ಪುತ್ತೂರು: ಮಾ.7ರಂದು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ

ಪುತ್ತೂರು: ರೈತರ ಫಲವತ್ತಾದ ಭೂಮಿಯನ್ನು ಹಾಳು ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ರೈತರ ಬಗ್ಗೆ ಕಳಕಳಿ ಇರುತ್ತಿದ್ದರೆ, ಇಂತಹ ದುಸ್ಥಿತಿ ಬರುತ್ತಿರಲಿಲ್ಲ. ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದು 6 ತಿಂಗಳು ಕಳೆದರೂ, ಜಿಲ್ಲಾಧಿಕಾರಿಯವರು ರೈತರ ಸಭೆ ನಡೆಸಿಲ್ಲ. ವಿವಿಧ ಬೇಡಿಕೆಯನ್ನು ಇಟ್ಟುಕೊಂಡು ಮಾ.7ರಂದು ಮಧ್ಯಾಹ್ನ 2ರಿಂದ ಬಿಸಿರೋಡಿನಿಂದ ಟ್ರ್ಯಾಕ್ಟರ್ ಹಾಗೂ ವಾಹನ ಜಾಥಾ ಮೂಲಕ ಜಿಲ್ಲಾಧಿಕಾರಿಗಳ ಕಛೇರಿ ಎದುರು ಸಾಯಂಕಾಲ 4ಕ್ಕೆ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ರೈತ ಸಂಘಗಳ ಒಕ್ಕೂಟದ ಸಂಯೋಜಕ ಸನ್ನಿ ಡಿ.ಸೋಜ ಹೇಳಿದರು.
ಅಡಿಕೆ ಹಾಗೂ ತೆಂಗಿನ ಆಮದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಕಾರ್ಪೊರೇಟ್ ಕಂಪನಿಗಳ ೧೪ ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಸರಕಾರ ಸರಕಾರದ ತಪ್ಪು ನೀತಿಯಿಂದಾಗಿ ರೈತರು ಸಾಲಗಾರರಾಗಿದ್ದಾರೆ ಆದ್ದರಿಂದ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ದೆಹಲಿಯ ಗಡಿ ಪ್ರದೇಶದಲ್ಲಿ ಹೋರಾಟ ನಡೆಸುವ ರೈತರ ಮೇಲಿನ ದೌರ್ಜನ್ಯವನ್ನು ಕೂಡಲೇ ನಿಲ್ಲಿಸಬೇಕು. ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು. ಧಾರ್ಮಿಕ ಸಂಘರ್ಷದಲ್ಲಿ ಮೃತಪಟ್ಟವರಿಗೆ ಸರಕಾರವು ನೀಡಿದ 25 ಲಕ್ಷ ಸಹಾಯಧನ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ರೈತರಿಗೂ ನೀಡಬೇಕು. ಎಲೆ ಚುಕ್ಕಿ ರೋಗ ಹಾಗೂ ಹಳದಿ ಎಲೆ ರೋಗ ಭಾದಿತ ರೈತರಿಗೆ ಪ್ರತಿ ಎಕರೆಗೆ 25,೦೦೦ ಸಹಾಯಧನವನ್ನು ನೀಡಬೇಕು. ಬಂಟ್ವಾಳದ ಮೂಲಕ ಹಾದುಹೋಗುವ 400 ಕೆ ವಿ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸಬೇಕು ಎಂಬ ಪ್ರಮುಖ ಬೇಡಿಕೆಯನ್ನು ಇಟ್ಟುಕೊಂಡು ಹೋರಾಟ ನಡೆಯುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ರೈತ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾದ ಓಸ್ವಾಲ್ಡ್ಸ್ ಫೆರ್ನಾಂಡಿಸ್, ಅಮರನಾಥ ಆಳ್ವ, ಕಲೀಲ್ ಇಬ್ರಾಹಿಂ, ಭರತ್ ರೈ ಸೂಡಿಮುಳ್ಳು ಉಪಸ್ಥಿತರಿದ್ದರು.