ಪವಿತ್ರವಾದ ರಂಜಾನ್ ಇಫ್ತಾರ್ ಸಂಗಮ
ಮಂಜೇಶ್ವರ : ವಿಸ್ಡಮ್ ಇಸ್ಲಾಮಿಕ್ ಆರ್ಗನೈಸೇಶನ್ ಮಂಜೇಶ್ವರ ಝೋನಲ್ ಸಮಿತಿಯ ವತಿಯಿಂದ ಹೊಸಂಗಡಿ ಗ್ರ್ಯಾಂಡ್ ಆಡಿಟೋರಿಯಂನಲ್ಲಿ ಪವಿತ್ರವಾದ ರಂಝಾನ್ ಇಫ್ತಾರ್ ಸಂಗಮ ಹಮ್ಮಿಕೊಳ್ಳಲಾಯಿತು. ಖ್ಯಾತ ವಿದ್ವಾಂಸ ಮುಜಾಹಿದ್ ಬಾಳುಶ್ಯೇರಿ ಯವರು “ನಾಳೆಗಾಗಿ ಸಿದ್ಧರಾಗಿ” ಎಂಬ ವಿಷಯದ ಕುರಿತು ಪ್ರವಚನ ನೀಡಿದರು.
ರಂಜಾನ್ ತಿಂಗಳಲ್ಲಿ ಧರ್ಮದ ಹೆಸರಿನಲ್ಲಿ ವಿಶ್ವಾಸಿಗಳನ್ನು ವಂಚಿಸಿ ಹಣ ಸಂಪಾದಿಸಲು ಬಯಸುವ ಮೋಸದ ಪುರೋಹಿತರ ಬಗ್ಗೆ ವಿಶ್ವಾಸಿಗಳು ಹೆಚ್ಚು ಜಾಗರೂಕರಾಗಿರಬೇಕು. ತೀರ್ಪಿನ ದಿನದಂದು ಯಶಸ್ವಿಯಾಗಲು ನಾವು ನಿಜವಾದ ಧರ್ಮವನ್ನು ಅದರ ನಿಜವಾದ ಮೂಲಗಳಾದ ಖುರಾನ್ ಮತ್ತು ಪ್ರವಾದಿ ಮುಹಮ್ಮದ್ ಅವರ ಜೀವನ ಚರಿತ್ರೆಯಿಂದ ಕಲಿಯಬೇಕು ಎಂದರು.
ವಿಸ್ಡಮ್ ಝೋನಲ್ ಅಧ್ಯಕ್ಷ ಅಬ್ದುಲ್ ಖಾದರ್ ಕಡಂಬರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಯುವ ಘಟಕದ ಕಾರ್ಯದರ್ಶಿ ಇರ್ಷಾದ್ ಮೀಯಾಪದವು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಥಮ, ದ್ವಿತೀಯ ಮತ್ತು ತೃತೀಯ ವಿಜೇತರಿಗೆ ಕ್ರಮವಾಗಿ ಬಾವಾ ಹಾಜಿ ಹಿಂದೂಸ್ತಾನ್ ಬಿಲ್ಡರ್, ಕೆ.ಟಿ.ಸಿರಾಜ್ ಮತ್ತು ಮೊಹಮ್ಮದ್ ಸಾದಿಕ್ ಕಡಂಬಾರ್ ಬಹುಮಾನ ವಿತರಿಸಿದರು.
ಕಾರ್ಯಕ್ರಮಕ್ಕೆ ಮಂಜೇಶ್ವರದ ವಿವಿಧ ಭಾಗಗಳಿಂದ ಜನಸಾಗರವೇ ಹರಿದು ಬಂದಿತ್ತು. ಕಾರ್ಯದರ್ಶಿ ಅಬ್ದುಲ್ ಹಮೀದ್ ಸ್ವಾಗತಿಸಿ ಹಮೀದ್ ಮೈತಾಳ್ ವಂದಿಸಿದರು. ಹಸನ್ ಸಲಫಿ ಕಾರ್ಯಕ್ರಮ ನಿರೂಪಿಸಿದರು.