ಪುತ್ತೂರಿಗೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹ : ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯಿಂದ ಜಾಥಾ
ಪುತ್ತೂರು: ಪುತ್ತೂರಿಗೆ ಸುಸಜ್ಜಿತವಾದ ಮೆಡಿಕಲ್ ಕಾಲೇಜು ಸ್ಥಾಪನೆ ಆಗಬೇಕೆಂದು ಆಗ್ರಹಿಸಿ ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾವು ಪುತ್ತೂರು ದರ್ಬೆಯಿಂದ ಬೊಳುವಾರು ತನಕ ನಡೆಯಿತು.
ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮತ್ತು ಗೌರವಾಧ್ಯಕ್ಷ ಅಣ್ಣಾ ವಿನಯಚಂದ್ರ ಅವರು ದರ್ಬೆಯಲ್ಲಿ ಜಾಥಾಕ್ಕೆ ಚಾಲನೆ ನೀಡಿದರು.
ಜಾಥಾದಲ್ಲಿ ಉಪಾಧ್ಯಕ್ಷರಾದ ಝೇವಿಯರ್ ಡಿ’ಸೋಜಾ, ಎ ರೂಪೇಶ್ ರೈ ಅಲಿಮಾರ್, ವಿಶ್ವಪ್ರಸಾದ್ ಸೇಡಿಯಾಪು, ಕಾರ್ಯಕಾರಿ ಸಮಿತಿ ಸದಸ್ಯರಾದ ಎಚ್.ಮಹಮ್ಮದ್ ಆಲಿ, ಮೌರಿಸ್ ಮಸ್ಕರೇನ್ಹಸ್,ಹೋರಾಟ ಸಮಿತಿ ಸಂಚಾಲಕ ಲಕ್ಷ್ಮೀಶ ಗಬ್ಲಡ್ಕ, ಬಾಲಕೃಷ್ಣ ಗೌಡ ಕೆಮ್ಮಾರ, ಅಮಳ ರಾಮಚಂದ್ರ, ಡಾ.ಬಿ.ಕೆ.ವಿಷುಕುಮಾರ್, ರಾಜ್ಯ ದಾರಿಮಿ ಒಕ್ಕೂಟದ ಅಧ್ಯಕ್ಷ ಎಸ್.ಬಿ.ದಾರಿಮಿ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟ್ಹೀನೊ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ, ಸುಭಾಷ್ ರೈ ಬೆಳ್ಳಿಪ್ಪಾಡಿ, ಚಿಲ್ಮೆತ್ತಾರು ಸಂತೋಷ್, ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ನಾಯ್ಕ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಸುಮಾರು 40 ಎಕ್ರೆ ಸ್ಥಳವನ್ನು ಬನ್ನೂರು ಗ್ರಾಮದ ಸೇಡಿಯಾಪು ಎಂಬಲ್ಲಿ ಜಾಗ ಕಾದಿರಿಸಿ ಆರ್‍ಟಿಸಿಯು ಆಗಿದೆ. ಆದರೆ ಮೆಡಿಕಲ್ ಕಾಲೇಜು ಸ್ಥಾಪನೆಯ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೊಂಡು ಪುತ್ತೂರು ಮತ್ತು ಆಸುಪಾಸಿನ ಸುಳ್ಯ, ಬೆಳ್ತಂಗಡಿ, ಕಡಬ, ಬಂಟ್ವಾಳ ಮತ್ತು ಕಾಸರಗೋಡು ಪ್ರದೇಶದ ಜನರಿಗೆ ಒಂದು ಸರ್ವ ಸುಸಜ್ಜಿತ ಆಸ್ಪತ್ರೆ ಮತ್ತು ಪರಿಪೂರ್ಣ ಉಚಿತ ಚಿಕಿತ್ಸೆ ಲಭ್ಯವಾಗಬೇಕು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಸರಕಾರಿ ಮೆಡಿಕಲ್ ಕಾಲೇಜು ಇಲ್ಲದಿರುವುದು ಮತ್ತು ಪುತ್ತೂರಿನಲ್ಲಿ ಅದೇ ಉದ್ದೇಶಕ್ಕಾಗಿ ಸರಕಾರ ನಿವೇಶನವನ್ನು ಕಾದಿರಿಸಿರುವುದು ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲು ಇರುವ ಅವಕಾಶವಾಗಿದೆ ಎಂಬ ಮಾಹಿತಿಯನ್ನೊಳಗೊಂಡ ಕರ ಪತ್ರವನ್ನು ಪೇಟೆಯಲ್ಲಿ ವಿತರಣೆ ಮಾಡಲಾಯಿತು.