ಹಿಂದೂ ಹಬ್ಬಗಳು ಎರಡೆರಡು ದಿನ ಬರಲು ಕಾರಣವೇನು?
ಸೌದಿ ಅರೇಬಿಯಾದಲ್ಲಿ ಶುಕ್ಲ ಪಕ್ಷದ ಮರಿ ಚಂದ್ರ ಗೋಚರಿಸಿರುವುದರಿಂದ ಅಧಿಕೃತವಾಗಿ ರಮಜಾನ್ ಇಲ್ಲವೇ ರಮದಾನ್ ಪವಿತ್ರ ತಿಂಗಳ ಇಸ್ಲಾಂ ಧರ್ಮೀಯರ ಆಚರಣೆಗಳೆಲ್ಲ ಆರಂಭವಾಗಿವೆ. ಮುಖ್ಯವಾಗಿ ಕತ್ತಲಾದ ಮೇಲೆ ಇಫ್ತಾರ್ ಉಪವಾಸ ಬಿಡುವಿಕೆ ಮತ್ತು ಬಳಿಕ ಸರಳ ಊಟ. ಮುಂಜಾವದಲ್ಲಿ ಊಟ ಮತ್ತು ನೇಸರ ಗೋಚರಿಸಿದ ಮೇಲೆ ಹಗಲಿಡೀ ಉಪವಾಸ ರಮದಾನ್ ತಿಂಗಳ ಆಚರಣೆಗಳಲ್ಲಿ ಮುಖ್ಯವಾದುದು. ಎಲ್ಲ ಧರ್ಮಗಳಂತೆಯೇ ಇತರ ಧಾರ್ಮಿಕ ಆಚರಣೆಗಳೂ ಇರುತ್ತವೆ.
ಕಾಯಿಲೆಯವರಿಗೆ, ಅತಿ ಮುದುಕರಿಗೆ, ತೀವ್ರ ಪ್ರಯಾಣದ ಇಲ್ಲವೇ ಕಠಿಣ ವೃತ್ತಿನಿರತರಿಗೆ ಉಪವಾಸದಿಂದ ವಿನಾಯತಿ ಪಡೆಯಲೂ ಅವಕಾಶವಿದೆ. ರಮದಾನ್ ಎನ್ನುವುದು ಮುಸ್ಲಿಂ ಕ್ಯಾಲೆಂಡರಿನ ಒಂಬತ್ತನೆಯ ತಿಂಗಳಿನ ಮೊದಲ ದಿನ. ಗಣಿತ ಕ್ಷೇತ್ರ ಎನ್ನಲಾದ ಪಡುವಣ ಏಶಿಯಾದಲ್ಲಿ ಹುಟ್ಟಿದ ಇಸ್ಲಾಂ ಧರ್ಮದಲ್ಲಿ ಇನ್ನೂ ಚಂದ್ರನ ಲೆಕ್ಕಾಚಾರ ಮುಂದುವರಿದಿದೆ ಮತ್ತು ಚಂದ್ರ ಮೂಡುವುದನ್ನು ನೋಡುವುದು ಮೊದಲ ದಿನ ಮತ್ತು ಕೊನೆಯ ದಿನಗಳಲ್ಲಿ ಕಡ್ಡಾಯವಾಗಿದೆ. ಹಾಗಾಗಿ ಕೆಲವು ಕಡೆ ಮಂಗಳವಾರ ಪವಿತ್ರ ಮಾಸಾರಂಭವಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಪಾಶ್ಚಾತ್ಯರು ಗಣಿತದ ಕರ್ಮಭೂಮಿ ಎಂದೇ ಅರಬ್ ನಾಡನ್ನು ಪರಿಗಣಿಸುತ್ತಾರೆ. ಒಂಬತ್ತನೆಯ ಶತಮಾನದ ಮುಹಮ್ಮದ್ ಇಬ್ನ್ ಮೂಸಾ ಅರಬ್ ನಾಡಿನ ಅತಿ ದೊಡ್ಡ ಗಣಿತ ಪಂಡಿತ. ನಾವು ಸಾಮಾನ್ಯವಾಗಿ ಸೊನ್ನೆಯನ್ನು ಭಾರತದ ಕೊಡುಗೆ ಎಂದು ಬರೆಯುತ್ತೇವೆ. ಆದರೆ ಪಾಶ್ಚಾತ್ಯರು ಸೊನ್ನೆಯನ್ನು ಇಂಡೋ ಅರಾಬಿಕ್ ಎಂದು ಹೇಳುತ್ತಾರೆ. ಯೂರೋಪಿಗೆ ಸೊನ್ನೆ ಪರಿಚಯವಾದುದು ಅರಬ್ ಗಣಿತ ತಜ್ಷರಿಂದ ಎಂಬುದು ಸ್ಪಷ್ಟ. ಅಲ್ಲಿಗೆ ಅದು ಭಾರತದಿಂದ ಹೋಗಿರಬಹುದು. ಆದರೆ ಬೀಜ ಗಣಿತದ ತವರು ಅರಬ್ ನಾಡು ಎಂಬುದಕ್ಕೆ ಎರಡು ಮಾತಿಲ್ಲ.
ಗ್ರೀಕ್ ಗಣಿತ ಪಂಡಿತರಾದ ಯೂಕ್ಲಿಡ್, ಆರ್ಕಿಮಿಡೀಸ್, ಅಪೋಲೋನಿಯಸ್ ಪರಂಪರೆಯನ್ನು ಮಧ್ಯ ಕಾಲದಲ್ಲಿ ಜಾಗತಿಕ ಮಟ್ಟಕ್ಕೆ ಒಯ್ದವರು ಇಬ್ನ್ ಮೂಸಾ, ಅಲ್ ಖರಾಜಿ ಮೊದಲಾದ ಅರಬ್ ಗಣಿತ ಪ್ರಾಜ್ಞರು. ಜಾಗತಿಕ ಗಣಿತ ಲೋಕಕ್ಕೆ ಅದೂ ಬೀಜ ಗಣಿತದ ಕೊಡುಗೆ ಮಧ್ಯ ಯುಗದಲ್ಲಿ ಮುಖ್ಯವಾಗಿ ಒಂಬತ್ತು ಹತ್ತನೆಯ ಶತಮಾನದಲ್ಲಿ ಪಶ್ಚಿಮ ಏಶಿಯಾದಲ್ಲಿ ಆಯಿತು. ಅದನ್ನು ಇಸ್ಲಾಂ ಸ್ವರ್ಣ ಯುಗ ಎಂದೂ ಹೇಳುತ್ತಾರೆ. ಭಾರತದ ಆರ್ಯಭಟ, ಬ್ರಹ್ಮಗುಪ್ತರ ಗಣಿತದ ಕೊಡುಗೆ ಅದರ ಬೆನ್ನಿಗೇ ಆಗಿದೆ. ದಶಮಾನ ಪದ್ಧತಿ, ಬೀಜ ಗಣಿತ, ಮುಮ್ಮೂಲೆ ಲೆಕ್ಕಾಚಾರ, ಜಾಮಿಟ್ರಿ ಲೆಕ್ಕಾಚಾರ ಅರಬ್ ನಾಡಿನಲ್ಲಿ ಹತ್ತನೆಯ
ಶತಮಾನದ ಅಂತ್ಯದವರೆಗೂ ಅತ್ಯುನ್ನತಿ ಕಂಡು ಆಮೇಲೆ ತನ್ನ ಹೊಳಪು ಕಳೆದುಕೊಂಡಿತು ಎನ್ನಬಹುದು.
ಅದರಲ್ಲಿ ಈ ವರುಷದ ಲೆಕ್ಕಾಚಾರ ಮತ್ತು ಚಂದ್ರ ದರ್ಶನದ ಲೆಕ್ಕಾಚಾರ ಸೇರಿದೆ. ತನ್ನ ಅಕ್ಷದಲ್ಲಿ ತಂಗದಿರನು ಭೂಮಿಯ ಸುತ್ತ ಸುತ್ತುವುದು ಮತ್ತು ಭೂಮಿಯೂ ತನ್ನ ಅಕ್ಷದಲ್ಲಿ ಬೆಂಗದಿರನ ಸುತ್ತ ಸುತ್ತುವುದರಿಂದ ನೆರಳಿನ ಏರಿಳಿತ ಮತ್ತು ಬೆಳಕಿನ ಏರಿಳಿತ ನಮಗೆ ಗೋಚರಿಸುತ್ತದೆ. ಆದ್ದರಿಂದ ಪೂರ್ಣ ಚಂದ್ರನು ಕೃಷ್ಣ ಪಕ್ಷದಲ್ಲಿ ಕುಗ್ಗುತ್ತ ಸಾಗಿ ಶುಕ್ಲ ಪಕ್ಷದಲ್ಲಿ ಹಿಗ್ಗುತ್ತ ಸಾಗಿ ಪೂರ್ಣ ತಿಂಗಳ ಎನಿಸುವನು. ಇದನ್ನು ಆದಿ ಮಾನವನು ತನ್ನ ಲೆಕ್ಕಾಚಾರಕ್ಕೆ ಬಳಸಿಕೊಳ್ಳತೊಡಗಿದನು, ಭಾರತ ಸಹಿತ ಲೋಕದಲ್ಲೆಲ್ಲ ಈಗಲೂ ಈ ಚಾಂದ್ರಮಾನ ಲೆಕ್ಕಾಚಾರ ಇನ್ನೂ ಇದೆ.
ಈಜಿಪ್ತಿನವರು ಮೊದಲು ಸೌರಮಾನ ಲೆಕ್ಕಾಚಾರವನ್ನು ಬಳಸಿದರು. ಅದು ತುಳುವರು, ದ್ರಾವಿಡರು, ಅಮೆರಿಕದ ಮೂಲ ನಿವಾಸಿಗಳು ಮೊದಲಾದವರಲ್ಲಿ ಮುಂದೆ ಬಳಕೆಗೆ ಬಂದಿದೆ. ಈಜಿಪ್ತಿನ ಕಾರ್ನಾಕ್ 4,000ದಷ್ಟು ವರುಷ ಹಿಂದಿನ ಸೂರ್ಯಾಲಯ ನೆಲೆಯಾಗಿದೆ. ಭಾರತದ ಕೋನಾರ್ಕ್‍ನಲ್ಲಿ ಎಂಟು ನೂರು ವರುಷ ಹಿಂದಿನ ಸೂರ್ಯ ದೇವಾಲಯ ಇದೆ. ಇವೆರಡಕ್ಕೂ ಯಾವುದೇ ಹೋಲಿಕೆ ಇಲ್ಲದಿದ್ದರೂ ಕಾರ್ನಾಕ್, ಕೋನಾರ್ಕ್ ಹಿಂದೆ ಸೂರ್ಯ ಕಿರಣದ ಸಂಬಂಧ ಇದ್ದಿರಬಹುದು.
ಭಾರತಕ್ಕೆ ಬಂದ ಆರ್ಯ ಜನರು ಚಾಂದ್ರಮಾನ ಲೆಕ್ಕಾಚಾರ ಇಂದಿಗೂ ಮುಂದುವರಿಸಿದರೂ ನಾಲ್ಕು ವರುಷಕ್ಕೊಮ್ಮೆ ಅಧಿಕ ಮಾಸ ಎಂದು ಸೌರಮಾನಿಗರ ಪ್ರಭಾವದಿಂದ ವರುಷದ ದಿನಗಳನ್ನು ಸರಿ ಹೊಂದಿಸಿಕೊಂಡಿದ್ದಾರೆ. ಕ್ರಿಸ್ತ ಶಕ 46ರಲ್ಲಿ ಬಳಕೆಗೆ ಬಂದ ಜೂಲಿಯನ್ ಕ್ಯಾಲೆಂಡರ್ ನಾಲ್ಕರಿಂದ ಭಾಗಿಸಿ ಹೋಗುವ ವರುಷಕ್ಕೆ ಒಂದು ದಿನ ಹೆಚ್ಚು ಸೇರಿಸಿ ಸೌರಮಾನ ವರುಷವನ್ನು ಖಚಿತಗೊಳಿಸಿತು. ಏಕೆಂದರೆ ಭೂಮಿಯು ಸೂರ್ಯನನ್ನು ಸುತ್ತಲು ಮುನ್ನೂರ ಅರವತ್ತೈದು ಕಾಲು ದಿನ ತೆಗೆದುಕೊಳ್ಳುತ್ತದೆ. 1582ರಲ್ಲಿ ಈಗಿನ ಗ್ರೆಗೊರಿಯನ್ ಕ್ಯಾಲೆಂಡರ್ ಬಳಕೆಗೆ ಬಂತು. ಅದರಲ್ಲಿ ಹಿಂದೆ ಕಳೆದು ಹೋಗಿರಬಹುದಾದ ದಿನಗಳನ್ನು ಸರಿಹೊಂದಿಸಿ ಕ್ರಿಸ್ಮಸ್ ಮತ್ತು ಹೊಸ ವರುಷದ ದಿನವನ್ನು ಸಂಗತಗೊಳಿಸಲಾಗಿದೆ.
ಇಸ್ಲಾಂ ಕ್ಯಾಲೆಂಡರ್ ಎನ್ನುವುದು ಹಿಜ್ರೀ ಕ್ಯಾಲೆಂಡರ್ ಆಗಿದೆ. ಇದರ ಪ್ರತಿ ತಿಂಗಳು ಚಂದ್ರನ ಶುಕ್ಲ ಪಕ್ಷದ ಮೊದಲ ದಿನದಿಂದ ಕೃಷ್ಣ ಪಕ್ಷದ ಕೊನೆಯ ದಿನದವರಗೆ ಇರುತ್ತದೆ. ಇದು ಸರಾಸರಿ ಇಪ್ಪತ್ತೊಂಬತ್ತೂವರೆ ದಿನಗಳಾಗುತ್ತವೆ. ಹಾಗಾಗಿ ಹಿಜ್ರೀ ಕ್ಯಾಲೆಂಡರಿನಲ್ಲಿ ವರುಷಕ್ಕೆ 354 ಇಲ್ಲವೇ 355 ದಿನಗಳು ಇರುತ್ತವೆ. ಹಾಗಾಗಿ ಪ್ರತಿ ಹೊಸ ವರುಷದ ದಿನವು ಗ್ರೆಗೊರಿಯನ್ ಕ್ಯಾಲೆಂಡರ್ ಜೊತೆ ಸಮೀಕರಿಸಿದಾಗ ಹತ್ತು ದಿನದಷ್ಟು ಮೊದಲು ಬರುತ್ತದೆ. ಅದಕ್ಕೆ ತಕ್ಕಂತೆ ರಮದಾನ್ ಕೂಡ ಪ್ರತಿ ವರುಷ ವರುಷ ಹತ್ತತ್ತು ದಿನಗಳಷ್ಟು ಬೇಗ ಬೇಗ ಬರುತ್ತಲಿರುತ್ತದೆ.
ಭಾರತವು ಸ್ವಾತಂತ್ರ್ಯಗೊಂಡಾಗ 68 ಕ್ಯಾಲೆಂಡರ್‍ಗಳು ದೇಶದಲ್ಲಿ ಬಳಕೆಯಲ್ಲಿ ಇದ್ದವು. ಅವನ್ನೆಲ್ಲ ಸೇರಿಸಿ ರಾಷ್ಟ್ರೀಯ ಕ್ಯಾಲೆಂಡರ್ ತಯಾರಿಸಲಾಯಿತು. ಅದರಲ್ಲಿ ಮೂಲ ನಿವಾಸಿಗಳ ಸೌರಮಾನ ಲೆಕ್ಕಾಚಾರದೊಳಕ್ಕೆ ಬಂದವರ ಚಾಂದ್ರಮಾನ ಮೂಗು ತೂರಿಸಿದೆ. ಹಾಗಾಗಿ ಈಗೆಲ್ಲ ಹಿಂದೂ ಹಬ್ಬಗಳು ಎರಡೆರಡು ದಿನ ಬರುವುದು ಮಾಮೂಲೇನೋ ಎನ್ನುವಂತಾಗಿದೆ. ಇದರಿಂದ ಜನರಿಗೆ ಗೊಂದಲ ಮತ್ತು ಕೆಲವೊಮ್ಮೆ ಹೆಚ್ಚು ವೆಚ್ಚ ಆಗುತ್ತದೆ.
ನಮ್ಮ ಲೆಕ್ಕಾಚಾರಗಳಿಗೆ ಬಾಹ್ಯಾಕಾಶದ ವಿಸ್ಮಯಗಳೇ ಗುರು. ಬಾಹ್ಯಾಕಾಶದ ಒಂದು ಶೇಕಡಾ ಕೂಡ ಮುಟ್ಟಲು ನಮ್ಮಿಂದ ಸಾಧ್ಯವಾಗಿಲ್ಲ. ಆದರೂ ಲೆಕ್ಕ ಮುಂದುವರಿದಿದೆ. ರಮಜಾನ್, ರಮ್ಜಾನ್, ರಂಜಾನ್ ಎಂದೂ ಬರೆಯುತ್ತಾರೆ. ಇದರಲ್ಲಿ ರಂ ಮತ್ತು ಜಾನ್ ರಮ್ಜಾನ್ ಆದರೂ ಅದನ್ನು ರನ್ಜಾನ್ ಎಂದು ಓದುವುದು ಕೂಡ ಸಾಧ್ಯವಿದೆ. ಅಂ ಎಂಬುದು ಅಮ್ ಎಂಬುದಾಗಿದೆಯೇ ಹೊರತು ಪ್ರತ್ಯೇಕ ಸ್ವರ ಅಲ್ಲವೇ ಅಲ್ಲ. ಕನ್ನಡದ ಅಕ್ಷರವಾಗಿ ಅದರ ಬಳಕೆ ಅಗತ್ಯದ್ದಲ್ಲ ಎಂಬುದೂ ಇರುವ ವಿಚಾರವಾಗಿದೆ. ಇಂದು ಹಿಜ್ರಿ ಶಕದ ರಮದಾನ್ ತಿಂಗಳ 1ನೇ ದಿನ.
ಬರಹ: ಪೇರೂರು ಜಾರು