿಂಪಿಕ್ಸ್‍ನಲ್ಲಿ ಹಿಂದೆ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಸೋವಿಯೆತ್ ಯೂನಿಯನ್ ನಡುವೆ ಪದಕ ಗೆಲ್ಲುವಲ್ಲಿ ಪ್ರಮುಖ ಪೈಪೋಟಿ ಇತ್ತು. ಸೋವಿಯೆತ್ ಯೂನಿಯನ್ ಒಡೆದ ಮೇಲೆ ರಶಿಯಾ ಗಳಿಕೆ ಸ್ವಲ್ಪ ಹಿಂದೆ ಬಿತ್ತು. 2008ರ ಬೀಜಿಂಗ್ ಒಲಿಂಪಿಕ್ಸ್ ಬಳಿಕ ಯುಎಸ್‍ಎಗೆ ಪದಕ ಸವಾಲು ಎಸೆಯುತ್ತಿರುವ ದೇಶ ಚೀನಾವಾಗಿದೆ.
ಆದರೆ 18 ಬಾರಿ ಅಮೆರಿಕ ಸಂಯುಕ್ತ ಸಂಸ್ಥಾನವು ಅತಿ ಹೆಚ್ಚು ಪದಕ ಪಡೆದ ದೇಶವಾಗಿ ಆಧುನಿಕ ಒಲಿಂಪಿಕ್ಸ್‍ನಲ್ಲಿ ಒಟ್ಟಾರೆ ಕೂಡ ಅತಿ ಹೆಚ್ಚು ಪದಕ ಗೆದ್ದ ದೇಶವೆನಿಸಿದೆ. ಸೋವಿಯೆತ್ ಯೂನಿಯನ್ 6 ಬಾರಿ ಒಲಿಂಪಿಕ್ಸ್‍ನಲ್ಲಿ ಅತಿ ಹೆಚ್ಚು ಪದಕ ಗೆದ್ದ ದೇಶವಾಗಿತ್ತು. ಫ್ರಾನ್ಸ್, ಬ್ರಿಟನ್, ಜರ್ಮನಿ, ಚೀನಾಗಳು ತಲಾ ಒಮ್ಮೆ ಅತಿ ಹೆಚ್ಚು ಪದಕ ಗೆದ್ದ ದೇಶಗಳಾಗಿದ್ದವು. ಯುನೈಟೆಡ್ ಟೀಮ್ ಕೂಡ ಒಮ್ಮೆ ಅತಿ ಹೆಚ್ಚು ಪದಕ ಗೆದ್ದ ತಂಡವಾಗಿತ್ತು. ಸೋವಿಯೆತ್ ರಶಿಯಾ 12 ದೇಶಗಳಾದ ಮೇಲೆ 1992ರ ಬಾರ್ಸಿಲೋನಾ ಒಲಿಂಪಿಕ್ಸ್‍ನಲ್ಲಿ ಒಂದು ಬಾರಿ ಯುನೈಟೆಡ್ ಟೀಮ್ ಎಂದು ಒಟ್ಟಾಗಿ ಸ್ಪರ್ಧಿಸಿದ್ದವು. ಅದು ಪದಕ ಪಟ್ಟಿಯಲ್ಲಿ ಆಗ ಅತಿ ಹೆಚ್ಚು ಪದಕ ಗೆದ್ದ ತಂಡ ಎನಿಸಿತ್ತು.
ಒಲಿಂಪಿಕ್ಸ್ ಗುರುತು ಎಂಬುದು ಐದು ಬಳೆಗಳು ಒಂದರೊಳಗೊಂದು ಸೇರಿ ಆದುದಾಗಿದೆ. ಆ ಬಳೆಗಳು ನೀಲಿ, ಹಳದಿ, ಕಪ್ಪು, ಹಸಿರು, ಕೆಂಪು ಬಣ್ಣದಲ್ಲಿ ಇರುತ್ತದೆ. ಇವು ಮೂಲ ಖಂಡಗಳಾದ ಏಶಿಯಾ, ಆಫ್ರಿಕಾ, ಯೂರೋಪು, ಅಮೆರಿಕ, ಓಸಿಯಾನಿಯಾ ಇಲ್ಲವೇ ಆಸ್ಟ್ರೇಲಿಯಾಗಳನ್ನು ಪ್ರತಿನಿಧಿಸುವುದಾಗಿ ಹೇಳಲಾಗುತ್ತದೆ. ಬಳೆಗಳ ಬಣ್ಣಗಳು ಜನಾಂಗೀಯ ಗುರುತುಗಳು ಎಂದೂ ಹೇಳುತ್ತಾರೆ. ಮೊದಲ ಆಧುನಿಕ ಒಲಿಂಪಿಕ್ಸ್ ಮತ್ತೆ ಆರಂಭವಾದಾಗ ಅದರಲ್ಲಿ ಬ್ರಿಟನ್, ಫ್ರಾನ್ಸ್, ಜರ್ಮನಿ ಎಂದು 14 ದೇಶಗಳಷ್ಟೆ ಪಾಲ್ಗೊಂಡಿದ್ದವು. ಒಲಿಂಪಿಕ್ಸ್‍ನಲ್ಲಿ 40 ಬಗೆಯ ಆಟೋಟಗಳು, ನಾನಾ ವಿಭಾಗಗಳಲ್ಲಿ ಆಡಲ್ಪಡುತ್ತವೆ.
ಬರಹ: ಪೇರೂರು ಜಾರು, ಹಿರಿಯ ಸಂಪಾದಕರು