ಪುತ್ತೂರು : ದಿ. ಜಯರಾಮ ಗೌಡ ಪೆರ್ಲಂಪಾಡಿ ಅವರಿಗೆ ನುಡಿನಮನ
ಪುತ್ತೂರು ತಾಲೂಕಿನ ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಪಾಲ್ತಾಡು ಶಾಖಾ ವ್ಯವಸ್ಥಾಪಕರಾದ ಜಯರಾಮ ಗೌಡ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ನುಡಿನಮನ ಕಾರ್ಯಕ್ರಮವು ಪೆರ್ಲಂಪಾಡಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಸಮಾಜಕ್ಕೆ ಸ್ಫೂರ್ತಿಯ ಚಿಲುಮೆಯಾಗಿದ್ದಂತಹ ಜಯರಾಮ ಗೌಡ ಅವರ ಅಗಲಿಕೆ ಇಡೀ ಕುಟುಂಬಕ್ಕೆ, ಬಂಧು ಮಿತ್ರರಿಗೆ ತುಂಬಲಾರದ ನಷ್ಟ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವು ಪೆರ್ಲಂಪಾಡಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ದೇವರಾಜ್ ಮುತ್ಲಾಜೆ, ಪ್ರೊಫೆಸರ್ ನೇಮಿರಾಜ್, ಮಲ್ಲಿಕಾ ಶೆಟ್ಟಿ ಅಂಕತಡ್ಕ, ಗಿರಿಧರ್ ಗೌಡ ಅವರು ಜಯರಾಮ ಗೌಡ ಅವರ ಒಡನಾಟ ಮತ್ತು ಬಾಲ್ಯದ ನೆನಪು, ಅವರ ಸಮಾಜಮುಖಿ ಸೇವೆ, ಆತ್ಮೀಯ ಗುಣಗಳನ್ನು ಸ್ಮರಿಸಿಕೊಂಡರು. ನಂತರ ಸೇರಿದ್ದ ಬಂಧುಮಿತ್ರರೆಲ್ಲರು ಜಯರಾಮ್ ಗೌಡ ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಆತ್ಮಕ್ಕೆ ಶಾಂತಿ ಕೋರಿದರು.
ಈ ಸಂದರ್ಭದಲ್ಲಿ ಜಯರಾಮ ಗೌಡ ಅವರ ತಂದೆ ಬೆಳ್ಯಪ್ಪ ಗೌಡ ಕೊಡಂಕಿರಿ, ತಾಯಿ ತಾರಾವತಿ, ಸಹೋದರರಾದ ಗುರುಪ್ರಸಾದ್, ಶ್ರೀದೇವಿ ಗುರುಪ್ರಸಾದ್, ಪೊಲೀಸ್ ಸಿಬ್ಬಂದಿ ಹರಿಪ್ರಸಾದ್, ವನಿತಾ ಹರಿಪ್ರಸಾದ್ ಹಾಗೂ ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ಬೆಳ್ಯಪ್ಪ ಮತ್ತು ತಾರಾವತಿ ದಂಪತಿಯ ಪುತ್ರರಾಗಿದ್ದು, ಸ್ನಾತಕೋತ್ತರ ಪದವೀಧರರಾಗಿದ್ದರು. 2011ರಲ್ಲಿ ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ನೇಮಕಗೊಂಡಿದ್ದರು. 2018ರಲ್ಲಿ ಪಾಲ್ತಾಡು ಶಾಖಾ ವ್ಯವಸ್ಥಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು.
ಜಯರಾಮ ಗೌಡ ಅವರು ಓರ್ವ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆತು ಮಾತನಾಡುವ ಸೌಮ್ಯ ಸ್ವಭಾವದವರು. ಮಾತ್ರವಲ್ಲದೆ ಎಲ್ಲರಿಗೂ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಕೊಳ್ತಿಗೆ ಯುವಕ ಮಂಡಲದ ಸಕ್ರೀಯ ಸದಸ್ಯರಾಗಿ, ಕೊಳ್ತಿಗೆ ಟಾಪ್ ಟೌನ್ ಫ್ರೆಂಡ್ಸ್ ಕ್ಲಬ್ ನ ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.